
ಶಿರಸಿ: ನಗರದ ಬಿಡಕಿ ಬಯಲಿನ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಮೂಲಭೂತ ಸೌಲಭ್ಯ ಕಲ್ಪಿಸದ ನಗರಸಭೆಯು, ಸುಸಜ್ಜಿತ ಮಾರುಕಟ್ಟೆ ಯೋಜನೆಯನ್ನೇ ಕೈಬಿಟ್ಟಿದೆ ಎಂಬ ಆಕ್ಷೇಪ ವ್ಯಾಪಾರಿಗಳಿಂದ ವ್ಯಕ್ತವಾಗಿದೆ.
ಕೇಂದ್ರ ಬಸ್ ನಿಲ್ದಾಣದ ಎದುರಿನಲ್ಲೇ ಇರುವ ತರಕಾರಿ ಮಾರುಕಟ್ಟೆಯಲ್ಲಿ 63 ತರಕಾರಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಮಂಗಳವಾರ ನಡೆಯುವ ವಾರದ ಸಂತೆಯಂದು 100 ವ್ಯಾಪಾರಿಗಳಿಗೆ ಇದೇ ಸ್ಥಳದಲ್ಲಿ ಜಾಗ ಒದಗಿಸಲಾಗುತ್ತಿದೆ. ಇದರ ಹೊರತಾಗಿಯೂ 50ಕ್ಕೂ ಹೆಚ್ಚು ವ್ಯಾಪಾರಿಗಳು ಇಲ್ಲಿ ಜಾಗ ಸಿಗದೇ ರಸ್ತೆ ಬದಿಯಲ್ಲಿ ಕುಳಿತು ತರಕಾರಿ ಮಾರುತ್ತಾರೆ.
‘ವ್ಯಾಪಾರಿಗಳಿಂದ ಜಾಗದ ಬಾಡಿಗೆ ನಗರಸಭೆಗೆ ಸಂದಾಯವಾಗುತ್ತದೆ. ಆದರೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಇಕ್ಕಟ್ಟಾಗಿರುವ ಜಾಗದಲ್ಲಿಯೇ ಕುಳಿತು ವ್ಯಾಪಾರ ಮಾಡಬೇಕಿದೆ’ ಎಂಬುದು ಹಲವು ವ್ಯಾಪಾರಿಗಳ ದೂರು.
‘ಮಾರುಕಟ್ಟೆ ಪ್ರದೇಶದಲ್ಲಿ ಶೌಚಾಲಯ, ಮೂತ್ರಾಲಯ, ವಾಹನ ನಿಲುಗಡೆ ವ್ಯವಸ್ಥೆಯಿಲ್ಲ. ಬೀಡಾಡಿ ದನಗಳ ಹಾವಳಿ ಹೆಚ್ಚಿದೆ. ಬೇಸಿಗೆ ಕಾಲದಲ್ಲಿ ತರಕಾರಿ ಮತ್ತು ಸೊಪ್ಪುಗಳ ರಕ್ಷಣೆಗೆ ಯಾವುದೇ ಹೊದಿಕೆ ಇಲ್ಲದ ಕಾರಣ ಸಂಜೆಯಾಗುವಷ್ಟರಲ್ಲಿ ತರಕಾರಿಗಳು, ಸೊಪ್ಪುಗಳು ಒಣಗುತ್ತವೆ. ಮಳೆಗಾಲದಲ್ಲಿ ಕುಳಿತುಕೊಳ್ಳಲು ಕೆಸರು ನೀರಿನ ಸಮಸ್ಯೆ ಎದುರಾಗುತ್ತದೆ. ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಅಂಗಡಿ ತೆರವು ಮಾಡಿ ಬೇರೆಲ್ಲೋ ಜಾಗ ನೀಡಲಾಗುತ್ತದೆ. ಶಾಶ್ವತ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳು ಕಾಯಂ ಸಮಸ್ಯೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುಶೀಲಾ ಮಡಿವಾಳ.
‘ಈ ಹಿಂದೆ ಕೆಲವು ವ್ಯಾಪಾರಿಗಳು ವಿಶಾಲವಾದ ಬೇರೆ ಜಾಗದಲ್ಲಿ ಶಾಶ್ವತ ತರಕಾರಿ ಮಾರುಕಟ್ಟೆ ನಿರ್ಮಿಸುವಂತೆ ನಗರಸಭೆಗೆ ಮನವಿ ನೀಡಿದ್ದರು. ನಗರಸಭೆಯ ಸಭೆಗಳಲ್ಲಿ ಈ ವಿಷಯ ಸಾಕಷ್ಟು ಬಾರಿ ಚರ್ಚೆ ಕೂಡ ಆಗಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಜಾರಿಗೆ ಬಂದಿಲ್ಲ’ ಎಂದು ಅವರು ದೂರಿದರು.
‘ದಶಕಗಳಿಂದ ಬಿಡ್ಕಿ ಬಯಲಿನ ತಾತ್ಕಾಲಿಕ ಮಾರುಕಟ್ಟೆಯಲ್ಲಿಯೇ ವ್ಯಾಪಾರ, ವಹಿವಾಟು ನಡೆಸುತ್ತಿರುವ ಕೆಲವು ವ್ಯಾಪಾರಿಗಳು ಈ ಪ್ರದೇಶದಿಂದ ಸ್ಥಳಾಂತರಗೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದು, ವ್ಯಾಪಾರ ಕುಸಿಯುವ ಆತಂಕ ಹೊರಹಾಕುತ್ತಾರೆ. ಆದರೆ ಇನ್ನು ಕೆಲವರು ಮಾತ್ರ ಬೇರೆಡೆ ಮಾರುಕಟ್ಟೆ ನಿರ್ಮಿಸಲು ಸಹಮತ ಹೊಂದಿದ್ದಾರೆ. ಇದರಿಂದ ಕೂಡ ಪ್ರತ್ಯೇಕ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಬಲ ಬರುತ್ತಿಲ್ಲ’ ಎಂದು ನಗರಸಭೆ ಎಂಜಿನಿಯರ್ ಒಬ್ಬರು ಹೇಳಿದರು.
ಸಮಸ್ಯೆ ಕುರಿತು ಪ್ರತಿಕ್ರಿಯೆಗೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಬಿಡಕಿ ಬೈಲಿನ ಮಾರುಕಟ್ಟೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇರುವ ತೆರೆದ ಬಾವಿಯ ಸುತ್ತಲೂ ಗಲೀಜು ತುಂಬಿದ್ದು ಈ ನೀರು ಬಳಕೆಯೇ ಅನಿವಾರ್.– ರಾಜೇಶ, ಶಿರಸಿ ತರಕಾರಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.