ADVERTISEMENT

ಕುಮಟಾ ಐ.ಟಿ.ಐ ಕಾಲೇಜಿನ ಸ್ವಂತ ಜಾಗದ ಕನಸು ನನಸು: 4 ಎಕರೆ ಮಂಜೂರು ಮಾಡಿಸಿದ ಶಾಸಕ

ಕುಮಟಾ ಐ.ಟಿ.ಐ ಕಾಲೇಜಿಗೆ 4 ಎಕರೆ ಮಂಜೂರು ಮಾಡಿಸಿದ ಶಾಸಕ ದಿನಕರ ಶೆಟ್ಟಿ

ಸದಾಶಿವ ಎಂ.ಎಸ್‌.
Published 18 ಫೆಬ್ರುವರಿ 2021, 19:30 IST
Last Updated 18 ಫೆಬ್ರುವರಿ 2021, 19:30 IST
ಕುಮಟಾದಲ್ಲಿ ಐ.ಟಿ.ಐ ಕಾಲೇಜಿಗೆ ಮಂಜೂರಾದ ಜಾಗದ ಒಂದು ಭಾಗ
ಕುಮಟಾದಲ್ಲಿ ಐ.ಟಿ.ಐ ಕಾಲೇಜಿಗೆ ಮಂಜೂರಾದ ಜಾಗದ ಒಂದು ಭಾಗ   

ಕಾರವಾರ: ಕುಮಟಾದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಕೃಷಿ ಇಲಾಖೆಯ ನಾಲ್ಕು ಎಕರೆ ಜಮೀನನ್ನು ಮಂಜೂರು ಮಾಡಿದೆ. ಈ ಮೂಲಕ ಐ.ಟಿ.ಐ ಕಾಲೇಜಿಗೆ ಸ್ವಂತ ಕಟ್ಟಡ ಹೊಂದುವ ಕನಸು ನನಸಾಗುವ ಹಂತಕ್ಕೆ ತಲುಪಿದೆ.

ಪಟ್ಟಣದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕೈಗಾರಿಕಾ ಪ್ರದೇಶದ ಖಾಸಗಿ ಕಟ್ಟಡದರಲ್ಲಿ2014ರಲ್ಲಿ ಕಾಲೇಜನ್ನು ಆರಂಭಿಸಲಾಯಿತು. ಪ್ರಸ್ತುತ 100 ವಿದ್ಯಾರ್ಥಿಗಳಿದ್ದು, ಕಟ್ಟಡಕ್ಕೆ ತಿಂಗಳಿಗೆ ₹ 90 ಸಾವಿರ ಬಾಡಿಗೆ ಪಾವತಿಸಲಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ ಹುಡುಕಾಟ ನಡೆಸಲಾಗುತ್ತಿತ್ತು.

ಈ ನಡುವೆ, 2018–19ರಲ್ಲಿ ದೇವಗಿರಿ ಗ್ರಾಮ ಪಂಚಾಯಿತಿಯ ಹರ‍ನೀರು ಎಂಬಲ್ಲಿ 2 ಎಕರೆ 20 ಗುಂಟೆ ಜಾಗವನ್ನು ಕಾಲೇಜಿನ ಕಟ್ಟಡಕ್ಕೆಂದು ಗುರುತಿಸಲಾಗಿತ್ತು. ಅದಕ್ಕಾಗಿ ₹ 2.5 ಕೋಟಿ ಅನುದಾನವನ್ನೂ ಮಂಜೂರು ಮಾಡಿ, ಬೆಂಗಳೂರಿನ ಸಂಸ್ಥೆಯೊಂದಕ್ಕೆ ಟೆಂಡರ್‌ ಕೂಡ ಕೊಡಲಾಗಿತ್ತು. ಪಟ್ಟಣದಿಂದ 9.5 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಯಾವುದೇ ಸೌಕರ್ಯಗಳಿಲ್ಲ. ಗುಡ್ಡದ ತುದಿಯಲ್ಲಿ, ಕಾಡಿನ ನಡುವೆ ಕಾಲೇಜು ನಿರ್ಮಾಣವಾದರೆ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಬಹಳ ತೊಂದರೆಯಾಗುತ್ತಿತ್ತು.

