ADVERTISEMENT

ಆಲಿವ್ ರಿಡ್ಲೆ ತವರು ಅರಿವಿಗೆ ಬಾರದ ಬದಲು

ಮರಿಯಾಗಿ ಹೊರಬಿದ್ದ ಜಾಗಕ್ಕೆ ಮರಳುವ ಹೆಣ್ಣು ಆಮೆ

ಗಣಪತಿ ಹೆಗಡೆ
Published 23 ಫೆಬ್ರುವರಿ 2025, 0:15 IST
Last Updated 23 ಫೆಬ್ರುವರಿ 2025, 0:15 IST
ಕಾರವಾರದ ದೇವಬಾಗ ಕಡಲತೀರದಲ್ಲಿ ಕಡಲು ಸೇರುವ ಉತ್ಸುಕತೆಯಿಂದ ಸಾಗುತ್ತಿರುವ ಆಲಿವ್ ರಿಡ್ಲೆ ಮರಿಗಳು
 ಚಿತ್ರಗಳು: ಶಾನವಾಜ್ ಕಡಪಾ
ಕಾರವಾರದ ದೇವಬಾಗ ಕಡಲತೀರದಲ್ಲಿ ಕಡಲು ಸೇರುವ ಉತ್ಸುಕತೆಯಿಂದ ಸಾಗುತ್ತಿರುವ ಆಲಿವ್ ರಿಡ್ಲೆ ಮರಿಗಳು  ಚಿತ್ರಗಳು: ಶಾನವಾಜ್ ಕಡಪಾ   

ಅದು 2007–08 ಇರಬಹುದು. ಕಾರವಾರ ತಾಲ್ಲೂಕಿನ ದೇವಬಾಗದಲ್ಲಿರುವ ಕಡಲತೀರದಿಂದ ಆಲಿವ್ ರಿಡ್ಲೆ ಕಡಲಾಮೆ ಮರಿಗಳು ಯಾರ ಅಡೆತಡೆ ಇಲ್ಲದೆ ಸಮುದ್ರ ಸೇರಿದ್ದವು. ಅವುಗಳ ಪೈಕಿ ಬದುಕುಳಿದು, ದಷ್ಟಪುಷ್ಟವಾಗಿ ಬೆಳೆದ ಹೆಣ್ಣು ಆಮೆಯೊಂದು ‘ಹೆರಿಗೆ’ಗೆಂದು ತೀರಕ್ಕೆ ಬಂದರೆ ಅದರ ತವರೂರು ಸಂಪೂರ್ಣ ಬದಲಾಗಿತ್ತು. ಸ್ವಚ್ಛಂದವಾಗಿದ್ದ ಕಡಲತೀರ ಈಗ ಕೊರೆದು ಹೋಗಿದೆ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ರಾಶಿ, ದೋಣಿಗಳ ಸಾಲು, ಹರಡಿಕೊಂಡ ಬಲೆಗಳು, ಕಡಲತೀರವನ್ನೇ ನುಂಗಿದಂತೆ ಎದ್ದು ನಿಂತ ತಡೆಗೋಡೆಗಳು!

ಇಂಥ ಬದಲಾವಣೆಗಳಿಂದ ಗಲಿಬಿಲಿಗೊಂಡ ಆಲಿವ್ ರಿಡ್ಲೆ ಆಮೆಯು ಪ್ರಸವ ವೇದನೆ ತಾಳಲಾರದೆ ಅಕ್ಕಪಕ್ಕದಲ್ಲೆಲ್ಲ ಸುರಕ್ಷಿತ ಜಾಗ ಅರಸುತ್ತ ಹೊರಟಿತು. ಕೊನೆಗೆ ದೋಣಿ ಸಾಲುಗಳ ಮಧ್ಯದಲ್ಲೇ, ಜನರ ಓಡಾಟ ಇಲ್ಲದ ಜಾಗ ಗುರುತಿಸಿ ಮರಳಿನಲ್ಲಿ ಗುಂಡಿ ತೆಗೆದು ಮೊಟ್ಟೆ ಇಟ್ಟು ಮತ್ತೆ ಕಡಲು ಸೇರಿತು. ತಾನಿಟ್ಟ ಮೊಟ್ಟೆಗಳ ಅಡಿಯಲ್ಲಿ ಪ್ಲಾಸ್ಟಿಕ್ ಹಾಳೆ ಚಾಚಿಕೊಂಡಿದ್ದನ್ನು ಅದು ಗಮನಿಸಿಯೇ ಇರಲಿಲ್ಲ.

