ADVERTISEMENT

ಕಾಡಂಚಿನ ತೊಟ್ಟಿಗೆ ಟ್ಯಾಂಕರ್‌ ನೀರು

ಮುಂಡಗೋಡ: ವನ್ಯಪ್ರಾಣಿಗಳ ಬಾಯಾರಿಕೆ ತಣಿಸಲು ಮುಂದಾದ ಅರಣ್ಯ ಇಲಾಖೆ

ಶಾಂತೇಶ ಬೆನಕನಕೊಪ್ಪ
Published 30 ಮಾರ್ಚ್ 2019, 18:14 IST
Last Updated 30 ಮಾರ್ಚ್ 2019, 18:14 IST
ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಟ್ಯಾಂಕರ್‌ ಮೂಲಕ ತೊಟ್ಟಿಗೆ ನೀರು ತುಂಬಿಸುತ್ತಿರುವುದು
ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಟ್ಯಾಂಕರ್‌ ಮೂಲಕ ತೊಟ್ಟಿಗೆ ನೀರು ತುಂಬಿಸುತ್ತಿರುವುದು   

ಮುಂಡಗೋಡ (ಉತ್ತರ ಕನ್ನಡ):ಮರಗಿಡಗಳ ಅಡಿಯಲ್ಲಿ ಹರಿಯುತ್ತಿದ್ದ ಹಳ್ಳ ಜಲಮೂಲಗಳು ಬತ್ತಿವೆ. ಕಾಡುಪ್ರಾಣಿಗಳ ದಾಹ ನೀಗಿಸುತ್ತಿದ್ದ ಕೆರೆ ಕಟ್ಟೆಗಳು ಬರಿದಾಗಿವೆ. ಮೂಕಪ್ರಾಣಿಗಳು ಆಹಾರ, ನೀರು ಅರಸುತ್ತ ನಾಡಿನತ್ತ ಮುಖ ಮಾಡುತ್ತಿವೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ವನ್ಯಪ್ರಾಣಿಗಳ ಬಾಯಾರಿಕೆ ಇಂಗಿಸಲು ಮುಂದಾಗಿದ್ದಾರೆ.

ತಾಲ್ಲೂಕಿನ ಸಾಲಗಾಂವ, ಕರಗಿನಕೊಪ್ಪ, ಮುಂಡಗೋಡ ಸೇರಿದಂತೆ ವಿವಿಧ ಅರಣ್ಯಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಅವುಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುತ್ತಿದ್ದಾರೆ.

ಬೋಳಾದ ಕಾಡು:ಒಣಗಿ ನಿಂತಿರುವಮರಗಳಿಂದಾಗಿನಾಡು ಹಾಗೂ ಕಾಡಿನ ನಡುವಿನ ಅಂತರ ಕಡಿಮೆಯಾದಂತೆ ಪ್ರಾಣಿಗಳಿಗೆ ಭಾಸವಾಗುತ್ತಿದೆ. ಇದರಿಂದ ಆಹಾರ, ನೀರಿಗಾಗಿ ಜಿಂಕೆಗಳು ಅರಣ್ಯದ ಅಂಚಿನ ಗದ್ದೆ, ತೋಟಕ್ಕೆ ಬರುತ್ತಿವೆ. ಅವುಗಳ ಮೇಲೆ ನಾಯಿಗಳು ದಾಳಿ ಮಾಡುವುದು ಅಥವಾ ದಿಕ್ಕೆಟ್ಟು ಓಡುವಾಗ ವಾಹನಗಳಿಗೆ ಸಿಲುಕಿ ಬಲಿಯಾಗುತ್ತಿರುವಘಟನೆಗಳು ನಡೆಯುತ್ತಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಖಗಮೃಗಗಳಿಗೆ ಕಾಡಿನಲ್ಲಿ ನೀರು ಸಿಗುವ ವ್ಯವಸ್ಥೆ ಮಾಡಿ, ಈ ಮೂಲಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ.

ADVERTISEMENT

ಸಂಗ್ರಹಣಾ ಟ್ಯಾಂಕ್‌ಗಳ ಹೊರಭಾಗದಲ್ಲಿಯೂ ಸ್ವಲ್ಪ ಮಟ್ಟಿಗೆ ನೀರು ಹರಿಸಿ ಭೂಮಿಯನ್ನು ಹಸಿ ಮಾಡಲಾಗುತ್ತದೆ. ಇದರಿಂದ ಪ್ರಾಣಿ, ಪಕ್ಷಿಗಳಿಗೆ ಜಲಮೂಲದ ಅರಿವಾಗುತ್ತದೆ.

‘ಅರೆಮಲೆನಾಡಿನಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಎರಡು ವರ್ಷಗಳ ಹಿಂದೆ ಎದುರಾಗಿದ್ದ ಸನ್ನಿವೇಶ ಪುನರಾವರ್ತನೆ ಆದಂತಿದೆ. ಆಗಲೂ ಅರಣ್ಯಪ್ರದೇಶದ ವಿವಿಧೆಡೆ ನೀರು ತುಂಬಿಸುವ ಕಾರ್ಯ ಮಾಡಲಾಗಿತ್ತು.ಈ ಬಾರಿ ಮಾರ್ಚ್‌ ಅಂತ್ಯದಲ್ಲಿಯೇ ಕಾಡಿನಲ್ಲಿ ಕೆರೆಕಟ್ಟೆಗಳು ಬರಿದಾಗಿವೆ.ಬೇಗ ಮಳೆ ಬಂದರೆ ಸಮಸ್ಯೆ ದೂರವಾಗಬಹುದು’ ಎನ್ನುತ್ತಾರೆ ಗ್ರಾಮ ಅರಣ್ಯ ಸಮಿತಿಯ ಪ್ರಮುಖ ರಾಜು ಗುಬ್ಬಕ್ಕನವರ್.

‘ನೀರಿನ ಅಭಾವದಿಂದ ಪ್ರಾಣಿ, ಪಕ್ಷಿಗಳು ತೊಂದರೆ ಪಡಬಾರದು ಎಂದು ನಾಲ್ಕೈದು ಕಡೆ ತೊಟ್ಟಿಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಮಾಡಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ಸುರೇಶ ಕುಲ್ಲೋಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.