ADVERTISEMENT

ಸರಗುಪ್ಪದಲ್ಲಿ ಸೊಪ್ಪಿನ ಸೊಬಗು, ಕೈತೋಟದಲ್ಲಿ ಅರಳುವ ಬಣ್ಣದ ಗುಲಾಬಿ

ಸಂಧ್ಯಾ ಹೆಗಡೆ
Published 17 ಜನವರಿ 2020, 19:45 IST
Last Updated 17 ಜನವರಿ 2020, 19:45 IST
ಚಂದದ ಮಕ್ಕಳ ಕೈಯಲ್ಲಿ ಅಂದದ ಕೆಂಪು ಹರಿವೆ ಸೊಪ್ಪು
ಚಂದದ ಮಕ್ಕಳ ಕೈಯಲ್ಲಿ ಅಂದದ ಕೆಂಪು ಹರಿವೆ ಸೊಪ್ಪು   

ಶಿರಸಿ: ಕಬ್ಬಿಣಾಂಶವುಳ್ಳ ಸೊಪ್ಪು, ತರಕಾರಿ ಬೆಳೆಸುವ ಮೂಲಕ ತಾಲ್ಲೂಕಿನ ಸರಗುಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆದಿದೆ. ಪುಟ್ಟ ಪುಟ್ಟ ಹೆಜ್ಜೆಗಳ ನಾದಕ್ಕೆ, ಛಂಗನೆ ಜಿಗಿಯುವ ನೆಗೆತಕ್ಕೆ ಕೈತೋಟದಲ್ಲಿ ನಳನಳಿಸುವ ಸೊಪ್ಪು ನಗುವ ಬೀರುತ್ತದೆ.

ಶಾಲೆಯಲ್ಲಿ 26 ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳ ಬಿಸಿಯೂಟಕ್ಕಾಗುವಷ್ಟು ತೆಂಗಿನಕಾಯಿಯನ್ನು ಎರಡು ಕಲ್ಪವೃಕ್ಷಗಳು ನೀಡುತ್ತವೆ. ಕೈತೋಟದಲ್ಲಿ ಬೆಳೆಸಿರುವ ಹರಿವೆ ಸೊಪ್ಪು, ಪಾಲಕ್, ಬಸಳೆ, ಆಲೂಗಡ್ಡೆ ಮಕ್ಕಳ ಬಿಸಿಯೂಟದ ರುಚಿಯನ್ನು ಹೆಚ್ಚಿಸುತ್ತವೆ. ‘ಬಿಸಿಯೂಟದ ತರಕಾರಿಗೆ ಬರುವ ಹಣದಲ್ಲಿ ತರಕಾರಿ ಖರೀದಿಸಿ ಸಾಂಬಾರು ಮಾಡುತ್ತೇವೆ. ಹೆಚ್ಚುವರಿಯಾಗಿ ಪಲ್ಯ, ಹಸಿರು ಸೊಪ್ಪಿನ ತಂಬುಳಿಯನ್ನು ಮಾಡಿ ಅಡುಗೆಯವರು ಮಕ್ಕಳಿಗೆ ಉಣಬಡಿಸುತ್ತಾರೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ನಯನಾಕುಮಾರಿ.

ಶಾಲೆಯ ಕೈತೋಟಕ್ಕೆ ಪಾಲಕರು ತರಕಾರಿ ಬೀಜ ಕೊಡುತ್ತಾರೆ. ಊರವರು ಕೆಲವೊಮ್ಮೆ ಸಸಿಗಳನ್ನು ಕೊಟ್ಟು ಹೋಗುತ್ತಾರೆ. ಶಿಕ್ಷಕರು ಆಸಕ್ತಿಯಿಂದ ತರಕಾರಿ ಬೀಜ ತಂದು ನಾಟಿ ಮಾಡುತ್ತಾರೆ. ಕೈತೋಟಕ್ಕೆ ನೀರುಣಿಸಲು ಜೆಟ್ ವ್ಯವಸ್ಥೆಯಿದೆ. ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ನಾಯ್ಕ ಅವರು ಅದನ್ನು ಅಳವಡಿಸಿಕೊಟ್ಟಿದ್ದಾರೆ. ಜೆಟ್‌ನಲ್ಲಿ ನೀರು ಹಾಯಿಸುವುದೇ ಮಕ್ಕಳಿಗೆ ಮಜಾ. ನಾಮುಂದೆ ತಾಮುಂದೆ ಎಂದು ಓಡುತ್ತಾರೆ.

