ಹೊನ್ನಾವರ: ‘ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಯಾಗಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು ಕಾಡು ಪ್ರಾಣಿಗಳ ದಾಳಿಯನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಪಿ.ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.
‘ಉತ್ತರ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿಅಡಿಕೆ, ತೆಂಗು, ಭತ್ತ, ಅನಾನಸ್, ಶೇಂಗಾ, ಮಾವು ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದು, ಬಹುಪಾಲು ಬೆಳೆ ಕಾಡುಪ್ರಾಣಿಗಳ ಪಾಲಾಗಿ ರೈತ ಕಂಗಾಲಾಗಿದ್ದಾನೆ. ಮಂಗ ಹಾಗೂ ಕೆಂದಿಳಿನ ಹಾವಳಿಗೆ ಅಡಿಕೆ ಹಾಗೂ ತೆಂಗು ಬೆಳೆ ನಷ್ಟವಾಗುತ್ತಿದೆ. ಕಾಡು ಹಂದಿ ಹಾಗೂ ಮುಳ್ಳು ಹಂದಿ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ಧ್ವಂಸಗೊಳಿಸುತ್ತಿದ್ದು ಕಾಡುಪ್ರಾಣಿಗಳ ಹಾವಳಿಗೆ ನಲುಗಿ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ’ ಎಂದು ಅವರು ಮನವಿಪತ್ರದಲ್ಲಿ ವಿವರಿಸಿದ್ದಾರೆ.
‘ಕಾಡುಪ್ರಾಣಿಗಳಿಂದ ಉಂಟಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಸದರ ಉಪಸ್ಥಿತಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯ ಜೊತೆ ಜಿಲ್ಲೆಯ ಪ್ರಗತಿಪರ ರೈತರ ಸಂವಾದ ಸಭೆ ಏರ್ಪಡಿಸುವ ಜೊತೆಗೆ ಸರ್ಕಾರದ ಮಟ್ಟದಲ್ಲಿ ಸಭೆಯ ನಿರ್ಣಯ ಜಾರಿಗೆ ಬರುವಂತೆ ಅಗತ್ಯ ಪ್ರಯತ್ನ ಕೈಗೊಳ್ಳಬೇಕು’ ಎಂದು ಸಂಸದರನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.