ADVERTISEMENT

ಮುಂದುವರಿದ ಬೆಟ್ಟ ಭೂಮಿ ‘ಬ’ ಖರಾಬ್ ಸಮಸ್ಯೆ: ಬೆಟ್ಟ ಬಳಕೆದಾರರ ಸಹಿ ಸಂಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:30 IST
Last Updated 12 ಡಿಸೆಂಬರ್ 2025, 5:30 IST
ಎಸ್.ಕೆ. ಭಾಗ್ವತ
ಎಸ್.ಕೆ. ಭಾಗ್ವತ   

ಶಿರಸಿ: ಬೆಟ್ಟಭೂಮಿ ಬಳಕೆಗೆ ತೊಡಕಾಗಿರುವ ಸೊಪ್ಪಿನ ಬೆಟ್ಟದ ‘ಬ’ ಖರಾಬ್ ಸಮಸ್ಯೆ ಬಗೆಹರಿಸಲು ಬೆಟ್ಟ ಬಳಕೆದಾರರಿಂದ ಸಹಿ ಸಂಗ್ರಹಿಸಲು ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ನಿರ್ಧರಿಸಿದ್ದು, ಸಂಗ್ರಹಿಸಿದ ಸಹಿ ವರದಿಯನ್ನು ಸಿಎಂಗೆ ನೀಡಿ ಸಮಸ್ಯೆ ಮುಕ್ತಿಗೆ ಒತ್ತಾಯಿಸಲು ನಿರ್ಧರಿಸಿದೆ. 

ನಗರದಲ್ಲಿ ಸಹಿ ಅಭಿಯಾನದ ಕುರಿತು ಗುರುವಾರ ಮಾಹಿತಿ ನೀಡಿದ ಟ್ರಸ್ಟ್ ಪ್ರಮುಖರಾದ ರಾಮಕೃಷ್ಣ ಹೆಗಡೆ ಕಡವೆ ಹಾಗೂ ಎಸ್.ಕೆ. ಭಾಗ್ವತ, ‘2012ರವರೆಗೂ ಸೊಪ್ಪಿನ ಬೆಟ್ಟವನ್ನು ‘ಅ’ ಖರಾಬ್ ಎಂದಾಗಲೀ, ‘ಬ’ ಖರಾಬ್ ಎಂದಾಗಲೀ ಪರಿಗಣಿಸಿರಲಿಲ್ಲ. ಆದರೆ, ಒಮ್ಮೆಲೇ ಶಿರಸಿ ಉಪವಿಭಾಗದ ಎಲ್ಲ ಸೊಪ್ಪಿನ ಬೆಟ್ಟಗಳೂ ‘ಬ’ ಖರಾಬ್ ವ್ಯಾಪ್ತಿಗೆ ಸೇರಿಸಲಾಗಿದೆ. ‘ಬ’ ಖರಾಬ್ ಎಂದರೆ ಅದು ಸಾರ್ವಜನಿಕರ ಬಳಕೆಯ ಜಾಗ ಎಂದು ಉಲ್ಲೇಖವಾಗುತ್ತದೆ. ಆದರೆ, ಬ್ರಿಟಿಷ್ ಸರ್ಕಾರದ ಅವಧಿಯಲ್ಲೇ 1923ರಲ್ಲಿ ರೈತರಿಗೆ 1 ಎಕರೆ ಕೃಷಿ ಭೂಮಿಗೆ 9 ಎಕರೆಯಂತೆ ಸೊಪ್ಪಿನ ಬೆಟ್ಟ ಭೂಮಿಯನ್ನು ಕೆನರಾ ಪ್ರಿವಿಲೇಜ್ ಆ್ಯಕ್ಟ್ ಮೂಲಕ ನೀಡಲಾಗಿದೆ. ಆದರೆ, ಅಧಿಕಾರಿಗಳು ಆಕಾರ ಬಂದ್ ಸರಿಪಡಿಸುವ ವೇಳೆ ದೋಷ ಮಾಡಿದ್ದು, ಉಪವಿಭಾಗದ ಸಂಪೂರ್ಣ ಬೆಟ್ಟಗಳು ‘ಬ’ ಖರಾಬ್ ಪಟ್ಟಿಗೆ ಸೇರ್ಪಡೆಗೊಂಡಿದೆ’ ಎಂದರು.

