ADVERTISEMENT

ಗಡಿಭಾಗದಲ್ಲಿ ಹುಲಿಹೆಜ್ಜೆ: ಡಂಗುರ ಹೊಡೆಸಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 15:26 IST
Last Updated 13 ಫೆಬ್ರುವರಿ 2020, 15:26 IST
 ಮುಂಡಗೋಡ ಹಾಗೂ ಕಲಘಟಗಿ ಗಡಿಭಾಗದ ಬೆಂಡ್ಲಗಟ್ಟಿ ಗ್ರಾಮದಂಚಿನ ಗದ್ದೆಯಲ್ಲಿ ಹುಲಿ ಹೆಜ್ಜೆ ಗುರುತು ಮೂಡಿರುವುದು
 ಮುಂಡಗೋಡ ಹಾಗೂ ಕಲಘಟಗಿ ಗಡಿಭಾಗದ ಬೆಂಡ್ಲಗಟ್ಟಿ ಗ್ರಾಮದಂಚಿನ ಗದ್ದೆಯಲ್ಲಿ ಹುಲಿ ಹೆಜ್ಜೆ ಗುರುತು ಮೂಡಿರುವುದು   

ಮುಂಡಗೋಡ: ಕಲಘಟಗಿ ಹಾಗೂ ಮುಂಡಗೋಡ ಗಡಿಭಾಗದಲ್ಲಿ ಹುಲಿ ಪ್ರತ್ಯಕ್ಷವಾಗಿರುವ ಸಾಧ್ಯತೆಯನ್ನು ಶಂಕಿಸಿ, ತಾಲ್ಲೂಕಿನ ಹುನಗುಂದ ಹಾಗೂ ಅತ್ತಿವೇರಿ ಗ್ರಾಮಗಳಲ್ಲಿ ‘ಡಂಗುರ’ ಹೊಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.

ಕಲಘಟಗಿ ತಾಲ್ಲೂಕಿನ ಬೆಂಡ್ಲಗಟ್ಟಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಹುಲಿ ಪ್ರತ್ಯಕ್ಷವಾಗಿತ್ತು. ಅರಣ್ಯ ಸಿಬ್ಬಂದಿಗೆ ಅದನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಅಂದಿನಿಂದ ಅಕ್ಕಪಕ್ಕದ ಗ್ರಾಮಗಳ ಅಂಚಿನಲ್ಲಿ ಹುಲಿ ಹೆಜ್ಜೆಗುರುತು ಕಾಣಿಸುತ್ತಿರುವುದು, ಆ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

‘ಕಲಘಟಗಿ ತಾಲ್ಲೂಕಿನೊಂದಿಗೆ ಮುಂಡಗೋಡ ತಾಲ್ಲೂಕಿನ ಹುನಗುಂದ ಹಾಗೂ ಅತ್ತಿವೇರಿ ಗ್ರಾಮಗಳ ಗಡಿ ಹಂಚಿಕೊಂಡಿವೆ. ಬೆಂಡ್ಲಗಟ್ಟಿ ಅರಣ್ಯದ ಜೊತೆಗೆ ಆ ತಾಲ್ಲೂಕಿನ ದಟ್ಟವಾದ ಅರಣ್ಯ ಇರುವುದರಿಂದ, ಮುಂಡಗೋಡ ಗಡಿ ಪ್ರದೇಶದಲ್ಲಿಯೂ ಹುಲಿ ಸಂಚಾರ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಕಾಳಿ ಅರಣ್ಯ ಪ್ರದೇಶದಿಂದ ಹುಲಿ ಬಂದಿದ್ದೇ ಆದರೆ, ಮರಳಿ ಅದೇ ಅರಣ್ಯಕ್ಕೆ ಹೋಗುತ್ತದೆ. ಆಗ ಸಹಜವಾಗಿ ಮುಂಡಗೋಡ, ಯಲ್ಲಾಪುರ ಅರಣ್ಯದಲ್ಲಿ ಸಂಚಾರ ನಡೆಸಬಹುದು’ ಎನ್ನುತ್ತಾರೆ ಕಲಘಟಗಿ ಆರ್‌ಎಫ್ಓ ಶ್ರೀಕಾಂತ ಪಾಟೀಲ.

ADVERTISEMENT

‘ಬೆಂಡ್ಲಗಟ್ಟಿ ಭಾಗದಲ್ಲಿ ಹುಲಿ ಬಂದಿದೆ. ಕಾಡಿಗೆ ಯಾರೂ ಹೋಗದಂತೆ ಹಾಗೂ ದನಕರುಗಳನ್ನು ಸಾಧ್ಯವಾದಷ್ಟು ಊರ ಸನಿಹವೇ ಮೇಯಿಸುವಂತೆ ಗ್ರಾಮದಲ್ಲಿ ಡಂಗುರ ಹೊಡೆಸಿದ್ದಾರೆ’ ಎಂದು ಹುನಗುಂದ ಗ್ರಾಮದ ಮುಖಂಡ ಸಿದ್ಧಪ್ಪ ಹಡಪದ ಹೇಳಿದರು.

‘ಕಲಘಟಗಿ ಭಾಗದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಕಳೆದ ಎರಡು ದಿನಗಳಿಂದ ಮುಂಡಗೋಡ ತಾಲ್ಲೂಕಿನ ಅರಣ್ಯ ಸಿಬ್ಬಂದಿ ಸಹ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕಾಡಿನತ್ತ ಮರಳಿರುವ ಸಾಧ್ಯತೆಯಿದೆ’ ಎಂದು ಯಲ್ಲಾಪುರ ಡಿಎಫ್ಒ ಗೋಪಾಲಕೃಷ್ಣ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.