ಮುಂಡಗೋಡ: ಸಹಪಾಠಿ ವಿದ್ಯಾರ್ಥಿಯೊಬ್ಬ ಬಸ್ಸಿನಲ್ಲಿ ಶಾಲೆಗೆ ಬರುವಾಗ, ಹೋಗುವಾಗ, ಇತರ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ಅನವಶ್ಯಕವಾಗಿ ಜಗಳ ಮಾಡುತ್ತಿದ್ದಾನೆ. ಇದರಿಂದ ಶಾಲೆಗೆ ಬರಲು ಭಯವಾಗುತ್ತಿದೆ ಎಂದು ಆರೋಪಿಸಿ, ತಾಲ್ಲೂಕಿನ ಕಾತೂರ ಸರ್ಕಾರಿ ಪ್ರೌಢಶಾಲೆಯ ಹತ್ತನೇಯ ತರಗತಿ ವಿದ್ಯಾರ್ಥಿಗಳು ಶುಕ್ರವಾರ ತರಗತಿಯನ್ನು ಬಹಿಷ್ಕರಿಸಿದರು.
ಚಿಪಗೇರಿ ಮಾರ್ಗವಾಗಿ ಬರುವ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಈ ಪ್ರೌಢಶಾಲೆಯ 8, 9 ಹಾಗೂ 10ನೇ ತರಗತಿಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯವೂ ಸಂಚರಿಸುತ್ತಾರೆ. ಇದೇ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ, ಕಳೆದ ಕೆಲ ದಿನಗಳಿಂದ, ಬಸ್ಸಿನಲ್ಲಿ ಸಂಚರಿಸುವ ಇತರ ವಿದ್ಯಾರ್ಥಿಗಳೊಂದಿಗೆ ಜಗಳ ಮಾಡುತ್ತಿದ್ದಾನೆ. ಇದರಿಂದ ಮಾನಸಿಕವಾಗಿ ನೋವಾಗುತ್ತಿದೆ ಎಂದು ವಿದ್ಯಾರ್ಥಿಗಳು ಮುಖ್ಯಶಿಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ.
ವಿದ್ಯಾರ್ಥಿಗಳು ಸಮಸ್ಯೆಯನ್ನು ಪಾಲಕರೊಂದಿಗೆ ಹೇಳಿದ್ದರಿಂದ, ವಿದ್ಯಾರ್ಥಿಗಳ ಜೊತೆ ಪಾಲಕರು ಶಾಲೆಗೆ ಆಗಮಿಸಿ, ‘ಅಸಭ್ಯವಾಗಿ ವರ್ತಿಸುವ, ಹೆದರಿಸುವ ವಿದ್ಯಾರ್ಥಿಯು ಇದೇ ಶಾಲೆಯಲ್ಲಿ ಕಲಿಯುವುದಾದರೆ, ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಿ. ಬೇರೆ ಶಾಲೆಯಲ್ಲಿ ಮಕ್ಕಳನ್ನು ಕಲಿಸುತ್ತೇವೆ. ಒಬ್ಬ ವಿದ್ಯಾರ್ಥಿಯಿಂದ ಹತ್ತಾರು ಮಕ್ಕಳು ಭಯದಲ್ಲಿ ಶಿಕ್ಷಣ ಪಡೆಯುವಂತಾಗಿದೆ’ ಎಂದು ದೂರಿದರು.
ಕೆಲವು ಪಾಲಕರು, ವಿದ್ಯಾರ್ಥಿಯ ವರ್ತನೆ ಕುರಿತು ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ರಂಗನಾಥ ನೀಲಮ್ಮನವರ ಶಾಲೆಗೆ ಭೇಟಿ ನೀಡಿ, ಪಾಲಕರು, ಶಿಕ್ಷಕರೊಂದಿಗೆ ಚರ್ಚಿಸಿದರು. ಅಲ್ಲದೇ, ಆತಂಕಗೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
‘10ನೇ ತರಗತಿ ವಿದ್ಯಾರ್ಥಿಯೊಬ್ಬ ಬಸ್ಸಿನಲ್ಲಿ ಇತರ ವಿದ್ಯಾರ್ಥಿಗಳನ್ನು ಹೆದರಿಸುತ್ತಾನೆ ಎಂದು ಕೆಲವು ಮಕ್ಕಳು ಹಾಗೂ ಪಾಲಕರು ಆರೋಪಿಸಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಗಳು ಬ್ಯಾಗ್ ರಹಿತವಾಗಿ ಶಾಲೆಗೆ ಬಂದು, ತರಗತಿಯ ಜೊತೆಗೆ ಪರೀಕ್ಷೆಯನ್ನು ಬಹಿಷ್ಕಾರ ಮಾಡಿದ್ದಾರೆ. ಸಮಸ್ಯೆ ಬಗೆಹರಿದರೆ ಮಾತ್ರ ಶಾಲೆಗೆ ಬರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು, ಪೊಲೀಸ್ ಇಲಾಖೆ ಜೊತೆಗೂಡಿ ಸಭೆ ನಡೆಸಲಾಗಿದೆ’ ಎಂದು ಬಿಇಒ ಸುಮಾ ಜಿ. ಹೇಳಿದರು.
‘ವಿದ್ಯಾರ್ಥಿಯ ವರ್ತನೆ ಕುರಿತು, ಆತನಿಗೆ ಆಪ್ತಸಮಾಲೋಚನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ. ಸಮಸ್ಯೆ ಗಂಭೀರವಾಗಿರುವುದರಿಂದ, ತುರ್ತು ವರದಿ ನೀಡುವಂತೆ ಮನವಿ ಮಾಡಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಶಾಲೆಗೆ ಗೈರಾಗದೇ ಶನಿವಾರದಿಂದ ಬರುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.