ADVERTISEMENT

ಪದವಿ ಕಾಲೇಜು ಅವ್ಯವಸ್ಥೆಗೆ ಅಸಮಾಧಾನ: ಸ್ಪೀಕರ್ ತರಾಟೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:20 IST
Last Updated 29 ಜನವರಿ 2020, 12:20 IST
ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಲ್ಯಾಪ್‌ಟಾಪ್ ವಿತರಿಸಿದರು
ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಲ್ಯಾಪ್‌ಟಾಪ್ ವಿತರಿಸಿದರು   

ಶಿರಸಿ: ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ಭೇಟಿ ನೀಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾಲೇಜಿನ ಅಶಿಸ್ತನ್ನು ಕಂಡು, ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಲಿನಗೊಂಡಿರುವ ಕಾಲೇಜಿನ ಆವರಣ, ತರಗತಿ ಕೊಠಡಿಗಳು, ಅವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ‘ಪ್ರಾಚಾರ್ಯರು, ಪ್ರಾಧ್ಯಾಪಕರ ನಡುವೆ ಹೊಂದಾಣಿಕೆಯಿಲ್ಲ. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಹೊರ ಹೋಗಬಹುದು. ಬೋಧಕರ ನಡುವಿನ ಒಳ ಜಗಳ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಾರದು. ಇಂಥ ವಾತಾವರಣ ಸರಿ‍ಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.

ಸರ್ಕಾರದ ಸೌಲಭ್ಯ ಹಂಚಿಕೆ ಕಾರ್ಯಕ್ರಮಗಳು ಕೇವಲ ಸುತ್ತೋಲೆ ಕಾರ್ಯಕ್ರಮ ಆಗಬಾರದು. ಅವು ಕ್ರಿಯಾಶೀಲವಾಗಿ ನಡೆಯಬೇಕು. ಆದರೆ, ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮವು ‘ಸುತ್ತೋಲೆ ಕಾರ್ಯಕ್ರಮ’ ಎಂಬುದು ಸ್ಪಷ್ಟವಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಸುಧಾರಣೆಯ ಜತೆಗೆ ಶಿಕ್ಷಣ ಸಂಸ್ಥೆಯ ಏಳ್ಗೆಗೆ ಸರ್ಕಾರ ಸೌಲಭ್ಯ ಕಲ್ಪಿಸುತ್ತದೆ. ಆದರೆ, ನಿರ್ವಹಣೆಯಿಲ್ಲದೇ ಅವು ಹಾಳಾಗುವಂತಾಗಬಾರದು. ಶಿಕ್ಷಣ ಸಂಸ್ಥೆ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸರ್ಕಾರ ನೀಡಿದ ಸೌಲಭ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಜನಾರ್ದನ ಭಟ್ಟ ಪ್ರಾಸ್ತಾವಿಕ ಮಾತನಾಡಿ,’₹ 2.5 ಲಕ್ಷದೊಳಗಿನ ಆದಾಯ ಹೊಂದಿರುವ ವಿದ್ಯಾರ್ಥಿಗಳ, ಶೈಕ್ಷಣಿಕ ಸೌಲಭ್ಯಕ್ಕಾಗಿ ಸರ್ಕಾರ ಉಚಿತ ಲ್ಯಾಪ್‌ಟಾಪ್ ವಿತರಿಸುತ್ತಿದೆ’ ಎಂದರು. ನಗರಸಭೆ ಸದಸ್ಯ ಗಣಪತಿ ನಾಯ್ಕ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪರಮಾನಂದ ಹೆಗಡೆ, ಉಪಸ್ಥಿತರಿದ್ದರು. ಉಪನ್ಯಾಸಕ ಬಿ.ಕೆ.ಕೆಂಪರಾಜು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.