ಇದು ಆಲಿವ್ ರಿಡ್ಲೆ ಕಡಲಾಮೆಗಳ ಸುರಕ್ಷಿತ ‘ಹೆರಿಗೆ ತಾಣ’ ಒಂದೂವರೆ ದಶಕದಿಂದೀಚೆಗೆ ಬದಲಾದ ಭೀಕರ ಚಿತ್ರಣದ ಒಂದು ಉದಾಹರಣೆಯಷ್ಟೆ. ಇಂತಹ ಹತ್ತಾರು ಉದಾಹರಣೆಗಳು ಕರಾವಳಿ ತೀರದುದ್ದಕ್ಕೂ ಸಿಗುತ್ತಲೇ ಇರುತ್ತವೆ. ಅಭಿವೃದ್ಧಿಯ ನೆಪದಲ್ಲಿ ಮನುಷ್ಯ ಕಡಲತೀರದ ಚಿತ್ರಣ ಬದಲಿಸಿದ ಪರಿ, ಆಳ ಸಮುದ್ರದಲ್ಲಿ ಜೀವನ ಕಳೆಯುವ ಕಡಲಾಮೆಗಳ ಅರಿವಿಗೆ ಬರುವುದೇ ಇಲ್ಲ.

ADVERTISEMENT

ಅದರಲ್ಲಿಯೂ ಮೊಟ್ಟೆಯೊಡೆದ ಬಳಿಕ ಒಮ್ಮೆ ನೀರಿಗೆ ಇಳಿದರೆ ಜೀವಮಾನದಲ್ಲೆಂದೂ ಕಡಲತೀರವನ್ನು ಕಣ್ಣೆತ್ತಿಯೂ ನೋಡದ ಗಂಡು ಆಲಿವ್ ರಿಡ್ಲೆಗೆ ಬದಲಾವಣೆ ಆತಂಕ ಮೂಡಿಸದು. ಆದರೆ, ಹೆಣ್ಣು ಆಮೆಯ ಸ್ಥಿತಿಯೇ ಬೇರೆ. ಮೊಟ್ಟೆ ಇಡಲು ಅವು ಅನುಭವಿಸುವ  ವೇದನೆ ಅಷ್ಟಿಷ್ಟಲ್ಲ. ಸಂತಾನವೃದ್ಧಿಗೆ ವರ್ಷಕ್ಕೊಮ್ಮೆಯೋ ಅಥವಾ ಕೆಲವೊಮ್ಮೆ ಎರಡು, ಮೂರು ಬಾರಿ ಕಡಲತೀರಕ್ಕೆ ಧಾವಿಸಿ, ರಾಶಿಗಟ್ಟಲೆ ಮೊಟ್ಟೆ ಇಟ್ಟು ಮರಳಿ ಸಮುದ್ರ ಸೇರಿಬಿಡುತ್ತವೆ. ಇಟ್ಟ ಮೊಟ್ಟೆಗಳತ್ತ ಮತ್ತೆಂದೂ ಅವು ಕಣ್ಣು ಹಾಯಿಸುವುದಿಲ್ಲ.‌

