ADVERTISEMENT

ಎಲೆಚುಕ್ಕಿ ನಿಯಂತ್ರಣ ಔಷಧಿಗೆ ಸಹಾಯಧನ: ಅರ್ಜಿ ಸಲ್ಲಿಕೆಗೆ ಬೆಳೆಗಾರರ ನಿರಾಸಕ್ತಿ

ರಾಜೇಂದ್ರ ಹೆಗಡೆ
Published 2 ಏಪ್ರಿಲ್ 2025, 5:32 IST
Last Updated 2 ಏಪ್ರಿಲ್ 2025, 5:32 IST
ಎಲೆಚುಕ್ಕಿ ಬಾಧಿತ ಅಡಿಕೆ ಮರಗಳು
ಎಲೆಚುಕ್ಕಿ ಬಾಧಿತ ಅಡಿಕೆ ಮರಗಳು   

ಶಿರಸಿ: ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಕ್ಷೇತ್ರದಲ್ಲಿ ರೋಗ ನಿಯಂತ್ರಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ನೀಡುವ ಸಹಾಯಧನದ ಮೊತ್ತ ಕನಿಷ್ಠವಿದೆ. ಈ ಕಾರಣ ಬೆಳೆಗಾರರು ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ನಿರಾಸಕ್ತಿ  ತೋರುತ್ತಿದ್ದಾರೆ.

2023-24 ಹಾಗೂ 2024-25ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 8,600 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ತೋಟ ಎಲೆಚುಕ್ಕಿ ರೋಗ ಬಾಧಿತವಾಗಿತ್ತು. ಬೆಳೆಗಾರರು ಇದರಿಂದ ಕಂಗೆಟ್ಟಿದ್ದರು. ಹಲವೆಡೆ ಮರಗಳು ಸಾಯುವ ಹಂತ ತಲುಪಿದ್ದರೆ, ಇನ್ನೂ ಕೆಲವೆಡೆ ಉತ್ಪನ್ನ ತೀರಾ ಕುಸಿತ ಕಂಡಿತ್ತು. ಒಟ್ಟಾರೆ ಅಡಿಕೆಗೆ ಎಲೆಚುಕ್ಕಿ ಮಾರಕವಾಗಿ ಪರಿಗಣಿಸಿತ್ತು. ಸೂಕ್ತ ಪರಿಹಾರ ನೀಡುವಂತೆ ರೈತ ವಲಯದಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ ಸರ್ಕಾರವು ಬೆಳೆಗಾರರಿಗೆ ಅನುಕೂಲ ಮಾಡಲು, ರೋಗ ನಿಯಂತ್ರಣ ಔಷಧಿ ಖರೀದಿಸಿದರೆ ಅದಕ್ಕೆ ಒಂದು ಎಕರೆಗೆ ₹480ರಂತೆ ಗರಿಷ್ಠ 10 ಎಕರೆಗೆ ₹4,800ಗಳನ್ನು ತೋಟಗಾರಿಕಾ ಇಲಾಖೆ ಮುಖಾಂತರ ಬೆಳೆಗಾರರಿಗೆ ಸಹಾಯಧನ ರೂಪದಲ್ಲಿ ನೀಡುತ್ತಿದೆ. ಆದರೆ ಈ ಸಹಾಯಧನದಿಂದ ಹೆಚ್ಚಿನ ಅನುಕೂಲವಾಗದ ಕಾರಣ ಬೆಳೆಗಾರರು ಇದರತ್ತ ನಿರಾಸಕ್ತಿ ವಹಿಸುತ್ತಿದ್ದಾರೆ. 

'ಎಲೆಚುಕ್ಕಿ ರೋಗ ಹರಡದಂತೆ ನಿಯಂತ್ರಣದಲ್ಲಿಡಲು ಸಸ್ಯ ಸಂರಕ್ಷಣಾ ಔಷಧಿಗಳಾದ ಹೆಕ್ಸೋಕೋನೊಜೋಲ್, ಟೆಬುಕೊನೊಜೋಲ್ ಮತ್ತು ಪ್ರೋಪಿಕೊನೊಜೋಲ್‍ಗಳನ್ನು ವರ್ಷದಲ್ಲಿ ಕನಿಷ್ಠ ಮೂರು ಬಾರಿಯಾದರೂ ಅಡಿಕೆ ಗಿಡಮರಗಳಿಗೆ  ಸಿಂಪಡಿಸಬೇಕು. ಒಂದು ಎಕರೆಗೆ ಮೂರು ಬಾರಿ ಸಿಂಪಡಣೆಗೆ ಔಷಧಿ ಮೊತ್ತವೇ ₹6 ಸಾವಿರಕ್ಕಿಂತ ಹೆಚ್ಚಾಗುತ್ತದೆ. ಸರ್ಕಾರ ಎಕರೆ ಒಂದಕ್ಕೆ ₹480 ಸಹಾಯಧನ ನೀಡಿದರೆ ಯಾವುದೇ ರೀತಿಯಿಂದಲೂ ಪ್ರಯೋಜನಕ್ಕೆ ಸಿಗದು' ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಅಭಿಪ್ರಾಯ. 

