ADVERTISEMENT

ಶಿರಸಿ: ಮೂರು ಪ್ರದೇಶ ಸೀಲ್‌ಡೌನ್

ಆರು ಜನರಿಗೆ ಕೋವಿಡ್ ದೃಢ: ಸೋಂಕಿತನ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 14:29 IST
Last Updated 4 ಜುಲೈ 2020, 14:29 IST
ಶಿರಸಿ ಜಿಲ್ಲಾ ತರಬೇತಿ ಕೇಂದ್ರದ ಚಿಕಿತ್ಸಾ ಕೇಂದ್ರದ ಸಿದ್ಧತೆಯನ್ನು ಅಧಿಕಾರಿಗಳು ಪರಿಶೀಲಿಸಿದರು
ಶಿರಸಿ ಜಿಲ್ಲಾ ತರಬೇತಿ ಕೇಂದ್ರದ ಚಿಕಿತ್ಸಾ ಕೇಂದ್ರದ ಸಿದ್ಧತೆಯನ್ನು ಅಧಿಕಾರಿಗಳು ಪರಿಶೀಲಿಸಿದರು   

ಶಿರಸಿ: ನಗರದಲ್ಲಿ ಶನಿವಾರ ಆರು ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಮೂರು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ರೋಗ ಲಕ್ಷಣವಿಲ್ಲದ ಸೋಂಕಿತರಿಗೆ ಹೊರವಲಯದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಗೊಳಿಸಲಾಗಿದೆ.

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 50 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿನ ವ್ಯವಸ್ಥೆಯನ್ನು ಶನಿವಾರ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಪರಿಶೀಲಿಸಿದರು. ಬೈಕ್ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿ ಇಲ್ಲಿನ ಸಬ್‌ ಜೈಲ್‌ನಲ್ಲಿದ್ದ ಆರೋಪಿಗೆ (ಪಿ–12057) ಕೋವಿಡ್ 19 ದೃಢಪಟ್ಟಿತ್ತು. ಈತನಿಗೆ ಕಾರವಾರದ ಕ್ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಸಬ್‌ ಜೈಲಿನ ಇನ್ನೂ ಮೂವರು ಆರೋಪಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂವರಿಗೆ ಇಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಆರೋಪಿ ಭೇಟಿ ನೀಡಿದ್ದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು, ತಾಲ್ಲೂಕಿನ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ‘ಸೀಲ್‌ಡೌನ್ ಮಾಡಿರುವ ಪ್ರದೇಶದ ಸಾರ್ವಜನಿಕರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುವುದು. ಕೋವಿಡ್ 19 ದೃಢಪಟ್ಟಿರುವ ಬೆಂಗಳೂರಿನಿಂದ ಬಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ಬೆಂಗಳೂರಿನಲ್ಲಿರುವಾಗಲೇ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಫಲಿತಾಂಶ ಬರುವ ಮುನ್ನವೇ ಅವರು, ಶಿರಸಿಗೆ ಬಂದಿದ್ದು, ಅವರಿಗೆ ಸೋಂಕು ಇರುವ ವಿಷಯವನ್ನು ಬಿಬಿಎಂಪಿ ಖಚಿತಪಡಿಸಿದೆ. ಮಾಹಿತಿ ನೀಡದೇ ಇಲ್ಲಿಗೆ ಬಂದಿರುವ ಕಾರಣ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ADVERTISEMENT

ಶನಿವಾರ ಸೋಂಕು ದೃಢಪಟ್ಟಿರುವ ಮೂವರನ್ನು ಚಿಕಿತ್ಸೆಗಾಗಿ ಕಾರವಾರಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಶಾರೀರಿಕ ಅಂತರ ಕಾಪಾಡಿಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಭಾಗಗಳ ಅಂಗಡಿ ಮಾಲೀಕರು, ಗ್ರಾಹಕರು ಮುಖಗವಸು ಬಳಸಿ, ವ್ಯಾಪಾರ ವಹಿವಾಟು ನಡೆಸಬೇಕು. ತಪ್ಪಿದಲ್ಲಿ ಅಂಗಡಿ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಸಿಪಿಐ ಪ್ರದೀಪ ಬಿ.ಯು, ಪಂಡಿತ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಅವರು ಚಿಕಿತ್ಸಾ ಕೇಂದ್ರದ ಸಿದ್ಧತೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.