ಶಿರಸಿ: ಬೇಡ್ತಿ ಹಾಗೂ ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಳ್ಳುವ ಮೂಲಕ ಹಸಿರು ಪ್ರೀತಿ ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ತಮ್ಮ ಚಾತುರ್ಮಾಸ್ಯ ಅವಧಿಯಲ್ಲೂ ಪರಿಸರ ಜಾಗೃತಿ ಕಾರ್ಯ ಮುನ್ನಡೆಸುತ್ತಿದ್ದಾರೆ. ಕೇವಲ ಪ್ರವಚನಗಳಲ್ಲಿ ಮಾತ್ರ ಪರಿಸರ ಉಳಿಸಿ ಎಂದು ಹೇಳದೇ ಸ್ವತಃ ಗಿಡಗಳನ್ನೂ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶಿಷ್ಯರಿಗೆ ನೀಡುತ್ತಿದ್ದಾರೆ.
ವನಸ್ಪತಿ ಗಿಡಗಳ ಮಹತ್ವ, ಅವುಗಳ ಸಂರಕ್ಷಣೆಗೆ ಶಿಷ್ಯ, ಭಕ್ತರಲ್ಲಿ ಆಸಕ್ತಿ ಹೆಚ್ಚಿಸಲು ಸ್ವಾಮೀಜಿ ಪರಿಸರ ಸಂರಕ್ಷಣೆಯಲ್ಲಿ ವಿಶಿಷ್ಟವಾದ ವೃಕ್ಷ ಮಂತ್ರಾಕ್ಷತೆ ಕೈಂಕರ್ಯ ನಡೆಸಿದ್ದಾರೆ. ಚಾತುರ್ಮಾಸ್ಯ ಸಂಕಲ್ಪದ ಬಳಿಕ ಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುತ್ತಾರೆ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ ಗುರುಗಳು ಪವಿತ್ರ ಸಂದೇಶ ಕೂಡ ನೀಡುತ್ತಾರೆ. ಸಂದೇಶ ಪಡೆದ ಶಿಷ್ಯರು ಮಂತ್ರಾಕ್ಷತೆ ಪಡೆಯುವಾಗ ಸ್ವಾಮೀಜಿ ಅವರು ವೃಕ್ಷ ಮಂತ್ರಾಕ್ಷತೆ ನೀಡುತ್ತಾರೆ. ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡವನ್ನು ಬೆಳಸಿ ರಕ್ಷಿಸಲೂ ಅವರು ಸೂಚಿಸುತ್ತಾರೆ.
‘ಸ್ವರ್ಣವಲ್ಲೀ ಪೀಠವೇ ಪರಿಸರ ಸಂರಕ್ಷಣಾ ಪೀಠ. ಹಿಂದಿನ ಯತಿಗಳಾದ ಸರ್ವಜ್ಞೇಂದ್ರ ಸರಸ್ವತೀ ಸ್ವಾಮೀಜಿ ಪರಿಸರ ಕಾಳಜಿ ಹೊಂದಿದ್ದರು. 35 ವರ್ಷಗಳ ಹಿಂದೆ ಪೀಠಾರೋಹಿಗಳಾದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರಿಗೆ ಹಸಿರು ಎಂದರೆ ತುಂಬಾ ಕಾಳಜಿ. ಕಿರಿಯ ಯತಿ ಆನಂದಬೋಧೇಂದ್ರ ಸ್ವಾಮೀಜಿಗಳಿಗೂ ಪರಿಸರದ ಮೇಲಿನ ಒಲವು ಈಗಾಗಲೇ ವ್ಯಕ್ತವಾಗಿದೆ. ವೃಕ್ಷಾರೋಪಣ, ಸಸ್ಯ ಲೋಕ ಸೃಷ್ಟಿಯ ಜತೆಗೆ 2006ರಿಂದ ಸ್ವಾಮೀಜಿ ಅವರು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ಬಿಡದೇ ವನಸ್ಪತಿ ವೃಕ್ಷ ಕೊಟ್ಟು ಹರಸುತ್ತಿದ್ದಾರೆ’ ಎಂಬುದು ಮಠದ ಭಕ್ತರಾದ ವೇದವ್ಯಾಸ ಭಟ್ ಅಭಿಪ್ರಾಯ.
‘ಪ್ರತೀ ವರ್ಷದ ಚಾತುರ್ಮಾಸ್ಯದಲ್ಲಿ ಕನಿಷ್ಠ 5 ಸಾವಿರ ವನಸ್ಪತಿ ಗಿಡಗಳನ್ನು ನೀಡಲಾಗುತ್ತದೆ. ಈವರೆಗೆ ಅಂದಾಜು 80 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಮಂತ್ರಾಕ್ಷತೆ ರೂಪದಲ್ಲಿ ವಿತರಿಸಿದ್ದಾರೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಸೇರಿದಂತೆ ಒಳ್ಳೊಳ್ಳೆ ಜಾತಿಯ ಸಸಿಗಳನ್ನು ಮಠದ ಸಸ್ಯಲೋಕದಲ್ಲಿ ಬೆಳಸಿ, ಕಡಿಮೆ ಬಿದ್ದರೆ ಅರಣ್ಯ ಇಲಾಖೆಯಿಂದಲೂ ಪಡೆದು ಮಂತ್ರಾಕ್ಷತೆಯಾಗಿ ನೀಡಲಾಗುತ್ತಿದೆ’ ಎಂಬುದು ಮಠದ ಆಡಳಿತ ಮಂಡಳಿ ಪ್ರಮುಖರೊಬ್ಬರ ಮಾತು.
ವೃಕ್ಷ ಮಂತ್ರಾಕ್ಷತೆಯಾಗಿ ನೀಡಿದ ಗಿಡಗಳನ್ನು ಶಿಷ್ಯರು ತಮ್ಮ ಮನೆಯ ಸುತ್ತಮುತ್ತ ನೆಟ್ಟು ಬೆಳಸುತ್ತಿದ್ದಾರೆ. ಮಂತ್ರಾಕ್ಷತೆಯ ಮೂಲಕವಾದರೂ ಹಸಿರು ಹುಲುಸಾಗಿ ಬೆಳೆಯಲು ಕಾರಣವಾಗುತ್ತಿದೆ.ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.