ADVERTISEMENT

ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಸ್ವರ್ಣವಲ್ಲಿ ಶ್ರೀಗಳ ಭೇಟಿ ಮಳೆಯಲ್ಲಿ ಹಸಿರು ಮಾತು

ಮುಂಡಿಗೆಕೆರೆಗೆ ಸ್ವರ್ಣವಲ್ಲಿ ಶ್ರೀಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 13:37 IST
Last Updated 4 ಜೂನ್ 2020, 13:37 IST
ಶಿರಸಿ ತಾಲ್ಲೂಕಿನ ಸೋಂದಾ ಮುಂಡಿಗೆಕೆರೆಯಲ್ಲಿ ಅಳವಡಿಸಿರುವ ಫಲಕವನ್ನು ಸ್ವರ್ಣವಲ್ಲಿ ಶ್ರೀಗಳು ಅನಾವರಣಗೊಳಿಸಿದರು
ಶಿರಸಿ ತಾಲ್ಲೂಕಿನ ಸೋಂದಾ ಮುಂಡಿಗೆಕೆರೆಯಲ್ಲಿ ಅಳವಡಿಸಿರುವ ಫಲಕವನ್ನು ಸ್ವರ್ಣವಲ್ಲಿ ಶ್ರೀಗಳು ಅನಾವರಣಗೊಳಿಸಿದರು   

ಶಿರಸಿ: ಜಾಗತಿಕ ಪರಿಸರ ದಿನದ ಮುನ್ನಾದಿನ ಗುರುವಾರ ತಾಲ್ಲೂಕಿನ ಸೋಂದಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಹಸಿರು ಸ್ವಾಮೀಜಿ ಎಂದೇ ಪರಿಚಿತರಾಗಿರುವ, ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಭೇಟಿ ನೀಡಿದರು.

ನಾಡಿನ ಅಪರೂಪದ ಜೀವವೈವಿಧ್ಯ ತಾಣ ಎಂದು ಮುಂಡಿಗೆ ಕೆರೆಯನ್ನು ಗುರುತಿಸಿರುವ ಸೋಂದಾ ಗ್ರಾಮ ಪಂಚಾಯ್ತಿ ಪ್ರಮುಖರನ್ನು ಅಭಿನಂದಿಸಿದರು. ಕಳೆದ ಹಲವಾರು ವರ್ಷಗಳಂದ ಮುಂಡಿಗೆ ಕೆರೆ ರಕ್ಷಣೆಗೆ ರಚನಾತ್ಮಕ ಜಾಗೃತಿ ಆಂದೋಲನ ನಡೆಸುತ್ತಿರುವ ಜಾಗೃತ ಸಮಿತಿಯ ಕಾರ್ಯಕರ್ತರ ಶ್ರಮಕ್ಕೆ ಗೌರವ ಈಗ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಜೀವವೈವಿಧ್ಯತೆಗೆ ಪ್ರಾಧಾನ್ಯತೆ ನೀಡಿ ಎಂಬುದು ಜಾಗತಿಕ ಪರಿಸರ ದಿನದ ಘೋಷವಾಕ್ಯವಾಗಿದೆ. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಕಳೆದ 15 ದಿನಗಳಲ್ಲಿ ಜೀವವೈವಿಧ್ಯ ಜಾಗೃತಿ ಅಭಿಯಾನ ನಡೆಸಲಾಗಿದೆ. ಹಲವು ಕೆರೆ, ನದಿಮೂಲ, ಬೆಟ್ಟಗಳನ್ನು ಸೂಕ್ಷ್ಮ ಎಂದು ಗುರುತಿಸಿ, ಜೀವವೈವಿಧ್ಯ ದಾಖಲಾತಿ ಕಾರ್ಯಕ್ಕೆ ಬಲ ನೀಡಲಾಗಿದೆ’ ಎಂದರು.

ADVERTISEMENT

ಜನರ ಸಹಭಾಗಿತ್ವದಲ್ಲಿ ಸೋಂದಾ ಪ್ರದೇಶದ ಕೆರೆಗಳು, ದೇವರ ಕಾಡುಗಳ ಪರಿಸ್ಥಿತಿ ಸಮೀಕ್ಷೆ ಮಾಡಿ ರಕ್ಷಣಾ ಕಾರ್ಯ ಯೋಜನೆ ಸಿದ್ಧಪಡಿಸಲು ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಯಲ್ಲೇ ನಡೆದ ಹಸಿರು ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ, ತಾಲ್ಲೂಕು ಪಂಚಾಯ್ತಿ ಸದಸ್ಯ ನರಸಿಂಹ ಹೆಗಡೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಭಂಡಾರಿ, ಸದಸ್ಯರು, ಎಸಿಎಫ್ ರಘು, ಆರ್‌ಎಫ್‌ಒ ಬಸವರಾಜ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಹಾಜರಿದ್ದರು. ರತ್ನಾಕರ ಹೆಗಡೆ ಸ್ವಾಗತಿಸಿದರು. ಪಿಡಿಒ ಹರ್ಷ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.