‘ಸೊಪ್ಪಿನ ಬೆಟ್ಟ ಎಂದಿದ್ದರೂ ರೈತರ ಆಸ್ತಿ. ಆಯಾ ಬೆಟ್ಟ ಭೂಮಿಯನ್ನು ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬಂದಿರುವ ರೈತರಿಗೆ ವಂಚನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ  ಶಿರಸಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಸೇರಿ ಉಪ ವಿಭಾಗಾಧಿಕಾರಿಗೆ ಮನವಿ ನೀಡಿದ್ದೆವು. ಬಳಿಕ ಜನಪ್ರತಿನಿಧಿಗಳಿಗೂ ಮನವಿ ಮಾಡಿಕೊಂಡಿದ್ದೆವು. ಆದಾಗ್ಯೂ ಇದುವರೆಗೂ ಯಾವುದೇ ಬದಲಾವಣೆ ಕಾಣದ ಕಾರಣ ಈಗ ಮತ್ತೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದೇವೆ. ಈ ಕುರಿತು ಪ್ರತಿ ರೈತನಿಂದಲೂ ಮನವಿ ಪತ್ರಕ್ಕೆ ಸಹಿ ಮಾಡಿಸಿ ಮುಖ್ಯಮಂತ್ರಿಗಳಿಗೆ ಸಮಸ್ಯೆ ಗಂಭೀರತೆ ಬಗ್ಗೆ ತಿಳಿಸಲಿದ್ದೇವೆ. ಡಿ. 18ರೊಳಗೆ ಸಹಿ ಸಂಗ್ರಹಿಸಿ ಸಿಎಂಗೆ ಮನವಿ ನೀಡಲಾಗುವುದು’  ಎಂದರು.

ADVERTISEMENT

‘ಸೊಪ್ಪಿನ ಬೆಟ್ಟ ಬಳಕೆದಾರ ರೈತರ ಸಮಸ್ಯೆ ಕುರಿತು ಶಾಸಕ ಭೀಮಣ್ಣ ನಾಯ್ಕ ಈಗಾಗಲೇ ಸದನದಲ್ಲಿ ಚರ್ಚೆ ನಡೆಸಿದ್ದಾರೆ. ಈ ಕುರಿತು ಸಚಿವ ಎಚ್.ಕೆ.ಪಾಟೀಲ ಅವರಿಗೂ ಮನವರಿಕೆ ಮಾಡಿದ್ದೇವೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಎಚ್.ಕೆ. ಪಾಟೀಲ ಅವರೂ ಸಹ ಮಾತನಾಡಿದ್ದಾರೆ. ಈ ಹಂತದಲ್ಲಿ ಪ್ರಯತ್ನ ನಡೆದಿರುವಾಗ ಸಮಸ್ಯೆ ಬಗೆಹರಿಸಲೇಬೇಕಿದೆ. ಹೀಗಾಗಿ, ಸಿಎಂ ಜತೆಯೂ ರೈತರ ಸಹಿ ಇರುವ ಮನವಿಯೊಂದಿಗೆ ಚರ್ಚಿಸಲು ನಿರ್ಧರಿಸಿದ್ದೇವೆ’ ಎಂದರು.

ಬೆಟ್ಟ ಭೂಮಿ ಬಳಕೆದಾರರಾದ ವಿಶ್ವನಾಥ ಹೆಗಡೆ ಪುಟ್ಟನಮನೆ, ಶ್ರೀಪಾದ ಹೆಗಡೆ ಕಡವೆ, ದಿವಾಕರ ಹೆಗಡೆ ತೊಣ್ಣೇಮನೆ, ಭರತ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.