ADVERTISEMENT

ಕಾರವಾರ: ಯಶಸ್ಸಿನ ಹಿಂದೆ ವಿದ್ಯಾರ್ಥಿನಿಯ ‘ಓಟ’

ರಾಷ್ಟ್ರಮಟ್ಟಕ್ಕೇರುವ ಕನಸು ಹೊತ್ತ ಕಾಜುಬಾಗದ ವೇದಿಕಾ

ವಿನಾಯಕ ಬ್ರಹ್ಮೂರು
Published 10 ಮಾರ್ಚ್ 2020, 19:30 IST
Last Updated 10 ಮಾರ್ಚ್ 2020, 19:30 IST
ವಿವಿಧ ಪ್ರಶಸ್ತಿಗಳೊಂದಿಗೆ ಕುಳಿತಿರುವ ಕಾರವಾರದ ಕಾಜುಬಾಗದ ವೇದಿಕಾ ನಾಯ್ಕ
ವಿವಿಧ ಪ್ರಶಸ್ತಿಗಳೊಂದಿಗೆ ಕುಳಿತಿರುವ ಕಾರವಾರದ ಕಾಜುಬಾಗದ ವೇದಿಕಾ ನಾಯ್ಕ   

ಕಾರವಾರ: ‘ಯಶಸ್ಸಿಗಾಗಿ ಮೂರು ವರ್ಷಗಳಿಂದ ಓಡುತ್ತಲೇ ಇದ್ದೇನೆ. ಸಾಧಿಸುವ ಗುರಿ ದೊಡ್ಡದಿದೆ. ಈಗಾಗಲೇ ಸಿಕ್ಕ ಯಶಸ್ಸನ್ನು ಅನುಭವವೆಂದು ಪರಿಗಣಿಸುತ್ತೇನೆ. ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಇದು ನೆರವಾಗಬಲ್ಲುದು...’

ಇದು ವೇದಿಕಾಳ ಸ್ಫೂರ್ತಿದಾಯಕ ಮಾತು. ಈಕೆ ನಗರದ ಕಾಜುಬಾಗದ ಜಯರಾಮ ನಾಯ್ಕ ಹಾಗೂ ಜ್ಯೋತಿಕಾ ದಂಪತಿಯ ಪುತ್ರಿ. ಸೇಂಟ್ ಜೋಸೆಫ್ ವಿದ್ಯಾಲಯದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.

‘ಐದನೇ ತರಗತಿ ಓದುವಾಗಲೇ ಕ್ರೀಡಾ ಕ್ಷೇತ್ರದತ್ತ ಆಸಕ್ತಿ ಮೂಡಿತು. ಓಟ ಹಾಗೂ ರಿಲೇ ವಿಭಾಗದ ಕಡೆ ಆಕರ್ಷಿತಳಾದೆ. ಪ್ರತಿದಿನ ಬೆಳಿಗ್ಗೆ 4.30ರಿಂದ 7ರವರೆಗೆ ಅಭ್ಯಾಸ ಮಾಡುತ್ತಿದ್ದೆ.ಈ ಶ್ರಮದಿಂದಾಗಿ ನಾನು ಇವುಗಳಲ್ಲಿ ಸಾಧನೆ ಮಾಡುವಂತಾಯಿತು. ತಲಾ ಒಂದೊಂದು ಬಾರಿ ರಾಜ್ಯಮಟ್ಟದಲ್ಲಿ ಆಡಿದೆ’ ಎಂದು ಸಂತಸದಿಂದ ಹೇಳಿದಳು.

ADVERTISEMENT

‘ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳುವ ಎಲ್ಲಾ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳುತ್ತಿದೆ. 2018ರಲ್ಲಿ ಹಮ್ಮಿಕೊಂಡಿದ್ದ ರಿಲೇ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದೆ. ಜೊತೆಗೆ 100 ಮತ್ತು 200 ಮೀಟರ್ ಓಟದಲ್ಲಿ ಜಿಲ್ಲಾಮಟ್ಟದಲ್ಲಿ ಅಗ್ರಸ್ಥಾನದ ಸಾಧನೆ ಮಾಡಿದೆ. ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದು ಹೊಸ ಅನುಭವ ನೀಡಿತು. ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.ಆದರೆ, ಉತ್ತಮ ಪ್ರದರ್ಶನ ನೀಡಿದ ಹೆಮ್ಮೆ ಇದೆ’ ಎಂದು ಹರ್ಷ ವ್ಯಕ್ತಪಡಿಸಿದಳು.

‘ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದೇನೆ. ಹಾಗಾಗಿ ದೈಹಿಕ ಸಾಮರ್ಥ್ಯದ ಸಮಸ್ಯೆಉಂಟಾಗಿಲ್ಲ. ಪ್ರತಿದಿನ ಅಭ್ಯಾಸ ಮಾಡುವುದರ ಮೂಲಕ ಫಿಟ್ನೆಸ್ ಕಾಯ್ದುಕೊಂಡಿದ್ದೇನೆ. ಕ್ರೀಡಾಕ್ಷೇತ್ರದಲ್ಲಿ ಮುಂದುವರಿಯಲು ಪಾಲಕರ ಪ್ರೋತ್ಸಾಹವೂ ಇದೆ. ಜಯಂತಿ, ರವಿರಾಜ್ ಹಾಗೂ ರಾಜು ಸರ್ ನನಗೆ ವಿಶೇಷ ತರಬೇತಿಯನ್ನು ನೀಡುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕೆಂಬ ಹಂಬಲವಿದೆ’ ಎಂದಳು.

ಕ್ರೀಡಾಂಗಣದ ಕೊರತೆ

‘ತುಮಕೂರು ಮತ್ತು ಬೆಂಗಳೂರು ಕ್ರೀಡಾಂಗಣಗಳಲ್ಲಿ ಆಡುವ ಅನುಭವವೇ ಬೇರೆ. ಅಲ್ಲಿರುವ ಸುಸಜ್ಜಿತ ಕ್ರೀಡಾಂಗಣ ನಮ್ಮ ಜಿಲ್ಲೆಯಲ್ಲಿಲ್ಲ. ಅಲ್ಲಿನ ಸ್ಪರ್ಧೆಯು ಹೆಚ್ಚು ಕಠಿಣವಾಗಿರುತ್ತದೆ. ಜೊತೆಗೆ ಉತ್ತಮ ಕ್ರೀಡಾಂಗಣಗಳಲ್ಲಿ ಅಭ್ಯಾಸ ಮಾಡಿದವರು ನಮ್ಮ ಎದುರಾಳಿಯಾಗಿರುತ್ತಾರೆ. ಹಾಗಾಗಿ ಇಲ್ಲಿನ ಕ್ರೀಡಾಂಗಣದ ಕೊರತೆ ನಮಗೆ ಸ್ವಲ್ಪ ಮಟ‌್ಟಿಗೆ ಹಿನ್ನಡೆಯಾಗುತ್ತದೆ’ ಎಂದು ಬೇಸರಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.