ADVERTISEMENT

ಹಳಿಯಾಳ: ಕಬ್ಬು ನುರಿಸಲು ಪ್ರಾರಂಭಿಸಲು ಒತ್ತಾಯಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:04 IST
Last Updated 20 ಸೆಪ್ಟೆಂಬರ್ 2025, 5:04 IST
ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ಬಿಜೆಪಿಯಿಂದ ತಹಶೀಲ್ದಾರ್‌ ಪಿರೋಜಷಾ ಸೊಮನಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು
ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ಬಿಜೆಪಿಯಿಂದ ತಹಶೀಲ್ದಾರ್‌ ಪಿರೋಜಷಾ ಸೊಮನಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು   

ಹಳಿಯಾಳ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಿ ಕಬ್ಬು ಬೆಳೆಗಾರರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಂಡು ಸ್ಥಳೀಯ ಸಕ್ಕರೆ ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭಿಸಬೇಕೆಂದು ಆಗ್ರಹಿಸಿ ಬಿಜೆಪಿ ಹಳಿಯಾಳ ಮಂಡಳ ರೈತ ಮೋರ್ಚಾ ವತಿಯಿಂದ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ತಹಶೀಲ್ದಾರ್ ಫಿರೋಜಷಾ ಸೊಮನಕಟ್ಟಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಕಬ್ಬು ಬೆಳೆಗಾರರು ಬೇಡಿಕೆಗಳನ್ನು ಈಡೇರಿಸುವಂತೆ 2016-17ನೇ ಸಾಲಿನಿಂದ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಆದರೆ ಕಾರ್ಖಾನೆ ಆಡಳಿತ ಮಂಡಳಿ ಸುಳ್ಳು ಭರವಸೆಗಳನ್ನು ನೀಡುತ್ತಾ ಪ್ರತಿ ವರ್ಷ ರೈತರಿಂದ ಕಬ್ಬು ಪಡೆದು ಕಾರ್ಖಾನೆ ನಡೆಸುತ್ತಿದ್ದಾರೆ. ರೈತರ ಬಾಕಿ ಹಣ ಕಬ್ಬಿಗೆ ₹305ರಂತೆ ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂದು ಕಾರ್ಖಾನೆಯವರು ಒಪ್ಪಿಕೊಂಡಿದ್ದಾರೆ. ಹಣ ಈವರೆಗೂ ರೈತರ ಖಾತೆಗೆ ಜಮಾ ಆಗಿಲ್ಲ. ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಯಿಂದ ತೂಕದ ಯಂತ್ರದಲ್ಲಿ ಮೋಸವಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದು, ರೈತರ ಬೇಡಿಕೆಯಂತೆ ಸರ್ಕಾರದ ನಿರ್ದೇಶನದಂತೆ ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭವಾಗುವ ಮೊದಲು ತೂಕದ ಯಂತ್ರವನ್ನು ಕಾರ್ಖಾನೆಯ ಹೊರಗಡೆ ಅಳವಡಿಸಬೇಕು. ಸ್ಥಳೀಯರಿಗೆ ಕಾರ್ಖಾನೆ ಎಲ್ಲಾ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂ ಮಾಡುವುದು, ಸಿನಿಯಾರಿಟಿಯ ಮೂಲಕ ಕಬ್ಬು ಕಟಾವು ಮಾಡಬೇಕು ಹಾಗೂ ಲಗಾಣಿ ಬಂದ ಮಾಡಬೇಕು. ಜನವರಿಯಿಂದ ಮಾರ್ಚ್‌ ವರೆಗೆ ನುರಿಸುವ ಕಬ್ಬು ಬಿಸಿಲು ಮತ್ತು ನೀರು ಕಡಿಮೆ ಇರುವುದರಿಂದ ತೂಕದಲ್ಲಿ ವ್ಯತ್ಯಾಸವಾಗುತ್ತಿದ್ದು, ಅಂತಹ ಕಬ್ಬು ಬೆಳೆಗಾರರಿಗೆ ₹100ರೀಮದ ₹200 ಪ್ರೋತ್ಸಾಹ ಧನ ನೀಡಬೇಕು ಎಂದರು.

ADVERTISEMENT

ಮೆಕ್ಕೆಜೋಳ ಮತ್ತು ಭತ್ತದ ಖರೀದಿ ಕೇಂದ್ರಗಳ ಸ್ಥಾಪನೆ, ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದಕ್ಕೆ ಸೂಕ್ತ ಪರಿಹಾರ, ಮೆಕ್ಕೆಜೋಳ ಮತ್ತಿತರ ಬೆಳೆ ಹಾನಿಯಾಗಿದ್ದಕ್ಕೂ ಬೆಳೆ ಪರಿಹಾರ ಸೇರಿಂದತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಸಕ್ಕರೆ ಕಾರ್ಖಾನೆಯ ವಿರುದ್ಧ ಕಬ್ಬು ಬೆಳೆಗಾರ ರೈತರ ಜೊತೆ ಹೋರಾಟ ಮಾಡಲಾಗುವುದೆಂದು ತಿಳಿಸಿದರು.

ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸೋನಪ್ಪ ಸುಣಕಾರ, ಮುಖಂಡರಾದ ಬಸಣ್ಣ ಕುರುಬಗಟ್ಟಿ, ನಾರಾಯಣ ಕೇಸರೆಕರ, ವಿಠ್ಠಲ ಸಿದ್ದನ್ನವರ ಸಂಗೀತಾ ಜಾವಳೇಕರ, ಮಾರುತಿ ಪೇಡ್ನೆಕರ, ಜಗನಾಥ ಪೂಜಾರಿ, ಮಂಗೇಶ ದೇಶಪಾಂಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.