ಮುಂಡಗೋಡ: ತಾಲ್ಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾಂಗಣವಾಗಲಿ, ಕ್ರೀಡಾಂಗಣ ನಿರ್ಮಾಣಕ್ಕೆ ಜಾಗವಾಗಲಿ ಇಲ್ಲದಿರುವುದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಕ್ರೀಡಾಂಗಣಕ್ಕೆ ಸೂಕ್ತ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ತಳವಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿಯೇ ಮಳಗಿ ಪಂಚಾಯಿತಿಯು ದೊಡ್ಡ ಪಂಚಾಯಿತಿಯಾಗಿದೆ. ಇಲ್ಲಿ ಅನೇಕ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ, ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಪಬ್ಲಿಕ್ ಶಾಲೆ ಸಹಿತ ಪದವಿ ಪೂರ್ವ ಕಾಲೇಜು ಇದೆ. ನೂರಾರು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಆದರೆ, ಶಾಲಾ ಕ್ರೀಡಾಕೂಟಗಳು, ದಸರಾ ಕ್ರೀಡಾಕೂಟಗಳು ನಡೆಸಲು ಸೂಕ್ತ ಮೈದಾನಗಳಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೊಟ್ಟ ಮಟ್ಟದಲ್ಲಿ ಆಯೋಜಿಸಲು ಸೂಕ್ತ ಜಾಗವಿಲ್ಲ. ಒಳಾಂಗಣ ಅಥವಾ ಹೋರಾಂಗಣ ಕ್ರೀಡೆಗಳನ್ನು ಆಡಲು ಕ್ರೀಡಾಂಗಣ ಇಲ್ಲವಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.
ಕ್ರೀಡೆಗಳಿಂದ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಕ್ರೀಡಾಪಟುಗಳು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಗಾಂವಠಾಣಾ ಜಾಗೆಯನ್ನು ಕ್ರೀಡಾಂಗಣಕ್ಕೆ ಮೀಸಲಿಡಬೇಕು. ಕ್ರೀಡಾಂಗಣ ಜಾಗದ ಕುರಿತು ವಿಶೇಷ ಗ್ರಾಮ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಮರಾಠೆ, ರಕ್ಷಿತ, ಪ್ರಜ್ವಲ ಕುಲಕರ್ಣಿ, ಗುಲ್ಜಾರ ಸಂಗೂರ, ಮುಜಾಫರ ದೇವಗಿರಿ, ಪ್ರದೀಪ, ಮಂಜು ಹಾನಗಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.