ADVERTISEMENT

ಶಿರಸಿ: ‘ಸಪ್ತಪದಿ’ ಯೋಜನೆ ಜಾರಿಗೆ ನಿರಾಸಕ್ತಿ

ಮುಜರಾಯಿ ಇಲಾಖೆ ಆದೇಶ ಪಾಲನೆಗೆ ದೇವಾಲಯಗಳ ಹಿಂದೇಟು

ಗಣಪತಿ ಹೆಗಡೆ
Published 25 ಮೇ 2022, 19:30 IST
Last Updated 25 ಮೇ 2022, 19:30 IST
ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ಮುಂಡಗೋಡಿನ ಅಕ್ಷಯಕುಮಾರ, ಜಮಖಂಡಿಯ ರೇಖಾ ಸತಿ–ಪತಿಗಳಾದರು.
ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ಮುಂಡಗೋಡಿನ ಅಕ್ಷಯಕುಮಾರ, ಜಮಖಂಡಿಯ ರೇಖಾ ಸತಿ–ಪತಿಗಳಾದರು.   

ಶಿರಸಿ: ಅಲ್ಪಸಂಖ್ಯಾತರ ಅನುಕೂಲಕ್ಕೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ‘ಶಾದಿಭಾಗ್ಯ’ ಯೋಜನೆ ರದ್ದುಗೊಳಿಸಿ, ಹಿಂದೂ ಸಮುದಾಯದ ಬಡವರಿಗೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ‘ಸಪ್ತಪದಿ’ ಯೋಜನೆ ಕಾರ್ಯರೂಪಕ್ಕೆ ಜಿಲ್ಲೆಯ ದೇವಾಲಯಗಳೇ ಹಿಂದೇಟು ಹಾಕಿವೆ.

2019ರಲ್ಲಿ ಅಂದಿನ ಮುಜರಾಯಿ ಇಲಾಖೆ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಈ ಯೋಜನೆ ಪರಿಚಯಿಸಿದ್ದರು. ಬಡ ಕುಟುಂಬದ ಯುವಕ–ಯುವತಿ ವಿವಾಹವಾಗಲು ಪ್ರತಿ ಜೋಡಿಗೆ ತಲಾ 8 ಗ್ರಾಂ ಬಂಗಾರದ ತಾಳಿ, ₹15 ಸಾವಿರ ಸಹಾಯಧನ ಒದಗಿಸುವುದು ಯೋಜನೆಯ ಉದ್ದೇಶ ಆಗಿತ್ತು. ಯೋಜನೆ ಜಾರಿಗೆ ಬಂದು ಮೂರು ವರ್ಷ ಕಳೆದರೂ ಜಿಲ್ಲೆಯಲ್ಲಿ ಒಂದೂ ವಿವಾಹ ನಡೆದಿಲ್ಲ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ‘ಎ’ ಗ್ರೇಡ್ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಆಯೋಜಿಸಿ ಅಲ್ಲಿ ಈ ವಧು–ವರರಿಗೆ ವಿವಾಹ ಮಾಡಲು ಸೂಚಿಸಲಾಗಿತ್ತು. ವಿವಾಹದ ಖರ್ಚುವೆಚ್ಚವನ್ನು ಆಯಾ ದೇವಾಲಯಗಳೇ ಭರಿಸಲು ಆದೇಶಿಸಲಾಗಿತ್ತು. ಜಿಲ್ಲೆಯಲ್ಲಿ ಶಿರಸಿಯ ಮಾರಿಕಾಂಬಾ ದೇವಾಲಯ, ಇಡಗುಂಜಿಯ ವಿನಾಯಕ ದೇವಾಲಯ ಹಾಗೂ ಭಟ್ಕಳದ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಾಲಯಗಳನ್ನು ಆಯ್ಕೆ ಮಾಡಲಾಗಿತ್ತು.

