ADVERTISEMENT

ಬಡತನದ ಬೇಗೆ: ಆನ್‌ಲೈನ್ ಶಿಕ್ಷಣ ಮರೀಚಿಕೆ

ನಿತ್ಯದ ತುತ್ತಿಗಾಗಿ ಕೂಲಿ ಕೆಲಸಕ್ಕೆ ಹೋಗುವ ಸಹೋದರಿಯರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 15:21 IST
Last Updated 8 ಆಗಸ್ಟ್ 2020, 15:21 IST
ಉಮಾವತಿ ಎಲ್ ಮತ್ತು ಕಲಾವತಿ ಎಲ್ ಸಹೋದರಿಯರು
ಉಮಾವತಿ ಎಲ್ ಮತ್ತು ಕಲಾವತಿ ಎಲ್ ಸಹೋದರಿಯರು   

ಶಿರಸಿ: ಶಾಲೆ–ಕಾಲೇಜು ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಶಿಕ್ಷಕರ ಪಾಠ ಕೇಳುತ್ತಿದ್ದರೆ, ಈ ಸಹೋದರಿಯರು ಅದೇ ವೇಳೆಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ದಿನದ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಾರೆ.

ಅತಿ ಹೆಚ್ಚು ಅಂಕ ಪಡೆದು, ತರಗತಿಗೆ ಪ್ರಥಮಳಾದರೂ, ಈ ವಿದ್ಯಾರ್ಥಿನಿಗೆ ಮುಂದಿನ ಶಿಕ್ಷಣದ ಕೊಂಡಿ ತಪ್ಪುತ್ತಿದೆ. ಕಡುಬಡತನವು ಈಕೆಯನ್ನು ಆನ್‌ಲೈನ್ ಶಿಕ್ಷಣ ವಂಚಿತಳನ್ನಾಗಿ ಮಾಡಿದೆ. ತಾಲ್ಲೂಕಿನ ಬನವಾಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮಾವತಿ ಎಲ್ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ಶೇ 86 ಅಂಕ ಗಳಿಸಿ ತರಗತಿಗೆ ಪ್ರಥಮ ಸ್ಥಾನ ಪಡೆದ್ದಾಳೆ. ಇದೇ ತರಗತಿಯಲ್ಲಿ ಓದುತ್ತಿರುವ ಈಕೆಯ ಸಹೋದರಿ ಕಲಾವತಿ ಎಲ್ ಶೇ 70 ಅಂಕ ಗಳಿಸಿದ್ದಾಳೆ.

‘ಸೊರಬ ತಾಲ್ಲೂಕು ಭದ್ರಾಪುರದ ಈ ಸಹೋದರಿಯರು ಸರ್ಕಾರಿ ವಸತಿ ನಿಲಯದಲ್ಲಿ ಉಳಿದು, ಕಾಲೇಜಿಗೆ ಬರುತ್ತಿದ್ದರು. ತಾಯಿಯನ್ನು ಕಳೆದುಕೊಂಡಿರುವ ಇವರಿಬ್ಬರು ತಂದೆಯ ಜೊತೆ ವಾಸವಿದ್ದಾರೆ. ನಾಲ್ವರು ಸಹೋದರಿಯರಿಗೆ ಮದುವೆಯಾಗಿದೆ. ಹಿಡಿ ಜಮೀನು ಇಲ್ಲದಿರುವುದರಿಂದ ಕುಟುಂಬ ನಿರ್ವಹಣೆಯ ಹೊಣೆಯೂ ಈ ಸಹೋದರಿಯರ ಮೇಲಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಎಚ್.ದೇವೇಂದ್ರ.

ADVERTISEMENT

‘ಈ ಸಹೋದರಿಯರು ಕ್ರೀಡೆಯಲ್ಲೂ ಮುಂದಿದ್ದಾರೆ. ಉಮಾವತಿ 1500 ಮೀ ಮತ್ತು 3000 ಮೀ ಓಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು. ಕಲಾವತಿ ಕೂಡ ಕ್ರೀಡಾಪಟು’ ಎಂದು ಅವರು ತಿಳಿಸಿದರು.

‘ಕೂಲಿಗೆ ಹೋಗುವ ನಮಗೆ ಮೊಬೈಲ್ ಖರೀದಿಸಿ ಶಿಕ್ಷಣ ಪಡೆಯುವ ಸಾಮರ್ಥ್ಯವಿಲ್ಲ. ಹೀಗಾಗಿ ನಮಗೆ ಆನ್‌ಲೈನ್ ಪಾಠಗಳು ಸಿಗುತ್ತಿಲ್ಲ’ ಎನ್ನುತ್ತಾರೆ ಸಹೋದರಿಯರು. ಈ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುವುದಿದ್ದಲ್ಲಿ ಪ್ರಾಚಾರ್ಯ(8660765959)ರನ್ನು ಸಂಪರ್ಕಿಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.