ADVERTISEMENT

‘ನಾಸಾ’ದ ಪ್ರಶಸ್ತಿಗೆ ಕನ್ನಡಿಗ ಆಯ್ಕೆ: ₹ 1 ಕೋಟಿ 42 ಸಾವಿರ ವಿದ್ಯಾರ್ಥಿವೇತನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 12:15 IST
Last Updated 19 ಆಗಸ್ಟ್ 2021, 12:15 IST
ದಿನೇಶ ಹೆಗಡೆ
ದಿನೇಶ ಹೆಗಡೆ   

ಸಿದ್ದಾಪುರ (ಉತ್ತರ ಕನ್ನಡ): ತಾಲ್ಲೂಕಿನ ಸಶಿಗುಳಿ ಗ್ರಾಮದ ದಿನೇಶ ವಸಂತ ಹೆಗಡೆ, ನಾಸಾದ (ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅನುದಾನದಲ್ಲಿ) ‘ಫ್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಅಮೆರಿಕದ ಹಂಟ್ಸ್‌ವಿಲ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾರೆ.

ಅವರೊಂದಿಗೆ,ಕ್ಯಾಥರೀನ್ ಡೇವಿಡ್ಸನ್ ಎಂಬುವವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಬ್ಬರೂ ತಲಾ ₹ 1 ಕೋಟಿ 42 ಸಾವಿರ (1,35,000 ಅಮೆರಿಕನ್ ಡಾಲರ್) ವಿದ್ಯಾರ್ಥಿವೇತನ ಪಡೆಯಲಿದ್ದಾರೆ.

ಪ್ರಸ್ತುತ ದಿನೇಶ ಅವರು ‘ಯು.ಎ.ಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್‌’ನ ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಪದವಿ ಸಂಶೋಧನಾ ಸಹಾಯಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಾಹ್ಯಾಕಾಶ ಹವಾಮಾನದ ಕುರಿತು ಸಂಶೋಧನೆ ಮುಂದುವರಿಸಲು ಈ ಅನುದಾನ ನೀಡಲಾಗಿದೆ.

ADVERTISEMENT

‘ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಪರಿಮಾಣಾತ್ಮಕ ಅಧ್ಯಯನ’ ಎಂಬುದು ಅವರ ಸಂಶೋಧನೆಯ ವಿಷಯವಾಗಿದೆ. ಅವರಿಗೆ ಬಾಹ್ಯಾಕಾಶ ಹವಾಮಾನ ವಿಜ್ಞಾನಿ ಮತ್ತು ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕ ಡಾ.ನಿಕೊಲಾಯ್ ಪೊಗೊರೆಲೋವ್ ಮಾರ್ಗದರ್ಶಕರಾಗಿದ್ದಾರೆ.

ಸಿದ್ದಾಪುರ ತಾಲ್ಲೂಕಿನ ವಾಜಗದ್ದೆ ಸರ್ಕಾರಿ ಶಾಲೆ ಹಾಗೂ ಹಾರ್ಸಿಕಟ್ಟಾದ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್‌ಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಎಂ.ಎಸ್‌ಸಿ ಪದವಿ ಪಡೆದಿದ್ದಾರೆ.

‘ಅತ್ಯಂತ ಕಠಿಣ ಸ್ಪರ್ಧೆಯಿಂದ ಕೂಡಿರುವ ಈ ಪ್ರಶಸ್ತಿಗೆ ನನ್ನ ಆಯ್ಕೆ ಬಗ್ಗೆ ತಿಳಿದಾಗ ತುಂಬಾ ಸಂತೋಷವಾಯಿತು. ಅದನ್ನು ಖಚಿತಪಡಿಸಿಕೊಳ್ಳಲು ನಾನು ಆಫರ್ ಲೆಟರ್ ಅನ್ನು ಎರಡೆರಡು ಬಾರಿ ಪರಿಶೀಲಿಸಿದೆ. ಅಷ್ಟರಲ್ಲಿ ನನ್ನ ಮೇಲ್ವಿಚಾರಕರಿಂದ ಇ–ಮೇಲ್ ಬಂದಿದ್ದರಿಂದ ಈ ವಿಷಯ ನನಗೆ ದೃಢವಾಯಿತು. ತಕ್ಷಣವೇ ನಾನು ಭಾರತದಲ್ಲಿರುವ ನನ್ನ ಅಕ್ಕನಿಗೆ ಸಂತೋಷ ಹಂಚಿಕೊಳ್ಳಲು ಕರೆ ಮಾಡಿದೆ’ ಎಂದು ದಿನೇಶ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.