ರಾಜ್ಯದಲ್ಲೇ ಮೊದಲು

ಮರಳಿನಲ್ಲಿ ಹುದುಗಿಕೊಂಡಿದ್ದ ಮೊಟ್ಟೆಗಳಿಗೆ ಅವುಗಳ ತಂದೆ–ತಾಯಿ ಆರೈಕೆ ಸಿಗದು. ಆದರೆ, ಈಚಿನ ವರ್ಷಗಳಲ್ಲಿ ಮೊಟ್ಟೆ ಆರೈಕೆಗೆ ಅರಣ್ಯ ಇಲಾಖೆ ‘ಕೋಸ್ಟಲ್ ಮರೈನ್ ವಿಭಾಗ’ ರಚಿಸಿದೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಕಾರವಾರದಲ್ಲಿ ಈ ವಿಭಾಗ ಆರಂಭಗೊಂಡಿದೆ. ನಾಲ್ಕು ವರ್ಷಗಳಿಂದ ಆಲಿವ್ ರಿಡ್ಲೆ ಮೊಟ್ಟೆಗಳಿಗೆ ಪಾಲಕರಂತೆ ಈ ವಿಭಾಗ ಕೆಲಸ ಮಾಡುತ್ತಿದೆ. ಉತ್ತರ ಕನ್ನಡದ ಹೊನ್ನಾವರ ಭಾಗದಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸ್ಥಳೀಯರೇ ಹಲವು ವರ್ಷದಿಂದ ಜತನದಿಂದ ಕಾಪಿಡುವ, ಮರಿಗಳನ್ನು ಸಮುದ್ರಕ್ಕೆ ಬಿಡುವ ಕೆಲಸ ಮಾಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಟೊಂಕ, ಪಾವಿನಕುರ್ವಾ, ಮಂಕಿ, ಕುಮಟಾ ತಾಲ್ಲೂಕಿನ ಸಸಿಹಿತ್ತಲ, ಅಂಕೋಲಾ ತಾಲ್ಲೂಕಿನ ಮಂಜಗುಣಿ, ಭಾವಿಕೇರಿ, ಕೇಣಿ, ಕಾರವಾರ ತಾಲ್ಲೂಕಿನ ಮುದಗಾ, ದೇವಬಾಗ, ಬಾವಳ, ಮಾಜಾಳಿ.. ಹೀಗೆ ಹಲವು ಕಡೆಗಳಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳ ಹೆರಿಗೆ ತಾಣವಿದೆ. ಕಾರವಾರದಲ್ಲಿರುವ ನೌಕಾನೆಲೆ ವ್ಯಾಪ್ತಿಯ ಕೆಲವು ಕಡೆಗಳಲ್ಲಿಯೂ ಆಲಿವ್‌ ರಿಡ್ಲೆ ಮೊಟ್ಟೆ ಇಡುತ್ತಿವೆ.

‘ಕಡಲಾಮೆಗಳ ಪೈಕಿ ಆಲಿವ್ ರಿಡ್ಲೆ ಪ್ರಭೇದದ ಆಮೆಗಳು ಮಾತ್ರ ಕಡಲತೀರಕ್ಕೆ ಬಂದು ಸುರಕ್ಷಿತ ಜಾಗ ಹುಡುಕಿ ಮೊಟ್ಟೆ ಇಡುತ್ತವೆ. ಸಮುದ್ರದಲ್ಲಿ ಸಾವಿರಾರು ಕಿ.ಮೀ ದೂರ ಕ್ರಮಿಸುವ ಅವು ಪ್ರೌಢಾವಸ್ಥೆಗೆ ತಲುಪಿದ ಬಳಿಕ ಮರಿಯಾಗಿ ಹೊರಬಿದ್ದ ಸ್ಥಳಕ್ಕೇ ಬಂದು ಮೊಟ್ಟೆ ಇಡುವುದು ವಿಶೇಷ! ಒಂದು ಕಾಲದಲ್ಲಿ ಹೊನ್ನಾವರದ ಟೊಂಕ ಪ್ರದೇಶದಿಂದ ಹೊರಬಿದ್ದ ಮರಿಗಳು ಈಗ ಅಲ್ಲಿಗೆ ಬಂದು ಮೊಟ್ಟೆ ಇಡಲು ಜಾಗ ಹುಡುಕುತ್ತಿವೆ. ಬಂದರು ಯೋಜನೆಗೆ ನಿರ್ಮಿಸಿದ ರಸ್ತೆ, ಇನ್ನಿತರ ಅಭಿವೃದ್ಧಿ ಚಟುವಟಿಕೆಯಿಂದ ಅವುಗಳು ಹೆರಿಗೆ ತಾಣವನ್ನೇ ಕಳೆದುಕೊಂಡಿವೆ’ ಎನ್ನುತ್ತಾರೆ ಹೊನ್ನಾವರ ಫೌಂಡೇಶನ್ ಸದಸ್ಯ ಎನ್.ಎಂ.ಗುರುಪ್ರಸಾದ್. 

