ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಜಾರ್ಖಂಡ್‍ನಿಂದ ಶಿರಸಿಗೆ ಬಂದ ಬಾಲಕ

ಬಡ ಕುಟುಂಬದ ವಿದ್ಯಾರ್ಥಿಯ ಓದಿನ ಆಸಕ್ತಿ

ಗಣಪತಿ ಹೆಗಡೆ
Published 16 ಜುಲೈ 2021, 15:34 IST
Last Updated 16 ಜುಲೈ 2021, 15:34 IST
ಮಹಮ್ಮದ್ ನಫೀಸ್ ಅಲಂ
ಮಹಮ್ಮದ್ ನಫೀಸ್ ಅಲಂ   

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸ್ಥಳೀಯ ವಿದ್ಯಾರ್ಥಿಗಳನ್ನು ಹುಡುಕಿ ತರುವುದೇ ಶಿಕ್ಷಣ ಇಲಾಖೆಗೆ ಸವಾಲಾಗಿದ್ದರ ನಡುವೆ ನಗರದಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬ ಪರೀಕ್ಷೆಗಾಗಿ ಜಾರ್ಖಂಡ್‍ನಿಂದ ಮರಳಿ ಶಿಕ್ಷಕರಲ್ಲಿ ಭರವಸೆ ಮೂಡಿಸಿದ್ದಾನೆ.

ಜಾರ್ಖಂಡ್ ರಾಜ್ಯದ ಗರ್ವಾ ಜಿಲ್ಲೆ ಪಟಾಗರಾ ಗ್ರಾಮದ ಬಡ ಕುಟುಂಬದ ಮಹಮ್ಮದ್ ನಫೀಸ್ ಅಲಂ ಪರೀಕ್ಷೆಗಾಗಿ ಸಾವಿರಾರು ಕಿ.ಮೀ. ದೂರದಿಂದ ಮರಳಿದ ವಿದ್ಯಾರ್ಥಿ. ನಫೀಸ್‌ ಕೂಲಿಕಾರ್ಮಿಕ ಫಕ್ರುದ್ದೀನ್ ಎಂಬುವವರ ಮಗ. ರಾಮನಬೈಲಿನಲ್ಲಿರುವ ಮದರಸಾದಲ್ಲಿ ಅರೇಬಿಕ್ ಶಿಕ್ಷಣ ಪಡೆಯುತ್ತಿದ್ದ. ಜತೆಗೆ ಉರ್ದು ಮತ್ತು ಆಂಗ್ಲ ಮಾಧ್ಯಮದಲ್ಲಿಯೂ ಶಿಕ್ಷಣ ಪಡೆಯುತ್ತಿದ್ದ. ನಾಲ್ಕು ತಿಂಗಳ ಹಿಂದೆ ಊರಿಗೆ ತೆರಳಿದ್ದ.

ಪರೀಕ್ಷೆ ಬರೆಯುವ ಉತ್ಸುಕತೆಯಿಂದ ಜು.7 ರಂದು ಬನಾರಸ್ ಮಾರ್ಗವಾಗಿ ರೈಲ್ವೆ ಮೂಲಕ ಹುಬ್ಬಳ್ಳಿ ತಲುಪಿ, ಅಲ್ಲಿಂದ ಶಿರಸಿಗೆ ಮರಳಿದ್ದಾನೆ. ಬಂದ ಮಾರನೆ ದಿನ ಶಾಲೆಗೆ ತೆರಳಿ ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಬರೆದಿದ್ದಾನೆ.

ADVERTISEMENT

‘ನಮ್ಮ ಗ್ರಾಮದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ತೀರಾ ಕಡಿಮೆ. ಜೀವನದಲ್ಲಿ ಸಾಧಕನಾಗಲು ಶಿಕ್ಷಣ ಪಡೆಯಬೇಕು ಎಂಬುದನ್ನು ಅರಿತುಕೊಂಡೆ. ಪರೀಕ್ಷೆ ನಡೆಯುವುದೇ ಅನುಮಾನ ಎಂದು ಲಾಕ್‍ಡೌನ್ ಜಾರಿಯಾಗುವ ಮೊದಲೇ ಊರಿಗೆ ಮರಳಿದ್ದೆ. ಪರೀಕ್ಷೆ ವಿಚಾರ ತಿಳಿದು ಖುಷಿಯಿಂದಲೇ ಮರಳಿದೆ’ ಎಂದು ಮಹಮ್ಮದ್ ನಫೀಸ್ ಹೇಳಿದ.

‘ಪ್ರತಿ 10 ಮಕ್ಕಳ ಗುಂಪು ರಚಿಸಿ ಒಬ್ಬೊಬ್ಬ ಶಿಕ್ಷಕರಿಗೆ ದತ್ತು ನೀಡಲಾಗಿತ್ತು. ಮಹಮ್ಮದ್ ನಫೀಸ್ ಗುಂಪು ದತ್ತು ಪಡೆದಿದ್ದ ಶಿಕ್ಷಕಿ ಫಾತಿಮಾ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರೀಕ್ಷೆಗೆ ಬರಲು ಮನವೊಲಿಸಿದ್ದರು. ಶಿಕ್ಷಕ ಕಿರಣ ನಾಯ್ಕ ಇತರರು ಆತನೊಂದಿಗೆ ಸಂವಹನ ಸಾಧಿಸಿದ್ದಾರೆ’ ಎಂದು ಮುಖ್ಯ ಶಿಕ್ಷಕ ಆನಂದ ಕೊರವರ ತಿಳಿಸಿದರು.

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳ ಹುಡುಕಾಟ ಸವಾಲಾಗಿತ್ತು. ಹೊರರಾಜ್ಯದಿಂದ ಪರೀಕ್ಷೆಗೆ ಮರಳಿದ್ದು ಖುಷಿಯ ವಿಚಾರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.