ಶಿರಸಿ: ಆರೋಗ್ಯಪ್ರದ ನಿದ್ರೆ ಹಾಗೂ ಆಹಾರದಲ್ಲಿ ಸಾತ್ವಿಕತೆ ಅಳವಡಿಸಿಕೊಂಡರೆ ಇಹಪರಗಳ ಸಾಧನೆಗೆ ಅನುಕೂಲ ಆಗುತ್ತದೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳೀದರು.
ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಸ್ವಾಮೀಜಿ ಶುಕ್ರವಾರ ಮಂಜಗುಣಿ ಸೀಮೆಯ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವದಿಸಿದರು.
ನಿದ್ರೆಗೆ ಹೋಗುವ ಮುಂಚೆ ದೇವರ ಧ್ಯಾನವನ್ನು ಮಾಡಿಕೊಂಡು ಹೋಗಬೇಕು. ನಿದ್ರೆಗಿಂತ ಮುಂಚೆ ಟಿ.ವಿ.ಯನ್ನು ನೋಡಬಾರದು. ಸ್ವಲ್ಪ ಹೊತ್ತು ಜಪ, ಸ್ತೋತ್ರಗಳನ್ನು ಮಾಡಿ ಅದೇ ಅನುಸಂಧಾನದಲ್ಲಿ ನಿದ್ರೆಗೆ ಹೋಗಬೇಕು. ಆಗ ಸಾತ್ವಿಕ ನಿದ್ರೆಯನ್ನು ಪಡೆಯಲು ಸಾಧ್ಯ. ನಿದ್ರೆಯಿಂದ ಎದ್ದ ನಂತರ ಭೂದೇವಿಗೆ ನಮಸ್ಕರಿಸಿ, ಪ್ರಾತಃಸ್ಮರಣೆಯೊಂದಿಗೆ ಎದ್ದರೆ ಅದು ಸಾತ್ವಿಕ ನಿದ್ರೆಯಾಗುತ್ತದೆ. ಯೋಗ ಸಾಧನೆಗೆ ನಿದ್ರೆ ಬಹಳ ಮುಖ್ಯವಾದ ಸಾಧನವಾಗಿದೆ. ಯಾವ ವೇಳೆಯಲ್ಲಿ ನಿದ್ರೆ ಮಾಡಬೇಕೊ ಅದೇ ವೇಳೆಯಲ್ಲಿ ನಿದ್ರೆ, ಯಾವ ವೇಳೆಯಲ್ಲಿ ನಿದ್ರೆ ಮಾಡಬಾರದೋ ಆ ವೇಳೆಯಲ್ಲಿ ಎಚ್ಚರಿರಬೇಕು ಇವೆರಡೂ ಆರೋಗ್ಯಕ್ಕೆ ಕಾರಣವಾಗುತ್ತದೆ. ನಿದ್ರೆಯಲ್ಲಿ ಈ ರೀತಿಯಾದ ನಿಯಮಿತತನವು ಸಾತ್ವಿಕತೆಯನ್ನು ಉಂಟುಮಾಡುತ್ತದೆ ಎಂದರು.
ಹಿತವಾದ ಆಹಾರ, ಮಿತವಾದ ಆಹಾರ, ಋತವಾದ ಆಹಾರವನ್ನು ಸೇವಿಸುವವನು ಆರೋಗ್ಯವಂತ ಆಗುತ್ತಾನೆ. ಆಹಾರದಲ್ಲಿ ಮಾಡುವ ಅನೇಕ ತಪ್ಪುಗಳು ದೀರ್ಘಕಾಲದ ನಂತರ ಮಹಾರೋಗಗಳಿಗೆ ಕಾರಣವಾಗುತ್ತದೆ. ಆಹಾರದಲ್ಲಿ ಮಿತಿ ಅತ್ಯಂತ ಅವಶ್ಯಕ. ಸುಲಭವಾದ ಆರೋಗ್ಯದ ಸೂತ್ರವೆಂದರೆ ಮಿತವಾದ ಊಟ ಮಾಡಿ, ಊಟ ಆದ ನಂತರ ನೂರು ದೇವರ ನಾಮ ಜಪ ಮಾಡಿ, ನೂರು ಹೆಜ್ಜೆ ನಡೆದು, ಎಡಭಾಗ ಕೆಳಗೆ ಮಾಡಿ ಮಲಗಬೇಕು. ಇವುಗಳನ್ನು ಅನುಸರಿಸಿದರೆ ಸದಾ ಆರೋಗ್ಯ ನಮ್ಮದಾಗುತ್ತದೆ ಎಂದರು.
ಸೀಮೆಯ ಪ್ರಮುಖರು ರತ್ನಾಕರ ಭಟ್, ರಾಮಚಂದ್ರ ಹೆಗಡೆ, ಕೃಷ್ಣಮೂರ್ತಿ ಭಟ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.