ADVERTISEMENT

‘ಇಡಗುಂಜಿ ದೇವಾಲಯದವರು ಕೋರ್ಟ್ ವ್ಯಾಜ್ಯದ ಕಾರಣ ಮುಂದಿಟ್ಟು ಸಪ್ತಪದಿ ವಿವಾಹಕ್ಕೆ ನಿರಾಕರಿಸಿದ್ದಾರೆ. ಮಾರಿಕಾಂಬಾ ದೇವಾಲಯ, ಅಳ್ವೆಕೋಡಿ ದೇವಾಲಯಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದ್ದರೂ ಸ್ಪಂದಿಸಿಲ್ಲ’ ಎನ್ನುತ್ತಾರೆ ಮುಜರಾಯಿ ಇಲಾಖೆ ಅಧಿಕಾರಿಗಳು.

‘ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡದ ಕಾರಣ ಸಪ್ತಪದಿ ಯೋಜನೆ ಅಡಿ ವಿವಾಹ ನಡೆಸುತ್ತಿಲ್ಲ. ಆದರೆ, 1990ರ ದಶಕದಿಂದಲೇ ದೇವಾಲಯದಲ್ಲಿ ಸಾಮೂಹಿಕ ವಿವಾಹ ಆಯೋಜನೆಯಾಗುತ್ತಿದೆ. ಅದರಂತೆ ಬಡ ಕುಟುಂಬದ ವಧು–ವರರಿಗೆ ದೇವಸ್ಥಾನದ ವತಿಯಿಂದ ಅಗತ್ಯ ಪರಿಕರ ಒದಗಿಸಿ ಮದುವೆ ಮಾಡಿಸುತ್ತಿದ್ದೇವೆ’ ಎಂದು ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

‘ಬೆಲೆ ಏರಿಕೆ ಹೆಚ್ಚಿರುವ ಈ ದಿನಗಳಲ್ಲಿ ಬಡ ಕುಟುಂಬದವರು ವಿವಾಹ ನೆರವೇರಿಸಲು ಸಪ್ತಪದಿ ಅನುಕೂಲ ಆಗುತ್ತಿತ್ತು. ಆದರೆ ದೇವಾಲಯಗಳ ನಿರಾಸಕ್ತಿಯ ಪರಿಣಾಮ ಯೋಜನೆಯ ಲಾಭ ಜನರಿಗೆ ಸಿಗದಂತಾಗಿದೆ’ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಮಾರಿಕಾಂಬಾ ದೇವಾಲಯದಲ್ಲಿ ವಿವಾಹ:

ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬುಧವಾರ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಏಕೈಕ ಜೋಡಿ ವಿವಾಹವಾಯಿತು. ಮುಂಡಗೋಡಿನ ಅಕ್ಷಯಕುಮಾರ ವಾಲೀಕಾರ ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿಯ ರೇಖಾ ಸಿದ್ದಾಪೂರ ಸತಿ–ಪತಿಗಳಾದರು. ವಿವಾಹದ ವೆಚ್ಚವನ್ನು ದೇವಾಲಯದವರೇ ಭರಿಸಿದರು. 1996 ರಿಂದ ಈವರೆಗೆ ದೇವಾಲಯದಲ್ಲಿ ಸಾಮೂಹಿಕ ವಿವಾಹದಲ್ಲಿ 126 ಜೋಡಿ ಮದುವೆಯಾಗಿದ್ದಾರೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ.

ವಿವಾಹ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ದೇವಾಲಯದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಸದಸ್ಯರಾದ ಸುಧಿರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ ಇದ್ದರು.

***

ಸಪ್ತಪದಿ ಯೋಜನೆ ಅಡಿ ಸಾಮೂಹಿಕ ವಿವಾಹ ನಡೆಸುವಂತೆ ಹಲವು ಬಾರಿ ಜಿಲ್ಲೆಯ ಮೂರು ದೇವಾಲಯಗಳಿಗೂ ಪತ್ರ ಬರೆಯಲಾಗಿದೆ.

-ರಾಜು ಪೂಜಾರ, ಮುಜರಾಯಿ ಇಲಾಖೆ ಪ್ರಭಾರ ಸಹಾಯಕ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.