ADVERTISEMENT

ಒಂದೆಡೆ ಸಂತಸ, ಮತ್ತೊಂದೆಡೆ ನಿರಾಸೆ!

ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಹಲವು ಯೋಜನೆಗಳು: ನಿರೀಕ್ಷಿಸಿದ್ದ ಘೋಷಣೆಗಳಿಲ್ಲದ ಬೇಸರ

ಸದಾಶಿವ ಎಂ.ಎಸ್‌.
Published 4 ಮಾರ್ಚ್ 2022, 15:31 IST
Last Updated 4 ಮಾರ್ಚ್ 2022, 15:31 IST

ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌, ಉತ್ತರ ಕನ್ನಡ ಜಿಲ್ಲೆಯ ಒಂದು ಭಾಗಕ್ಕೆ ಒಂದಷ್ಟು ಸಂತಸ, ಮತ್ತೊಂದು ಭಾಗಕ್ಕೆ ನಿರಾಸೆ ತಂದಿದೆ. ಕಾರವಾರದಲ್ಲಿ ಬಂದರು ಗುಮ್ಮ ಮತ್ತೆ ತಲೆಯೆತ್ತಿದೆ. ಅದರೊಂದಿಗೆ, ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆಯನ್ನು ನಗರ ಹೊಂದಲಿದೆ.

ಎರಡು ವರ್ಷಗಳಿಂದ ನಗರದ ಮೀನುಗಾರರ ನಿದ್ದೆಗೆಡಿಸಿರುವ, ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನವನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ₹ 1,880 ಕೋಟಿ ಅಂದಾಜು ವೆಚ್ಚದಲ್ಲಿ 24 ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಇದು ಮೀನುಗಾರ ಮುಖಂಡರ ಮತ್ತಷ್ಟು ಆಕ್ಷೇಪಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ್, ‘ಕಾರವಾರ ವಾಣಿಜ್ಯ ಬಂದರು ವಿಸ್ತರಣೆಯನ್ನು ಈ ಹಿಂದಿನಿಂದಲೂ ವಿರೋಧಿಸುತ್ತಿದ್ದೇವೆ. ಮುಂದೆಯೂ ವಿರೋಧಿಸುತ್ತೇವೆ. ಮೀನುಗಾರರ ಬದುಕು ನಾಶ ಮಾಡುವ ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಮಾಜಾಳಿಯಲ್ಲಿ ‘ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ’ಯಡಿ ₹ 250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ ನೀಡಲು ‘ಮತ್ಸ್ಯಸಿರಿ’ ಯೋಜನೆ, ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆಯನ್ನು ಸ್ಥಾಪನೆ ಪ್ರಸ್ತಾವವನ್ನು ಮೀನುಗಾರ ಸಮುದಾಯದ ಮುಖಂಡರು ಸ್ವಾಗತಿಸಿದ್ದಾರೆ.

ಉಳಿದಂತೆ, ಕಡಲತೀರದ ಪ್ರವಾಸೋದ್ಯಮ ಉತ್ತೇಜನಕ್ಕೆ ಸಿ.ಆರ್.ಝೆಡ್ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಹಾಗೂ ಅನುಮೋದನೆ ಪಡೆಯಲು ಪ್ರಯತ್ನದ ಬಗ್ಗೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರಿಂದ ಕರಾವಳಿ ಭಾಗಕ್ಕೆ ಪ್ರಯೋಜನವಾಗಲಿದೆ.

ಕರಾವಳಿ ಭಾಗದ ಜಲಮೂಲಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿವಾರಣೆಗೆ ₹ 840 ಕೋಟಿ ವೆಚ್ಚದ ಯೋಜನೆಯನ್ನೂ ಬಸವರಾಜ ಬೊಮ್ಮಾಯಿ ಉಲ್ಲೇಖಿಸಿದ್ದಾರೆ. ಇದರಿಂದಲೂ ಪರಿಸರ ಸಂರಕ್ಷಣೆಗೆ ಸಹಾಯವಾಗಬಹುದು ಎಂದು ಅಂದಾಜಿಸಲಾಗಿದೆ.

ಕಾಳಿ ನೀರು ಯೋಜನೆಗೆ ಆಕ್ಷೇಪ:

ದಾಂಡೇಲಿ: ಕಾಳಿ ನದಿಯ ನೀರನ್ನು ಬಳಸಿಕೊಂಡು, ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆ ರೂಪಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದು ದಾಂಡೇಲಿ, ಜೊಯಿಡಾ ಮತ್ತು ಕಾರವಾರ ತಾಲ್ಲೂಕುಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಪೂರೈಕೆ ಮಾಡುವ ಯೋಜನೆಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ’ ಎಂದು ತಾಲ್ಲೂಕು ರಚನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಷನ್ ನೇತ್ರಾವಳಿ ಪ್ರತಿಕ್ರಿಯಿಸಿದ್ದಾರೆ.

