ADVERTISEMENT

ಹಳಿಯಾಳ | ಪ್ರತಿ ಟನ್‌ಗೆ ₹3,300 ದರ ಪಾವತಿಸಿ: ಕಬ್ಬು ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:44 IST
Last Updated 28 ಅಕ್ಟೋಬರ್ 2025, 4:44 IST
ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ರಸ್ತೆ ತಡೆ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೆಕರ ಕಬ್ಬು ಬೆಳೆಗಾರರ ಮುಖಂಡರು ಪಾಲ್ಗೊಂಡಿದ್ದರು 
ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ರಸ್ತೆ ತಡೆ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೆಕರ ಕಬ್ಬು ಬೆಳೆಗಾರರ ಮುಖಂಡರು ಪಾಲ್ಗೊಂಡಿದ್ದರು    

ಹಳಿಯಾಳ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯ ಹಾಗೂ ಶಿವಾಜಿ ಸರ್ಕಲ್‌ ಎದುರಿನ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ರೋಖೋ ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಟನೆ ಆರಂಭಿಸಿದ ಕಬ್ಬು ಬೆಳೆಗಾರರು 5 ಗಂಟೆಗೂ ಹೆಚ್ಚು ಕಾಲ ರಸ್ತೆ ರೋಖೋ ನಡೆಸಿದರು. ಜಿಲ್ಲಾಧಿಕಾರಿ ಲಿಖಿತವಾಗಿ ನೀಡುವವರೆಗೂ ಪ್ರತಿಭಟನೆ ಮೊಟಕುಗೊಳಿಸುವುದಿಲ್ಲ, ಪ್ರತಿಭಟನೆ ನಿರಂತರವಾಗಿರುತ್ತದೆ ಎಂದು ಪಟ್ಟು ಹಿಡಿದರು.

‘ರೈತರ ಹಿಂದಿನ ಬಾಕಿ ₹256 ಪಾವತಿಸಬೇಕು. ಪ್ರತಿ ಟನ್‌ಗೆ ₹3,300 ದರ ಪಾವತಿಸಬೇಕು. ದ್ವಿ-ಪಕ್ಷಿಯ ಒಪ್ಪಂದ ಆಗಬೇಕು. ಎಲ್ಲಿಯವರೆಗೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಆಗಲಿ, ಜಿಲ್ಲಾಧಿಕಾರಿ ಆಗಲಿ ತಮಗೆ ಲಿಖಿತವಾಗಿ ನೀಡುವುದಿಲ್ಲ, ಅಲ್ಲಿಯವರೆಗೆ ಪ್ರತಿಭಟನಾ ಧರಣಿ ರಸ್ತೆ ತಡೆ ಮುಂದುವರಿಸುತ್ತೇವೆ ಎಂದರು.

ADVERTISEMENT

ಪ್ರತಿಭಟನೆಗೆ ಮಾಜಿ ಶಾಸಕ ಸುನಿಲ ಹೆಗಡೆ ಹಾಗೂ ವಿಧಾನ ಪರಿಷತ ಮಾಜಿ ಸದಸ್ಯ ಎಸ್.ಎಲ್. ಘೋಟ್ನೆಕರ ಬೆಂಬಲ ವ್ಯಕ್ತಪಡಿಸಿ, ಈ ಐ ಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ. ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ ಗೆ ₹3,300 ಪಾವತಿಸಲೇ ಬೇಕು. ವಾಗ್ದಾನದಂತೆ ₹256 ಹಿಂದಿನ ಬಾಕಿಯನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ರೈತರು ಎಲ್ಲಾ ಒಗ್ಗಟ್ಟಾಗಿದ್ದೇವೆ ಎಂದರು.

