ADVERTISEMENT

ಕಾರವಾರ: ಪರಿಹಾರ ಹಣ ಮರು ಪಾವತಿಸಲು ರೈತರಿಗೆ ನೋಟಿಸ್

ಪಿ.ಎಂ.ಕೆ.ಎಸ್. ಯೋಜನೆ: ನಿಯಮ ಉಲ್ಲಂಘಿಸಿ ಪರಿಹಾರ ಪಡೆದ 2,300 ರೈತರು

ಸದಾಶಿವ ಎಂ.ಎಸ್‌.
Published 25 ನವೆಂಬರ್ 2020, 19:30 IST
Last Updated 25 ನವೆಂಬರ್ 2020, 19:30 IST
   

ಕಾರವಾರ: ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿ.ಎಂ.ಕೆ.ಎಸ್.ವೈ) ಯೋಜನೆಯಡಿ ನೀಡಿದ ಪರಿಹಾರವನ್ನು, ಜಿಲ್ಲೆಯ ಸಾವಿರಾರು ರೈತರು ನಿಯಮ ಮೀರಿ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಜಿಲ್ಲೆಯ 2,300 ರೈತರಿಗೆ ಕೃಷಿ ಇಲಾಖೆಯು ನೋಟಿಸ್ ಜಾರಿ ಮಾಡಿದೆ.

ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡಿತ್ತು. ತಲಾ ₹ 2 ಸಾವಿರದಂತೆ ಮೂರು ಕಂತುಗಳಲ್ಲಿ ಒಟ್ಟು ₹ 6 ಸಾವಿರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿತ್ತು.

ಆದಾಯ ತೆರಿಗೆ ವ್ಯಾಪ್ತಿಗೆ ಬಾರದ, ಸರ್ಕಾರಿ ನೌಕರಿಯಲ್ಲಿ ಇಲ್ಲದ, ತಿಂಗಳಿಗೆ ₹ 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯದ, ಸಂವಿಧಾನಾತ್ಮಕ ಹುದ್ದೆ ಹೊಂದಿರದ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲು ಅರ್ಹರಾಗಿದ್ದರು. ಆದರೆ, ಹಲವರು ಈ ನಿಯಮಗಳನ್ನು ಉಪೇಕ್ಷಿಸಿದ್ದಾರೆ.

ADVERTISEMENT

‘ರೈತರು ನಿಯಮದ ಅರಿವು ಇದ್ದೋ ಇಲ್ಲದೆಯೋ ಪರಿಹಾರ ಪಡೆದಿದ್ದಾರೆ. ಕಳೆದ ವರ್ಷ ಆದಾಯ ತೆರಿಗೆ ಪಾವತಿಸದ ಕೆಲವರು ಈ ವರ್ಷ ಪಾವತಿಸಿದ್ದಾರೆ. ಇನ್ನು ಕೆಲವರು ಬ್ಯಾಂಕ್ ಸಾಲಕ್ಕಾಗಿ ಆದಾಯ ತೆರಿಗೆ ತುಂಬಿದ್ದಾರೆ. ಹೀಗೆ ಬೇರೆ ಬೇರೆ ಫಲಾನುಭವಿಗಳು ವಿವಿಧ ಕಾರಣಗಳಿಂದ ನೆರವು ಪಡೆಯಲು ಅನರ್ಹರಾಗಿದ್ದಾರೆ’ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಂಕ್ ಖಾತೆಗಳಿಗೆ ಪಾನ್ ನಂಬರ್ ಜೋಡಣೆಯಾಗಿರುತ್ತದೆ. ಹಾಗಾಗಿ ಬ್ಯಾಂಕ್ ಮೂಲಕ ಯಾವುದೇ ಹಣಕಾಸು ವಹಿವಾಟು ನಡೆಸಿದರೂ ಮಾಹಿತಿ ಸಿಗುತ್ತದೆ. ಇದರಿಂದಲೇ ಈ ವಿಚಾರವೂ ಗೊತ್ತಾಗಿದೆ’ ಎಂದು ಹೇಳಿದರು.