‘ಕಡಲಾಮೆಗಳು ಮೊಟ್ಟೆ ಇಡಲು ಸಡಿಲವಾದ ಮರಳಿರುವ ಪ್ರದೇಶ ಹುಡುಕುತ್ತವೆ. ಅಳಿವೆ ಪ್ರದೇಶ ಹೆಚ್ಚಿರುವ ಉತ್ತರ ಕನ್ನಡದ ಕಡಲತೀರಗಳು ಕಡಲಾಮೆಗೆ ಮೊಟ್ಟೆ ಇಡಲು ಸುರಕ್ಷಿತ ತಾಣ ಎನಿಸಿವೆ. ಹೀಗಾಗಿಯೇ ಹೊನ್ನಾವರದಿಂದ ಕಾರವಾರದವರೆಗೆ ಕಡಲಾಮೆಗಳು ಮೊಟ್ಟೆ ಇಡುತ್ತಿರುವ ಪ್ರಮಾಣ ಈಚಿನ ವರ್ಷದಲ್ಲಿ ಹೆಚ್ಚುತ್ತಿದೆ’ ಎಂದು ಕಾರವಾರದ ಸಾಗರ ವಿಜ್ಞಾನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಶೋಧನಾರ್ಥಿ ಶಾನವಾಜ್ ರಫೀಕ ಕಡಪಾ ಹೇಳುತ್ತಾರೆ.

ನವೆಂಬರ್ ತಿಂಗಳಿನ ಕೊನೆಯಲ್ಲಿ ಆರಂಭವಾಗುವ ಆಲಿವ್‌ ರಿಡ್ಲೆ ಹೆರಿಗೆಯು ಏಪ್ರಿಲ್‍ವರೆಗೂ ಸಾಗುತ್ತದೆ. ಕಡಲಾಮೆಯೊಂದು ಕನಿಷ್ಠ 50 ರಿಂದ ಗರಿಷ್ಠ 170 ಮೊಟ್ಟೆಗಳನ್ನು ಏಕಕಾಲಕ್ಕೆ ಇರಿಸುತ್ತದೆ. ಹೀಗೆ ಮೊಟ್ಟೆ ಇಡುವ ಮುನ್ನ ಕಡಲತೀರದಲ್ಲಿ ಎರಡು ಅಡಿಯಷ್ಟು ಆಳದ ಗುಂಡಿ ತೆಗೆಯುತ್ತದೆ. ಮೊಟ್ಟೆಗಳ ಮೇಲೆ ಮರಳು ಬಾಚಿಟ್ಟು ಹೋಗುತ್ತದೆ. ಜನ, ಪ್ರಾಣಿಗಳ ದಿಕ್ಕು ತಪ್ಪಿಸಲು ಅಕ್ಕಪಕ್ಕದಲ್ಲಿ ಎರಡು ಅಥವಾ ಮೂರು ಗುಂಡಿಗಳನ್ನು ನಿರ್ಮಿಸಿ, ಸಮುದ್ರ ಸೇರುತ್ತವೆ.

