ADVERTISEMENT

ಒಳಗೆ ಅಡುಗೆ.. ಮಕ್ಕಳು ಹೊರಗೆ!

ಕುಮಟಾ ತಾಲ್ಲೂಕಿನ ಕಲ್ಸಂಕ: 10 ಅಡಿ ಉದ್ದದ ಕೊಠಡಿಯಲ್ಲೇ ಪಾಠ, ಆಟ, ಊಟ

ಎಂ.ಜಿ.ನಾಯ್ಕ
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ಕುಮಟಾ ತಾಲ್ಲೂಕಿನ ಕಲ್ಸಂಕ ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ಅನಿಲದ ಎರಡು ಸಿಲಿಂಡರ್‌ಗಳನ್ನು ಇಟ್ಟಿರುವುದು.
ಕುಮಟಾ ತಾಲ್ಲೂಕಿನ ಕಲ್ಸಂಕ ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ಅನಿಲದ ಎರಡು ಸಿಲಿಂಡರ್‌ಗಳನ್ನು ಇಟ್ಟಿರುವುದು.   

ಕುಮಟಾ: ಈ ಅಂಗನವಾಡಿ ಕೇಂದ್ರ ಇರುವುದು ಸುಮಾರು 10 ಅಡಿ ಉದ್ದ ಮಾತ್ರ. ಅಲ್ಲೇ ಮಕ್ಕಳಿಗೆ ಆಟ– ಪಾಠ, ಜೊತೆಗೇ ಅನಿಲದ ಸಿಲಿಂಡರ್ ಇಟ್ಟು ಅಡುಗೆಯೂ ಆಗಬೇಕು.

ಪಟ್ಟಣದ ಕಲ್ಸಂಕ ಅಂಗನವಾಡಿ ಕೇಂದ್ರದ ಸ್ಥಿತಿಯಿದು. ಅಡುಗೆ ಅನಿಲದಎರಡು ಸಿಲಿಂಡರ್‌ಗಳನ್ನುಇಟ್ಟುಕೊಂಡು ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಅನಿವಾರ್ಯತೆ ಇಲ್ಲಿನಕಾರ್ಯಕರ್ತೆಯರದ್ದಾಗಿದೆ. ಸ್ಥಳೀಯರಾದ ವಿ.ಎನ್.ಶಾನಭಾಗ ಎನ್ನುವವರ ಮನೆಯಲ್ಲಿ ಉಚಿತವಾಗಿ ನಡೆಯುವ ಈ ಅಂಗನವಾಡಿಗೆ ಮಕ್ಕಳನ್ನು ಕರೆದುಕೊಂಡು ಬರಲು ಸರಿಯಾದ ರಸ್ತೆ ಕೂಡ ಇಲ್ಲ.

‘ಈ ಅಂಗನವಾಡಿ ಕೇಂದ್ರಕ್ಕೆ 10 ಮಕ್ಕಳು ಬರುತ್ತಾರೆ. ಪ್ರತ್ಯೇಕ ಅಡುಗೆ ಕೋಣೆ ಇಲ್ಲದ ಕಾರಣ ಒಳಗೆ ಅಡುಗೆ ಮಾಡುವಾಗ ಮಕ್ಕಳನ್ನು ವಿ.ಎನ್.ಶಾನಭಾಗ ಅವರ ಮನೆಯ ಅಂಗಳದ ಕಟ್ಟೆಯ ಮೇಲೆ ಕೂರಿಸುತ್ತೇವೆ’ ಎಂದು ಅಂಗನವಾಡಿ ಅಡುಗೆ ಸಹಾಯಕಿ ಸುಮತಿ ನಾಯ್ಕ ತಿಳಿಸಿದರು.

ADVERTISEMENT

‘ಇದು 10ವರ್ಷಗಳಿಂದ ನಡೆದು ಬಂದಿದೆ. ಕಳೆದ ವರ್ಷ ನನ್ನ ಮಗಳು ಈ ಅಂಗನವಾಡಿಗೆ ಬರುತ್ತಿದ್ದಳು. ಅಂಗನವಾಡಿ ಕಟ್ಟಡದೊಳಗೆ ಅಡುಗೆ ಮಾಡುವಾಗ ಮಕ್ಕಳನ್ನು ಪಕ್ಕದಲ್ಲಿ ಕೂರಿಸಿಕೊಳ್ಳವುದು ಅಪಾಯ’ ಎಂದುಸ್ಥಳೀಯ ನಿವಾಸಿ ಸೀಮಾ ಗಣಪತಿ ಎಂಬುವವರು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಸಿ.ಡಿ.ಪಿ.ಒ ವಿಜಯಾ ನಾಯ್ಕ ಅವರನ್ನು ಸಂಪರ್ಕಿಸಿದಾಗ, ‘ಕಲ್ಸಂಕ ಅಂಗನವಾಡಿಯಲ್ಲಿ ಅಂಥ ಸಮಸ್ಯೆ ಇಲ್ಲ. ಅಲ್ಲಿ ಅಡುಗೆ ಕೋಣೆ ಮಾತ್ರ ಇದೆ. ಮಕ್ಕಳ ಆಟ, ಪಾಠಕ್ಕೆಲ್ಲ ಮನೆ ಮಾಲೀಕರು ತಮ್ಮದೇ ಇನ್ನೊಂದುಕೊಠಡಿನೀಡಿದ್ದಾರೆ’ ಎಂದರು. ಆದರೆ, ಅಡುಗೆ ಕೋಣೆಯೊಳಗೆ ಮಕ್ಕಳ ಕಲಿಕೆಯ ಹಲವು ಚಿತ್ರಪಟಗಳು ಕಂಡುಬಂತು.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ, ‘ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ಮಾಡುವುದು ಅಪಾಯಕಾರಿಯಾಗಿದೆ. ಆದ್ದರಿಂದ ಪುರಸಭೆ ಮಾಲೀಕತ್ವದ ಬೇರೆ ಕಟ್ಟಡಕ್ಕೆ ಅಂಗನವಾಡಿಯನ್ನು ಸ್ಥಳಾಂತರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಅಂಗನವಾಡಿ ಕಾರ್ಯಕರ್ತೆ ಪತ್ರ ನೀಡಿದ್ದಾರೆ’ ಎಂದರು.

ಚಿತ್ರಿಗಿಗೆ ಸ್ಥಳಾಂತರ?: ‘2010ರಲ್ಲಿ ಚಿತ್ರಿಗಿಯ ವಾಣಿ ಮಹಿಳಾ ಮಂಡಳಕ್ಕೆ ವರ್ಷಕ್ಕೆ ₹210ಯಂತೆಪುರಸಭೆ ಕಟ್ಟಡವೊಂದನ್ನು ಭೋಗ್ಯಕ್ಕೆ ನೀಡಲಾಗಿದೆ. ಅದರಲ್ಲಿ ಅವರು ಖಾಸಗಿ ಅಂಗನವಾಡಿ ನಡೆಸುತ್ತಿದ್ದಾರೆ. ಅದನ್ನು ತೆರವುಗೊಳಿಸಲು ನೊಟೀಸ್ ನೀಡಲಾಗಿದೆ. ಅಲ್ಲಿಗೆ ಕಲ್ಸಂಕ ಅಂಗನವಾಡಿ ಸ್ಥಳಾಂತರಿಸಬಹುದು’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.