‘ಕಾರವಾರ, ಅಂಕೋಲಾ ತಾಲ್ಲೂಕುಗಳ ಫಲಾನುಭವಿಗಳಲ್ಲಿ ಹಲವರು ಸೀಬರ್ಡ್ ನಿರಾಶ್ರಿತರಿದ್ದಾರೆ. ಅವರಿಗೆ ಪರಿಹಾರದಲ್ಲಿ ಆದಾಯ ತೆರಿಗೆಯ ಮೊತ್ತ ಕಡಿತವಾಗಿದೆ. ಮತ್ತೆ ಕೆಲವು ಕುಟುಂಬಗಳಲ್ಲಿ ತಂದೆಯ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರೂ ಅವರ ಪುತ್ರ ಆದಾಯ ತೆರಿಗೆ ಪಾವತಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಇಂತಹ ಉದಾಹರಣೆಗಳಿವೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎನ್.ಗುಡಿಗಾರ್ ಹೇಳಿದರು.

ಸಬ್ಸಿಡಿಗೆ ಕುತ್ತು ಸಾಧ್ಯತೆ: ‘ಫಲಾನುಭವಿ ರೈತರು ನಿಯಮಗಳನ್ನು ಪಾಲಿಸಿರುವ ಬಗ್ಗೆ ಸ್ವಯಂ ಘೋಷಣೆಯ ಪತ್ರದಲ್ಲಿ ಸಹಿ ಮಾಡಿದ್ದಾರೆ. ನೋಟಿಸ್ ಪಡೆದ ರೈತರು ತಮ್ಮ ಬ್ಯಾಂಕ್ ಖಾತೆಗೆ ಜಮೆಯಾದ ಮೊತ್ತವನ್ನು ಡಿ.ಡಿ ಮೂಲಕ ಕೇಂದ್ರ ಸರ್ಕಾರಕ್ಕೆ ಪುನಃ ಪಾವತಿಸಬೇಕು. ಇಲ್ಲದಿದ್ದರೆ ಅವರಿಗೆ ಕೃಷಿ ಇಲಾಖೆಯ ಸಬ್ಸಿಡಿಗಳನ್ನು ನೀಡಲಾಗದು ಎಂದು ನಿಯಮದಲ್ಲಿದೆ. ಈ ಬಗ್ಗೆ ಸರ್ಕಾರದ ತೀರ್ಮಾನದಂತೆ ನಡೆದುಕೊಳ್ಳಲಾಗುವುದು’ ಎಂದು ಹೊನ್ನಪ್ಪ ಗೌಡ ಹೇಳಿದರು.

‘ನಿಯಮ ಉಲ್ಲಂಘಿಸಿದ ರೈತರ ಹೆಸರು ಹಾಗೂ ಅವರು ಕಂತುಗಳಲ್ಲಿ ಪಡೆದ ಮೊತ್ತವನ್ನು ಪಟ್ಟಿ ಮಾಡಿ ಕೇಂದ್ರ ಕೃಷಿ ಸಚಿವಾಲಯವು ಕೃಷಿ ಇಲಾಖೆಗೆ ಕಳುಹಿಸಿದೆ. ನೋಟಿಸ್ ಪಡೆದ ಹಲವು ರೈತರು ಹಣವನ್ನು ‍ಪುನಃ ಪಾವತಿಸುತ್ತಿದ್ದಾರೆ’ ಎಂದು ತಿಳಿಸಿದರು.

*
ನಿಯಮ ಮೀರಿದವರಿಗೆ ಕೃಷಿ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂತಹ ಪ್ರಕರಣಗಳು ಉತ್ತರ ಕನ್ನಡದಲ್ಲಿ ಕಡಿಮೆಯಿದೆ.
–ಹೊನ್ನಪ್ಪ ಗೌಡ, ಜಂಟಿ ಕೃಷಿ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.