‘ಕಡಲಾಮೆಗಳು ಬೆಳಕಿನೆಡೆಗೆ ಆಕರ್ಷಿತಗೊಳ್ಳುತ್ತವೆ. ಬೆಳಕು ಕಂಡ ಕಡೆಗೆ ಅವು ಸಾಗುತ್ತವೆ. ಈಚಿನ ವರ್ಷಗಳಲ್ಲಿ ಬೆಳಕಿನ ಮೀನುಗಾರಿಕೆ ಹೆಚ್ಚಿರುವುದರಿಂದ ಅವು ಬಲೆಗಳಿಗೆ ಸಿಕ್ಕಿ ಸಾಯುವುದು ಹೆಚ್ಚುತ್ತಿದೆ. ಸಮುದ್ರ ಸೇರುವ ಸಾವಿರ ಮರಿಗಳ ಪೈಕಿ ಕೆಲವು ಮಾತ್ರ ಬದುಕುಳಿಯುತ್ತವೆ ಎಂಬುದಾಗಿ ಅಧ್ಯಯನ ವರದಿಗಳು ಹೇಳುತ್ತವೆ. ಮೊಟ್ಟೆ ಇಡಲು ತಾಯಿ ಕಷ್ಟಪಟ್ಟರೆ, ಜೀವ ತಳೆದು ಸಮುದ್ರ ಸೇರುವ ಮರಿಗಳು ಬದುಕಲು ಹೆಣಗಾಡುತ್ತವೆ. ಈ ಕಾರಣಕ್ಕಾಗಿ ಆಲಿವ್ ರಿಡ್ಲೆ ಸಂತತಿ ಉಳಿಸಲು ಕಾಳಜಿ ವಹಿಸಬೇಕು’ ಎಂದು ಕಾರವಾರದ ಸಾಗರ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ ಹೇಳುತ್ತಾರೆ.

ಅಭಿವೃದ್ಧಿ ಎನ್ನುವುದು ಪ್ರಾಣಿ ಸಂಕುಲಕ್ಕೆ ದುಬಾರಿಯಾಗಬಾರದು. ಅವುಗಳಿಗೂ ಬದುಕುವ, ಸಂತಾನ ವೃದ್ಧಿಸಲು ಅವಕಾಶ ಕೊಡಬೇಕು. ಇದು ಮನುಷ್ಯರ ಜವಾಬ್ದಾರಿಯೂ ಹೌದು.

ಮೊಟ್ಟೆ ಮಾಹಿತಿ ಕೊಟ್ಟವರಿಗೆ ಬಹುಮಾನ

‘ಆಲಿವ್ ರಿಡ್ಲೆ ಕಡಲಾಮೆಗಳು ರಾತ್ರಿ ವೇಳೆ ಮೊಟ್ಟೆ ಇಡುವುದು ಹೆಚ್ಚು. ಬೀದಿನಾಯಿಗಳು, ನರಿಗಳು ಮೊಟ್ಟೆಗಳನ್ನು ತಿನ್ನುವ ಅಪಾಯ ಇದ್ದೇ ಇರುತ್ತದೆ. ಹೀಗಾಗಿ ಆಮೆಗಳು ಮೊಟ್ಟೆ ಇಡುವ ನವೆಂಬರ್‌ನಿಂದ ಏಪ್ರಿಲ್‍ವರೆಗೆ ರಾತ್ರಿ ಗಸ್ತು ಹೆಚ್ಚಿಸುತ್ತೇವೆ. ಮೊಟ್ಟೆ ಇಟ್ಟ ಬಗ್ಗೆ ಈಚಿನ ವರ್ಷಗಳಲ್ಲಿ ಮೀನುಗಾರರು ಮಾಹಿತಿ ನೀಡುವ ಪ್ರಮಾಣವೂ ಹೆಚ್ಚಿದೆ. ಮಾಹಿತಿ ನೀಡುವವರಿಗೆ ₹1,000 ಬಹುಮಾನ ನೀಡುತ್ತೇವೆ’ ಎಂದು ಕಾರವಾರದ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ ಕಿರಣ್ ಮನವಾಚಾರಿ ಹೇಳುತ್ತಾರೆ.

