ADVERTISEMENT

‘ಜಾಗತಿಕ ಸ್ಪರ್ಧೆಗೆ ಅಣಿಗೊಳಿಸಿ’

ಬೇಸಿಗೆ ಶಿಬಿರ ಉದ್ಘಾಟನೆ: ಶಾಸಕ ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:32 IST
Last Updated 9 ಮೇ 2022, 16:32 IST
ಹಳಿಯಾಳದಲ್ಲಿ ನಡೆದ ತಾಲ್ಲೂಕಾ ಮಟ್ಟದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು
ಹಳಿಯಾಳದಲ್ಲಿ ನಡೆದ ತಾಲ್ಲೂಕಾ ಮಟ್ಟದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು   

ಹಳಿಯಾಳ: ನಿಸರ್ಗದ ಜೊತೆ ಸಂಪರ್ಕವಿದ್ದಾಗ ಮಾತ್ರ ಮಾನವ ಮಾನವನಾಗಿ ಬಾಳುತ್ತಾನೆ. ಮಕ್ಕಳು ಕೇವಲ ನಾಲ್ಕು ಗೋಡೆ ಮಧ್ಯೆ ಕುಳಿತು ಪಠ್ಯ ಕ್ರಮದ ಅಭ್ಯಾಸ ಮಾಡುವುದು ಮಾತ್ರವಲ್ಲ, ನಿಸರ್ಗದೊಂದಿಗೆ ಸಂಪರ್ಕವಿಟ್ಟುಕೊಂಡರೆ ಬಹಳಷ್ಟು ಬದಲಾವಣೆ ಸಾಧ್ಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಸೋಮವಾರದಂದು ಇಲ್ಲಿನ ಶಿವಾಜಿ ಗಲ್ಲಿಯಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಶಿವಾನುಭೂತಿ ಭವನ ದಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ತಾಲ್ಲೂಕುಮಟ್ಟದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇಂದಿನ ತಾಂತ್ರಿಕ ಯುಗದಲ್ಲಿ ಯಶಸ್ವಿಯಾಗ ಬೇಕಾದರೆ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಬೇಕು. ಆ ನಿಟ್ಟಿನಲ್ಲಿ ನಾವು ಮಕ್ಕಳನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧಗೊಳಿಸಬೇಕು ಎಂದರು.

ADVERTISEMENT

ಪ್ರಜಾಪಿತ ಬ್ರಹ್ಮಕುಮಾರಿಯ ಸಂಚಾಲಕಿ ಡಾ. ಪದ್ಮಕ್ಕ ಮಾತನಾಡಿ, ಮಕ್ಕಳು ಚಿಕ್ಕವರಿದ್ದಾಗ ಒಳ್ಳೆಯ ಸಂಸ್ಕಾರ, ಜೀವನದ ಮೌಲ್ಯ, ಪರಿಸರ ಜ್ಞಾನ, ಪ್ರಕೃತಿಯ ಬಗ್ಗೆ ತಿಳಿಸಿ ಕೊಟ್ಟಾಗ ಸಂಸ್ಕಾರಯುತರಾಗಿ ಬೆಳೆಯುತ್ತಾರೆ ಎಂದರು.

ಟಾಟಾ ಹಿಟಾಚಿ ಕಂಪನಿಯಿಂದ ಸಿಎಸ್‌ಆರ್‌ (ಸಾಮಾಜಿಕ ಹೊಣೆಗಾರಿಕೆ)ಯೋಜನೆ ಯಡಿ ಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡಲಾದ ಹೊರಾಂಗಣ ಹಾಗೂ ಒಳಾಂಗಣ ಆಟದ ಸಾಮಗ್ರಿ ಗಳನ್ನು ವಿತರಿಸಿದರು.

ಶಿಶು ಮತ್ತು ಮಕ್ಕಳ ಕಲ್ಯಾಣ ಅಬಿವೃದ್ದಿ ಅಧಿಕಾರಿ ಡಾ.ಲಕ್ಷ್ಮಿದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಅಜರ ಬಸರಿಕಟ್ಟಿ, ಉಪಾಧ್ಯಕ್ಷ ಸುವರ್ಣಾ ಮಾದರ, ಟಾಟಾ ಹಿಟಾಚಿ ಕಂಪನಿಯ ಹಿರಿಯ ಅಧಿಕಾರಿ ಪ್ರಶಾಂತ ದಿಕ್ಷೀತ, ಮುಖ್ಯಾಧಿಕಾರಿ ವೇಂಕಟೇಶ ನಾಗನೂರ ಉಪಸ್ಥಿತರಿದ್ದರು. ಸಿದ್ದಪ್ಪ ಬಿರಾದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.