ADVERTISEMENT

ಕಾರವಾರ: ಬಿಡಾಡಿ ದನ ಕಾಲುಬಾಯಿ ರೋಗ ಲಸಿಕೆ ವಂಚಿತ?

ಪಶು ಸಂಗೋಪನೆ ಇಲಾಖೆಯ ಕಾರ್ಯಕ್ಕೆ ಕೈಜೋಡಿಸದ ಸ್ಥಳೀಯ ಸಂಸ್ಥೆಗಳು

ಗಣಪತಿ ಹೆಗಡೆ
Published 4 ಅಕ್ಟೋಬರ್ 2023, 7:29 IST
Last Updated 4 ಅಕ್ಟೋಬರ್ 2023, 7:29 IST
ಕಾರವಾರ ತಾಲ್ಲೂಕಿನ ಬಾಳ್ನಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿದ್ದ ಬಿಡಾಡಿ ದಿನಗಳ ಹಿಂಡು.
ಕಾರವಾರ ತಾಲ್ಲೂಕಿನ ಬಾಳ್ನಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿದ್ದ ಬಿಡಾಡಿ ದಿನಗಳ ಹಿಂಡು.   

ಕಾರವಾರ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡುವ ಅಭಿಯಾನವನ್ನು ಪಶು ಸಂಗೋಪನೆ ಇಲಾಖೆ ಆರಂಭಿಸಿದೆ. ಆದರೆ ವ್ಯಾಪಕ ಪ್ರಮಾಣದಲ್ಲಿರುವ ಬಿಡಾಡಿ ದನಗಳಿಗೆ ಲಸಿಕೆ ನೀಡುವವರು ಯಾರು ಎಂಬ ಪ್ರಶ್ನೆಗೆ ಗೊಂದಲ ಮುಂದುವರಿದಿದೆ.

ಸೆ. 25 ರಿಂದ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದ್ದು ಜಿಲ್ಲೆಯಾದ್ಯಂತ ಸುಮಾರು 4.10 ಲಕ್ಷ ಹಸುಗಳಿಗೆ ಲಸಿಕೆ ವಿತರಣೆ ಗುರಿ ಹೊಂದಲಾಗಿದೆ. ನವೆಂಬರ್ ಮೊದಲ ವಾರದವರೆಗೂ ಲಸಿಕೆ ವಿತರಣೆ ಕೆಲಸ ನಡೆಯಲಿದ್ದು, 232 ಸಿಬ್ಬಂದಿ ಲಸಿಕೆ ವಿತರಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಆದರೆ, ಸಾವಿರಾರು ಸಂಖ್ಯೆಯಲ್ಲಿರುವ ಬಿಡಾಡಿ ದನಗಳಿಗೆ ಲಸಿಕೆ ನೀಡಲು ಇಲಾಖೆ ಮುಂದಾಗದಿರುವುದು ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ತರಬಹುದೇ? ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಸಾಕು ಜಾನುವಾರುಗಳಿಗೆ ಮಾತ್ರ ಲಸಿಕೆ ವಿತರಣೆ ನಡೆಸಲಾಗುತ್ತಿದ್ದು ಬಿಡಾಡಿ ದನಗಳನ್ನು ಲಸಿಕೆ ವಂಚಿತವಾಗಿಸುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.

ADVERTISEMENT

‘ಕಾಲುಬಾಯಿ ಜ್ವರ ವ್ಯಾಪಕವಾಗಿ ಹರಡಬಹುದಾದ ಕಾಯಿಲೆ. ಒಂದು ಆಕಳಿನಿಂದ ಇನ್ನೊಂದು ಆಕಳಿಗೆ ಹರಡುವ ಕಾಯಿಲೆ ತಡೆಗೆ ಲಸಿಕೆ ವಿತರಿಸುವದು ಉತ್ತಮ ಕೆಲಸ. ಆದರೆ ಬಿಡಾಡಿ ದಿನಗಳಲ್ಲೇ ಕಾಯಿಲೆ ಹೆಚ್ಚು ಕಾಣಸಿಗುತ್ತದೆ. ಅವುಗಳಿಗೆ ಲಸಿಕೆ ನೀಡದಿದ್ದರೆ ರೋಗ ನಿಯಂತ್ರಣದಲ್ಲಿಡುವುದು ಕಷ್ಟ’ ಎನ್ನುತ್ತಾರೆ ತಾಲ್ಲೂಕಿನ ಭೈರೆ ಗ್ರಾಮದ ರಾಮಕೃಷ್ಣ ಗಾಂವಕರ್.

‘ಮನೆಯಲ್ಲಿ ಸಾಕುವ ಆಕಳುಗಳನ್ನು ಮೇವಿಗೆ ಹೊರಗೆ ಬಿಡುವುದು ಅನಿವಾರ್ಯ. ಅಲ್ಲಿ ನೂರಾರು ಸಂಖ್ಯೆಯಲ್ಲಿರುವ ಬಿಡಾಡಿ ದನಗಳು ಮೇಯುವ ಸಮಯದಲ್ಲಿ ಜತೆ ಸೇರುತ್ತವೆ. ಒಂದು ವೇಳೆ ಅವುಗಳಿಗೆ ಲಸಿಕೆ ನೀಡದಿದ್ದರೆ ಜ್ವರ ತಗುಲಿದರೆ ಉಳಿದ ಹಸುಗಳಿಗೂ ಹರಡಬಹುದಾದ ಆತಂಕವಿದೆ’ ಎಂದರು.

‘ಜಾನುವಾರು ಗಣತಿಯಲ್ಲಿ ಬಿಡಾಡಿ ದನಗಳನ್ನು ಪರಿಗಣಿಸದ ಪರಿಣಾಮ ಅವುಗಳ ಸಂಖ್ಯೆ ಸ್ಪಷ್ಟವಾಗಿಲ್ಲ. ಅಲ್ಲದೆ ವಾರಸುದಾರರಿಲ್ಲದ ಆಕಳುಗಳನ್ನು ನಿಯಂತ್ರಿಸುವುದೂ ಕಷ್ಟ. ಅವುಗಳನ್ನು ಸೆರೆಹಿಡಿದು ಕೊಟ್ಟರೆ ಲಸಿಕೆ ನೀಡುವುದು ಸುಲಭ. ಈ ಬಗ್ಗೆ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳಿಗೂ ಪತ್ರ ಬರೆಯಲಾಗಿತ್ತು. ಆದರೆ ಅವರಿಂದ ಯಾವುದೇ ಸ್ಪಂದನೆ ಇಲ್ಲದ ಕಾರಣ ಬಿಡಾಡಿ ದನಗಳಿಗೆ ಲಸಿಕೆ ನೀಡುವುದು ಕಷ್ಟವಾಗಿದೆ’ ಎಂದು ಪಶು ಸಂಗೋಪನೆ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಕಾಲುಬಾಯಿ ಜ್ವರಕ್ಕೆ ಬಿಡಾಡಿ ದಿನಗಳಿಗೂ ಲಸಿಕೆ ವಿತರಿಸಲು ಇಲಾಖೆ ಸಿದ್ಧವಿದೆ. ಆದರೆ ಅವುಗಳನ್ನು ಸೆರೆಹಿಡಿದು ಸುರಕ್ಷಿತವಾಗಿರಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು.
ಡಾ.ರಾಕೇಶ್ ಬಂಗ್ಲೆ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.