ಕಾರ್ಖಾನೆಯಲ್ಲಿ ಅಳವಡಿಸಿದ್ದ ತೂಕದ ಯಂತ್ರದಲ್ಲಿ ಲೋಪವಿದೆ ಎಂದು ಆರೋಪಿಸಿ ಹೋರಾಟ ಮಾಡಿ ಕಾರ್ಖಾನೆಯ ಹೊರಗಡೆ ತೂಕದ ಯಂತ್ರ ಅಳವಡಿಸಲು ಆಗ್ರಹಿಸಲಾಗಿದ್ದು, ಕಾರ್ಖಾನೆಯವರು ತೂಕದ ಯಂತ್ರ ಹೊರಗಡೆ ಅಳವಡಿಸುವುದಾಗಿ ತಿಳಿಸಿದ್ದಾರೆ. ಅಳವಡಿಸುವವರೆಗೆ ಕಾರ್ಖಾನೆ ಒಳಗಡೆ ಅಳವಡಿಸಿದ ತೂಕದ ಯಂತ್ರವನ್ನು ರೈತರ ಮುಖಂಡರ ಸಮ್ಮುಖದಲ್ಲಿ ತೂಕ ಮಾಡಬೇಕು. ಲಗಾಣಿಯನ್ನು ಕಾರ್ಖಾನೆಯವರೇ ಪಾವತಿಸಬೇಕು ಎಂದು ಆಗ್ರಹಿಸಿದರು.

ನಂತರ ತಹಶೀಲ್ದಾರ್‌ ಫಿರೋಜಷಾ ಸೋಮನಕಟ್ಟಿ ಪ್ರತಿಭಟಣಾಕಾರರ ಬಳಿ ತೆರಳಿ, ಈಗಾಗಲೇ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆಯವರಿಗೆ ತಿಳಿಸಲಾಗಿದೆ. ಶೀಘ್ರದಲ್ಲಿಯೇ ಬೇಡಿಕೆಗಳನ್ನು ಈಡೇರಿಸಲಾಗುವುದು. ಅಲ್ಲಿಯವರೆಗೆ ಪ್ರತಿಭಟನೆ ಮೊಟ್ಟಕು ಗೊಳಿಸಿ ಎಂದಾಗ, ಕಬ್ಬು ಬೆಳೆಗಾರರ ಮುಖಂಡರು ತಮಗೆ ಲಿಖಿತವಾಗಿ ನೀಡಬೇಕೆಂದು ಪಟ್ಟು ಹಿಡಿದರು. ನಂತರ ಕಾರ್ಖಾನೆ ಹಿರಿಯ ಅಧಿಕಾರಿಗಳು ಕಬ್ಬು ಬೆಳೆಗಾರರ ಜೊತೆ ಚರ್ಚಿಸಿ ದರ ಘೋಷಣೆ, ಸೂಕ್ತ ದರ ನೀಡಿಯೇ ಕಾರ್ಖಾನೆ ಪ್ರಾರಂಭಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟಣೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಯಿತು.

ಮುಖಂಡರಾದ ಕುಮಾರ ಬೊಬಾಟಿ, ನಾಗೇಂದ್ರ ಜೀವೋಜಿ, ಶಂಕರ ಕಾಜಗಾರ, ಮಹೇಶ ಬೆಳಗಾಂವಕರ, ಸಾತೂರಿ ಗೋಡೆಮನಿ, ಮಂಜುಳಾ ಗೌಡ, ಸುರೇಶ ಶಿಮನ್ನವರ, ಬಲಿರಾಮ ಮೋರಿ, ರಾಮದಾಸ ಬೆಳಗಾಂವಕರ, ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಉಳ್ಳವೆಪ್ಪಾ ಬಡಿಗೇರ, ಅಶೋಕ ಮೇಟಿ, ಹಳಿಯಾಳ, ಧಾರವಾಡ, ಕಲಘಟಗಿ, ಮುಂಡಗೊಡ ತಾಲೂಕಿನ ರೈತ ಮುಖಂಡರು ಇದ್ದರು.

ಪರ್ಯಾಯ ವ್ಯವಸ್ಥೆ: ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿದ್ದ ಸ್ಥಳದಲ್ಲಿ ವಾಹನ ಸಂಚಾರ ದಟ್ಟಣೆ ತೀವ್ರವಾಗುತ್ತಿದ್ದಂತೆ, ಪೊಲೀಸರು ವಾಹನ ಸಂಚಾರವನ್ನು ಸುಮಾರು ಒಂದು ಕಿ.ಮೀ ದೂರದಿಂದಲೇ ಬೇರೆ ಬೇರೆ ಮಾರ್ಗವಾಗಿ ಸಾಗಿಸಿ ಪರ್ಯಾಯ ವ್ಯವಸ್ಥೆ ಮಾಡಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.