ಭಟ್ಕಳ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ದೇಶದ ಗಡಿಭಾಗದಲ್ಲಿ ಯುದ್ದದ ಕಾರ್ಮೋಡ ಆವರಿಸಿದೆ. ಇತ್ತ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕರಾವಳಿ ಭಾಗದಲ್ಲಿಯೂ ಅಕ್ರಮ ನುಸುಳುಕೋರರ ಮೇಲೆ ಕರಾವಳಿ ಕಾವಲು ಪಡೆ ಹದ್ದಿನ ನಿಗಾ ಇರಿಸಿದೆ. ಪಹಲ್ಗಾಮ್ ದಾಳಿ ನಂತರ ನಿತ್ಯ ಮೀನುಗಾರಿಕೆಗೆ ತೆರಳುವ ದೋಣಿಗಳನ್ನು ತಪಾಸಣೆ ಮಾಡಿಯೇ ಮೀನುಗಾರಿಕೆಗೆ ತೆರಳಲು ಅವಕಾಶ ಮಾಡಿಕೊಡುವ ಪೊಲೀಸರು ಮೀನುಗಾರಿಕೆಗೆ ಮುಗಿಸಿ ಮರಳಿ ದಡಕ್ಕೆ ಬಂದ ಮೇಲೆ ಪುನಃ ತಪಾಸಣೆ ಮಾಡಿ ಖಚಿತಪಡಿಸಿಕೊಳ್ಳುತ್ತಿದ್ದಾರೆ.
ಭಟ್ಕಳದ ಬಂದರು, ಅಳ್ವೇಕೋಡಿ, ಮುರುಡೇಶ್ವರ ಕಡಲತೀರ ಸೇರಿದಂತೆ ತಾಲ್ಲೂಕಿನ ದೋಣಿ ನಿಲ್ಲುವ 27 ದಡಗಳಲ್ಲಿ ನಿತ್ಯ ಸಿಬ್ಬಂದಿಯಿಂದ ದೋಣಿ ತಪಾಸಣೆ ಮಾಡಲಾಗುತ್ತಿದೆ. ಕರಾವಳಿ ಕಾವಲು ಪೊಲೀಸ್ ಪಡೆಯ ಭಟ್ಕಳ ವೃತ್ತದ ಇನ್‌ಸ್ಪೆಕ್ಟರ್ ಕುಸುಮಧರ ಅವರ ನೇತ್ರತ್ವದಲ್ಲಿ ಮುರುಡೇಶ್ವರದ ಕಡಲತೀರ ಸೇರಿದಂತೆ ತಾಲ್ಲೂಕಿನ ಕರಾವಳಿ ತೀರದುದ್ದಕ್ಕೂ ಗಸ್ತು ತಿರುಗುವ ಸಿಬ್ಬಂದಿ ಹೊರರಾಜ್ಯದಿಂದ ಮೀನುಗಾರಿಕೆ ಕೆಲಸಕ್ಕೆ ಆಗಮಿಸಿರುವ ಕಾರ್ಮಿಕರು ಸೇರಿದಂತೆ ಕಡಲತಡಿಯಲ್ಲಿ ವಾಸವಾಗಿರುವ ಅಪರಿಚಿತರ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ.
ಮುರುಡೇಶ್ವರ ಪ್ರವಾಸಿ ತಾಣದಲ್ಲಿಯೂ ಅಪರಿಚಿತರ ಮೇಲೆ ನಿಗಾ ವಹಿಸಲಾಗಿದ್ದು, ಮುರುಡೇಶ್ವರದಲಿ ತಂಗುವ ಪ್ರವಾಸಿಗರ ಕಡ್ಡಾಯ ದಾಖಲೆ ಸಂಗ್ರಹಿಸಿ ಇಡುವಂತೆ ಲಾಡ್ಜ್ ಮಾಲೀಕರಿಗೆ ಸೂಚಿಸಲಾಗುತ್ತಿದೆ. ಮುರುಡೇಶ್ವರ ಪೊಲೀಸ್ ಠಾಣೆ ಪಿಎಸ್‌ಐ ಹಣುಮಂತಪ್ಪ ಅವರ ನೇತ್ರತ್ವದಲ್ಲಿ ನಿತ್ಯ ಲಾಡ್ಜ್‌ಗಳ ತಪಾಸಣೆ ಮಾಡಲಾಗುತ್ತಿದ್ದು, ವಿದೇಶಿ ಪ್ರಜೆಗಳು, ಅನುಮಾನಸ್ಪದ ವ್ಯಕ್ತಿಗಳು ವಾಸವಿದ್ದರೇ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.