ADVERTISEMENT

ಅಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ದಿನಾಂಕ ನಿಗದಿ ಮಾಡುವ ಸಲುವಾಗಿ ಸ್ಥಳ ಪರಿಶೀಲನೆಗೆಂದು ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿದ್ದರು. ಅಲ್ಲಿನ ಪರಿಸರವನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದನ್ನು ರದ್ದು ಮಾಡಿ ಬೇರೆ ಕಡೆ ಜಾಗ ಕೊಡಿಸುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಹುಡುಕಾಟದಲ್ಲಿದ್ದಾಗ ಪಟ್ಟಣದ ಬಸ್ ನಿಲ್ದಾಣದ ಹಿಂದೆ ಕೃಷಿ ಇಲಾಖೆಯ ಜಮೀನು ಇರುವುದು ಗಮನಕ್ಕೆ ಬಂತು. ಅದನ್ನು ಮಂಜೂರು ಮಾಡಿಸುವಂತೆ ಕೃಷಿ ಸಚಿವರಿಗೆ ಒತ್ತಡ ತಂದು ಯಶಸ್ವಿಯಾದರು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಕಾಲೇಜಿನ ಪ್ರಾಂಶುಪಾಲ ಡಿ.ಟಿ.ನಾಯ್ಕ, ‘ಶಾಸಕರ ಪ್ರಯತ್ನದಿಂದ ಕಾಲೇಜಿಗೆ ಸ್ವಂತ ಕಟ್ಟಡವು ಪಟ್ಟಣದ ಕೇಂದ್ರ ಭಾಗದಲ್ಲೇ ನಿರ್ಮಾಣವಾಗಲಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶವೇ ಮಂಜೂರಾಗಿದ್ದು ಮತ್ತಷ್ಟು ಅನುಕೂಲಕರವಾಗಿದೆ. ಶೀಘ್ರವೇ ದಿನಾಂಕ ನಿಗದಿಗೊಳಿಸಿ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು’ ಎಂದರು.

‘ಕೃಷಿ ಇಲಾಖೆಗೂ ಜಮೀನು’

‘ಕುಮಟಾದಲ್ಲಿ ಕೃಷಿ ಸಂಶೋಧನಾ ಕೇಂದ್ರದ 90 ಎಕರೆ ಜಮೀನಿನಲ್ಲಿ ಬಸ್ ನಿಲ್ದಾಣದ ಹಿಂಬದಿ ಜಾಗ ಖಾಲಿ ಬಿದ್ದಿತ್ತು. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳೂ ಇದ್ದವು. ಐ.ಟಿ.ಐ ಕಾಲೇಜಿಗೆ ಜಾಗದ ಹುಡುಕಾಟದಲ್ಲಿದ್ದಾಗ ಈ ಪ್ರದೇಶ ಗಮನಕ್ಕೆ ಬಂತು. ಕೃಷಿ ಸಚಿವರಿಗೆ ಮನವಿ ಮಾಡಿ ಅದನ್ನು ಮಂಜೂರು ಮಾಡಿಸಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿಗೆ ಮಂಜೂರಾಗಿರುವ ಜಾಗದ ಪಹಣಿ ಪತ್ರದ 11ನೇ ಕಾಲಂನಲ್ಲಿ ‘ಕೃಷಿ’ ಎಂದೂ 9ನೇ ಕಾಲಂನಲ್ಲಿ ‘ಅರಣ್ಯ’ ಎಂದೂ ಉಲ್ಲೇಖವಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಮನವೊಲಿಸಿ ಎಲ್ಲ ಜಮೀನನ್ನು ಅರಣ್ಯದಿಂದ ಕೃಷಿ ಜಮೀನಾಗಿ ಬದಲಾಯಿಸಲಾಯಿತು. ಬಳಿಕ ಕಾಲೇಜಿಗೆ ಮಂಜೂರು ಮಾಡಿಸಲಾಯಿತು. ಈ ಮೂಲಕ ಕೃಷಿ ಇಲಾಖೆಯವರಿಗೂ ಜಮೀನು ಸಿಕ್ಕಿದೆ’ ಎಂದು ಹೇಳಿದರು.

***

ಈ ಜಾಗದಿಂದ ಪದವಿ ಕಾಲೇಜಿಗೆ, ಮಿನಿ ವಿಧಾನಸೌಧಕ್ಕೆ ದೊಡ್ಡ ರಸ್ತೆಯಿದೆ. ಬಸ್ ನಿಲ್ದಾಣವೂ ಸಮೀಪದಲ್ಲೇ ಇದ್ದು, ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ.

– ದಿನಕರ ಶೆಟ್ಟಿ, ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.