ಮುಂಡಗೋಡ: ತಾಲ್ಲೂಕಿನ ಚಿಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ಈಚೆಗೆ ನಡೆದಿದ್ದ ಮನೆಗಳ್ಳತನದಿಂದ, ಗ್ರಾಮಸ್ಥರು ಆತಂಕಗೊಂಡಿದ್ದು, ಗ್ರಾಮದ ಯುವಕರು ಸ್ವಯಂಪ್ರೇರಣೆಯಿಂದ ರಾತ್ರಿ ಸಮಯದಲ್ಲಿ ಊರನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ.
ಎಂಟು ದಿನಗಳ ಹಿಂದೆ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು, ಮನೆಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಬೈಕ್‌ನಲ್ಲಿ ಕಳ್ಳರು ಬಂದಿದ್ದನ್ನು ಕೆಲವರು ನೋಡಿದ್ದರು. ಇದರಿಂದ ಗ್ರಾಮದ ಯುವಕರು ರಾತ್ರಿ ಸಮಯದಲ್ಲಿ ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು, ಓಣಿ ಓಣಿಯಲ್ಲಿ ತಿರುಗುತ್ತಾ, ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.
‘ಹಗಲಿನಲ್ಲಿ ಅಪರಿಚಿತರು ಬೈಕ್‌ನಲ್ಲಿ ಬಂದು ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಾರೆ. ನಸುಕಿನಲ್ಲಿ ಅಂತಹ ಮನೆಗಳನ್ನು ಕಳ್ಳತನ ಮಾಡುತ್ತಾರೆ ಎಂಬ ಆತಂಕ ಮನೆ ಮಾಡಿದೆ. ಬೈಕ್‌ಗಳ ನಂಬರ ಪ್ಲೇಟ್‌ಗಳನ್ನು ಮರೆಮಾಚಿರುತ್ತಾರೆ. ನೂರಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಅಪರಿಚಿತರ ಬೈಕ್‌ಗಳು ಓಡಾಟ ನಡೆಸಿದರೆ, ಜನರು ವಿಚಾರಿಸುವಂತ ಪರಿಸ್ಥಿತಿಯಿದೆ. ಗ್ರಾಮದ ಯುವಕರು ಸ್ವಯಂಪ್ರೇರಣೆಯಿಂದ ತಂಡ ಕಟ್ಟಿಕೊಂಡು, ನಸುಕಿನ ಜಾವದವರೆಗೂ ಒಂದೊಂದು ಓಣಿಯಲ್ಲಿ ತಿರುಗುವ ಕೆಲಸ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥ ಫಕ್ಕೀರಸ್ವಾಮಿ ಹುಲಿಯವರ ಹೇಳಿದರು.
‘ಗ್ರಾಮದ ದೇವಸ್ಥಾನ, ಮನೆಗಳನ್ನು ರಾತ್ರಿ ಸಮಯದಲ್ಲಿ ಯುವಕರು ಕಾಯುವ ಕೆಲಸಕ್ಕೆ ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸಾದ ಹುಲಿಯರ, ನವೀನ ಧರೆಪ್ಪನವರ, ಕಲ್ಮೇಶ ಸೋಮನಕೊಪ್ಪ, ರಾಜೇಶ ಎಲಿವಾಳ, ದೇವರಾಜ ಬುದ್ಯಾಳ, ಶಿವುಕುಮಾರ ಮಳ್ಳುರಮಠ, ಗಣೇಶ ಹಾದಿಮನಿ, ಪರಮೇಶ ಗಾಂಜಾನವರ, ಪ್ರತಾಪ ಹೋತ್ನಳ್ಳಿ, ಮಕಬೂಲ ಕಡಕೋಳ, ಗಣೇಶ ಗೋಸಾವಿ, ಮಾದೇವ ಶಿಗ್ಗಾಂವ ಸೇರಿದಂತೆ ಇತರರು ಗ್ರಾಮದ ರಕ್ಷಣೆಯಲ್ಲಿ ತೊಡಗಿದ್ದಾರೆ’ ಎಂದರು.
‘ಗಣೇಶಪುರದಲ್ಲಿ ಯುವಕರು ರಾತ್ರಿ ಸಮಯದಲ್ಲಿ ಊರ ಕಾಯುವ ಬಗ್ಗೆ ಮಾಹಿತಿಯಿಲ್ಲ. ಆದರೆ, ಈಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಕಳ್ಳರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಅಲ್ಲದೇ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ರಾತ್ರಿ ಪಾಳಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ರೌಂಡ್ಸ್ ಹಾಕುತ್ತಿದ್ದಾರೆ. ಕೆಲವೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು ರಾತ್ರಿಯಲ್ಲಿ ಸಂಚರಿಸುವ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪಿಎಸ್‌ಐ ಪರುಶುರಾಮ ಮಿರ್ಜಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.