
ಶಿರಸಿ: ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಮತ್ತು ವೈಜ್ಞಾನಿಕ ಕುತೂಹಲವನ್ನು ಹೆಚ್ಚಿಸುವ ಉದ್ದೇಶದಿಂದ ಇಲ್ಲಿನ ವೆಂಕಟರಾವ್ ನಿಲೇಕಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಕಾಶ ವೀಕ್ಷಣೆ ಮತ್ತು ವಿಶ್ಲೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಕಾರ್ತಿಕ ಹೇಮಾದ್ರಿ ಅವರ ವಿಶೇಷ ಆಸಕ್ತಿ ಹಾಗೂ ಮಾರ್ಗದರ್ಶನದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ಜರುಗಿತು. ವಿಜ್ಞಾನ ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ಬಗ್ಗೆ ಕೇವಲ ಪುಸ್ತಕದ ಜ್ಞಾನ ನೀಡದೆ, ಪ್ರಾಯೋಗಿಕವಾಗಿ ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ರಾತ್ರಿ ಸಮಯದಲ್ಲಿ ಈ ಆಕಾಶ ವೀಕ್ಷಣೆಯನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಒಟ್ಟು ಮೂರು ಬೇರೆ ಬೇರೆ ಸಾಮರ್ಥ್ಯವುಳ್ಳ ಟೆಲಿಸ್ಕೋಪ್‌ಗಳನ್ನು ಬಳಸಲಾಗಿದ್ದು, ವಿದ್ಯಾರ್ಥಿಗಳು ಆಕಾಶದ ವಿವಿಧ ಗ್ರಹಗಳು ಮತ್ತು ನಕ್ಷತ್ರಗಳನ್ನು ವೀಕ್ಷಿಸಿ ಖಗೋಳದ ಬೆರಗಿಗೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಹೇಮಾದ್ರಿ ಅವರು ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ನಿರ್ವಹಣೆ ಮತ್ತು ಅದನ್ನು ಬಳಸುವ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ವಸಂತ ನಾಯಕ, ಜೀವಶಾಸ್ತ್ರ ಉಪನ್ಯಾಸಕ ದಿವಾಕರ ನಾಯ್ಕ, ಸಂಸ್ಕೃತ ಉಪನ್ಯಾಸಕ ಪ್ರಶಾಂತ ಭಟ್ ಹಾಗೂ ವಾಣಿಜ್ಯ ಉಪನ್ಯಾಸಕ ನಾಗರಾಜ ನಾಯ್ಕ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಜತೆಗೆ ಅವರ ಪಾಲಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಪಾಲ್ಗೊಂಡು ಟೆಲಿಸ್ಕೋಪ್ ಮೂಲಕ ಬಾಹ್ಯಾಕಾಶದ ವಿಸ್ಮಯಗಳನ್ನು ಕಂಡು ಆನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.