ADVERTISEMENT

'ಸರ್ಕಾರದ ಯೋಜನೆಯಡಿ 10 ಎಕರೆವರೆಗೆ ₹4,800 ನೀಡಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ದೊಡ್ಡ ಬೆಳೆಗಾರರ ಪ್ರಮಾಣ ಕಡಿಮೆಯಿದೆ. ಇರುವ ಬಹುತೇಕ ಬೆಳೆಗಾರರು ಸಣ್ಣ ಹಾಗೂ ಮಧ್ಯಮ ಹಂತದವರಾಗಿದ್ದಾರೆ. ಹೀಗಾಗಿ ಸಾವಿರ ರೂಪಾಯಿಯೊಳಗೆ ಸಹಾಯಧನ ಬೆಳೆಗಾರರ ಕೈ ಸೇರುತ್ತದೆ. ಈ ಮೊತ್ತ ಪಡೆಯಲು ಅರ್ಜಿ ಸಲ್ಲಿಸಬೇಕು, ಖರೀದಿಸಿದ ಸಸ್ಯ ಸಂರಕ್ಷಣಾ ಔಷಧಿಗಳ ಜಿ. ಎಸ್.ಟಿ ಹೊಂದಿದ ಬಿಲ್, ಆಧಾರ ದಾಖಲೆಗಳನ್ನು ಒದಗಿಸಬೇಕು, ಗ್ರಾಮೀಣ ಭಾಗದಿಂದ ನಗರದ ತೋಟಗಾರಿಕಾ ಇಲಾಖೆ ಕಚೇರಿಗೆ ಬಸ್ ಇಲ್ಲವೇ ಖಾಸಗಿ ವಾಹನಗಳ ಮೂಲಕ  ಓಡಾಡಬೇಕು. ಒಮ್ಮೆ ಅರ್ಜಿ ಸಲ್ಲಿಸಲು ಮುಂದಾದರೆ ಸಹಾಯಧನದ ಮೊತ್ತಕ್ಕಿಂತ ಹೆಚ್ಚು ಹಣ ವೆಚ್ಚವಾಗುತ್ತದೆ. ಹೀಗಾಗಿ ಬೆಳೆಗಾರರು ಅಲ್ಪಪ್ರಮಾಣದಲ್ಲಿ ಸಿಗುವ ಸಹಾಯಧನದತ್ತ ನಿರಾಸಕ್ತಿ ತೋರುತ್ತಿದ್ದಾರೆ' ಎಂಬುದು ಬೆಳೆಗಾರ ಮಂಜುನಾಥ ಗೌಡ ಮಾತು. 

'ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುವ ಕಾರಣ ಸಧ್ಯ ರೋಗ ನಿಯಂತ್ರಣದಲ್ಲಿದೆ. ಆದಾಗ್ಯೂ ಪ್ರಸಕ್ತ ವರ್ಷ ಸಹಾಯಧನಕ್ಕಾಗಿ ಈಗಾಗಲೇ ಅರ್ಜಿ ಕರೆಯಲಾಗಿತ್ತು. ಜಿಲ್ಲೆಯಲ್ಲಿ 50 ಅರ್ಜಿ ಕೂಡ  ಸಲ್ಲಿಕೆಯಾಗಿಲ್ಲ. ಮೇ ತಿಂಗಳಾಂತ್ಯಕ್ಕೆ ಮತ್ತೆ ಅರ್ಜಿ ಕರೆಯಲಾಗುವುದು' ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರ ಮಾಹಿತಿಯಾಗಿದೆ.

ಸಹಾಯಧನದ ಬದಲು ಬೆಳೆಗಾರರಿಗೆ ಅಗತ್ಯವಿರುವಷ್ಟು ಔಷಧಿಯನ್ನು ಇಲಾಖೆ ಮುಖಾಂತರ ಉಚಿತವಾಗಿ ವಿತರಿಸುವ ಕಾರ್ಯವಾದರೆ ಅನುಕೂಲ ಆಗುತ್ತದೆ 
ಶಿವಪ್ರಸಾದ ಹೆಗಡೆ ಅಡಿಕೆ ಬೆಳೆಗಾರ
ಕಳೆದ ಸಾಲಿನಲ್ಲಿ ₹9 ಲಕ್ಷ ಸಹಾಯಧನ ಮೊತ್ತ ನೀಡಲಾಗಿದೆ. ಈ ಬಾರಿ ಅರ್ಜಿ ಕರೆಯಲಾಗಿತ್ತು. ಆದರೆ ಕಡಿಮೆ ರೈತರು ಅರ್ಜಿ ಸಲ್ಲಿಸಿದ್ದಾರೆ
ಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.