ADVERTISEMENT

ಅಲ್ಲೇ ಪಕ್ಕದಲ್ಲಿ ಔಷಧ ಸಸ್ಯಗಳ ಸಣ್ಣ ಗಾರ್ಡನ್ ಇದೆ. ಅಲ್ಲಿ ದೊಡ್ಡಪತ್ರೆ, ಪುದಿನಾ, ಕರಿಬೇವು ಮೊದಲಾದ ಗಿಡಗಳು ಬೆಳೆದಿವೆ. ಗುಲಾಬಿ ವನದಲ್ಲಿ ಆರೆಂಟು ಬಣ್ಣದ ಹೂಗಳು ಅರಳುತ್ತವೆ. ಪ್ರತಿವರ್ಷ ನೋಟ್‌ಬುಕ್ ವಿತರಿಸುವ ಬೆಂಗಳೂರಿನ ಅವಿರತ ಸಂಸ್ಥೆಯವರು ಶಾಲೆಗೊಂದು ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲಿ ನಲಿ–ಕಲಿ ಮಕ್ಕಳು ಪೇಂಟ್ ಮಾಡುತ್ತಾರೆ. ಮೂರು ಮತ್ತು ನಾಲ್ಕನೇ ತರಗತಿ ಮಕ್ಕಳು ಕಂಪ್ಯೂಟರ್‌ನಲ್ಲಿ ಟೈಪಿಂಗ್ ಕಲಿತಿದ್ದಾರೆ. ‘ಮೊಬೈಲ್‌ನಿಂದ ಇಂಟರ್‌ನೆಟ್ ಬಳಸಿಕೊಂಡು ಕಂಪ್ಯೂಟರ್‌ನಲ್ಲಿ ಮಕ್ಕಳಿಗೆ ಆನ್‌ಲೈನ್ ಪಾಠ ತೋರಿಸುತ್ತೇವೆ. ಪಾಠದಲ್ಲಿರುವ ಅಮೂರ್ತವನ್ನು ಮೂರ್ತ ರೂಪದಲ್ಲಿ ತೋರಿಸುವ ಪ್ರಯತ್ನವಿದು’ ಎಂದು ನಯನಾಕುಮಾರಿ ಹೇಳಿದರು. ಇನ್ನೊಬ್ಬರು ಶಿಕ್ಷಕ ಜನಾರ್ದನ ಮೊಗೇರ ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಈ ಶಾಲೆಗೆ ಬಂದಿದ್ದಾರೆ.

‘ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಶಿಕ್ಷಕರು, ಮಕ್ಕಳು, ಪೋಷಕರು ಸೇರಿ ಶಾಲೆಗಳಲ್ಲಿ ತರಕಾರಿ ಬೆಳೆದು ಬಿಸಿಯೂಟಕ್ಕೆ ಬಳಸುತ್ತಾರೆ. ಮಕ್ಕಳಿಗೆ ಪಠ್ಯದ ಜೊತೆಗೆ ಕೃಷಿ ಪಾಠವೂ ನಡೆಯುತ್ತದೆ. ಮಣ್ಣಿನೊಂದಿಗಿನ ಅವಿನಾಭಾವ ಸಂಬಂಧವನ್ನು ಪರಿಚಯಿಸುವ ಕಾರ್ಯ ಶಾಲೆಗಳಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ’ ಎಂದು ಬಿಇಒ ಸದಾನಂದ ಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.