‘ಇಂತಹ ಪರಿಸರ ಸಂಬಂಧಿತ ಯೋಜನೆಗಳನ್ನು ತಯಾರಿಸುವಾಗ ಸ್ಥಳೀಯ ಜೀವ ವೈವಿಧ್ಯವನ್ನು, ಸ್ಥಳೀಯ ಪರಿಸರ ರಚನೆಯ ಬಗ್ಗೆ ಗಮನಿಸಬೇಕು. ಯೋಜನೆಯ ಸಾಧಕ– ಬಾಧಕಗಳ ಕುರಿತು ತಜ್ಞರೊಂದಿಗೆ ಚರ್ಚಿಸಬೇಕು. ನದಿ ನೀರಿನ ಹರಿವು, ಜಲಾನಯನ ಪ್ರದೇಶ ಹಾಗೂ ಧಾರಣಾ ಸಾಮರ್ಥ್ಯದ ಸಮಗ್ರ ಅಧ್ಯಯನ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಗೆ ಘೋಷಣೆಯಾಗಿದ್ದು:

* ತದಡಿ ಬಂದರಿನಲ್ಲಿ ಸಮಗ್ರ ಪರಿಸರ– ‍ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ

* ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳಿಗೆ ‘ಮತ್ಸ್ಯ ಸಿರಿ’ ಯೋಜನೆಯಡಿ ನೆರವು

* ಜಿಲ್ಲೆಯಲ್ಲಿ ಶ್ರೀ ನಾರಾಯಣ ಗುರು ವಸತಿಯುತ ಶಾಲೆ ಸ್ಥಾಪನೆ

* ಸಾಗರಮಾಲಾ ಯೋಜನೆಯಡಿ ₹ 1,880 ಕೋಟಿ ಅಂದಾಜು ವೆಚ್ಚದಲ್ಲಿ 24 ಯೋಜನೆಗಳ ಅನುಷ್ಠಾನ, ಕಾರವಾರ ಬಂದರು ವಿಸ್ತರಣೆ

* ಮಾಜಾಳಿಯಲ್ಲಿ ₹ 250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು.

* ಕೇಣಿ– ಬೇಲೆಕೇರಿಯಲ್ಲಿ ‘ಗ್ರೀನ್‌ಫೀಲ್ಡ್ ಬಂದರು’ ಅಭಿವೃದ್ಧಿ

* ಕಾರವಾರದಲ್ಲಿ ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪನೆ

* ಮೀನುಗಾರರಿಗೆ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮನೆಗಳ ನಿರ್ಮಾಣ

–––––

* ಬಜೆಟ್‌ನಲ್ಲಿ ನನ್ನ ಕ್ಷೇತ್ರಕ್ಕೆ ಹೆಚ್ಚು ಯೋಜನೆಗಳು, ಅನುದಾನ ನೀಡಿದ ಬಗ್ಗೆ ಅತೀವ ಸಂತಸವಾಗಿದೆ. ನನ್ನ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗೆ ಕೃತಜ್ಞತೆಗಳು.

– ರೂಪಾಲಿ ಎಸ್.ನಾಯ್ಕ, ಶಾಸಕಿ

* ಮೀನುಗಾರಿಕೆ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್, ಮೀನುಗಾರಿಕೆ ನಿಷೇಧದ ಸಮಯದಲ್ಲಿ ಮೀನು ಹೊರುವ ಮಹಿಳೆಯರಿಗೆ ತಲಾ ₹ 10 ಸಾವಿರ ಪರಿಹಾರ ಧನ ಘೋಷಿಸಬೇಕಿತ್ತು.

– ರಾಜು ತಾಂಡೇಲ್, ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟ

* ಉತ್ತರ ಕರ್ನಾಟಕಕ್ಕೆ ಕಾಳಿ ನದಿ ನೀರು ಹರಿಸುವ ಯೋಜನೆ ಜಾರಿಗೆ ಮುಂದಾದರೆ ಧರಣಿ, ಉಪವಾಸ ಸತ್ಯಾಗ್ರಹ ಹಾಗೂ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ.

– ರೋಷನ್ ನೇತ್ರಾವಳಿ, ಪ್ರಧಾನ ಕಾರ್ಯದರ್ಶಿ ದಾಂಡೇಲಿ ತಾಲ್ಲೂಕು ರಚನಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.