‘ಪ್ರತಿ ಆಮೆ ಇಟ್ಟ ಮೊಟ್ಟೆಗಳನ್ನು ಪ್ರತ್ಯೇಕ ಗೂಡುಗಳಲ್ಲಿ ಸಂರಕ್ಷಣೆ ಮಾಡಲಾಗುತ್ತದೆ. ಕಡಲತೀರದಲ್ಲೇ ಬೇಲಿ ಕಟ್ಟಿ ಅವುಗಳ ನಡುವೆ ಮರಳಿನಲ್ಲೇ ಮೊಟ್ಟೆಗಳನ್ನಿಡುತ್ತೇವೆ. ಸರಾಸರಿ 45 ದಿನಗಳ ಬಳಿಕ ಮರಿಗಳು ಹೊರಬಂದ ಕೂಡಲೇ ಅವುಗಳನ್ನು ಸಮುದ್ರಕ್ಕೆ ಬಿಡುತ್ತೇವೆ. ಆ ವೇಳೆ ಸ್ಥಳೀಯರು, ವಿದ್ಯಾರ್ಥಿಗಳನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ಬಿಡುತ್ತೇವೆ. ಮರಿಗಳನ್ನು ಬಿಡುವ ವೇಳೆ ಜನರು ಸಂತಸದೊಂದಿಗೆ ಭಾವುಕರೂ ಆಗುತ್ತಾರೆ. ಅವುಗಳ ಮಹತ್ವ ಅರಿತಿದ್ದರಿಂದ ಈಚಿನ ವರ್ಷದಲ್ಲಿ ಕಡಲಾಮೆಯ ಸಂರಕ್ಷಣೆ ಜಾಗೃತಿ ಹೆಚ್ಚಿದೆ’ ಎಂದು ವಿವರಿಸುತ್ತಾರೆ.

‘ಕಡಲಾಮೆ ಸಂತತಿ ಹೆಚ್ಚಿದರೆ ಸಮುದ್ರದಲ್ಲಿ ಮೀನುಗಳಿಗೆ ಕಂಟಕವಾದ ಜೆಲ್ಲಿ ಫಿಶ್ ಅನ್ನು ನುಂಗುತ್ತವೆ. ಇದರಿಂದ ಮೀನುಗಾರರಿಗೆ ಮತ್ಸ್ಯ ಸಂಪತ್ತು ಹೆಚ್ಚು ಸಿಗುತ್ತದೆ. ಹೀಗಾಗಿ ಕಡಲಾಮೆ ಉಳಿಸಲು ಕೈಜೋಡಿಸುತ್ತೇವೆ’ ಎಂದು ಮೀನುಗಾರ ದೇವರಾಯ ಸೈಲ್ ಹೇಳುತ್ತಾರೆ.

ಕಡಲತೀರದಲ್ಲಿ ಗುಂಡಿ ತೆಗೆದು ಮೊಟ್ಟೆ ಇಡುತ್ತಿರುವ ಆಲಿವ್ ರಿಡ್ಲೆ ಕಡಲಾಮೆ
ಕಡಲತೀರದಲ್ಲಿ ರಾತ್ರಿ ವೇಳೆ ಮೊಟ್ಟೆ ಇಡುತ್ತಿರುವ ಆಲಿವ್ ರಿಡ್ಲೆ ಕಡಲಾಮೆ
ಮೊಟ್ಟೆಯೊಡೆದು ಹೊರಬಂದಿರುವ ಆಲಿವ್ ರಿಡ್ಲೆ ಕಡಲಾಮೆ ಮರಿಗಳ ಗುಂಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.