
ಕಾರವಾರ: ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿರಂಗಾ ರ‍್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಂಡು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿದರು.
ಇಲ್ಲಿನ ಮಾಲಾದೇವಿ ಮೈದಾನದಿಂದ ರ‍್ಯಾಲಿ ಆರಂಭಗೊಂಡಿತು. ಅರ್ಧ ಕಿ.ಮೀ ಉದ್ದದ ಧ್ವಜವನ್ನು ಹಿಡಿದು ಮೆರವಣಿಗೆ ನಡೆಸಲಾಯಿತು. ಅದರ ಹೊರತಾಗಿಯೂ ಮೆರವಣಿಗೆಯಲ್ಲಿ ಸಾಗಿದ ಪ್ರತಿಯೊಬ್ಬರ ಕೈಯಲ್ಲೂ ಧ್ವಜಗಳಿದ್ದವು. ‘ಆಪರೇಷನ್ ಸಿಂಧೂರ’ದ ಯಶಸ್ಸಿಗೆ ಸೈನಿಕರನ್ನು ಅಭಿನಂದಿಸಲು ಮೆರವಣಿಗೆ ಆಯೋಜಿಸಲಾಗಿತ್ತು.
ಸುಮಾರು 2.5 ಕಿ.ಮೀ ದೂರದವರೆಗೆ ಮುಖ್ಯರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಅಂಬೇಡ್ಕರ್ ವೃತ್ತದಲ್ಲಿ ಸಮಾರೋಪಗೊಂಡಿತು. ಅಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ‘ನೆರೆಯ ಪಕಿಸ್ತಾನದ ಆಟಾಟೋಪಕ್ಕೆ ಆಪರೇಷನ್ ಸಿಂಧೂರದ ಮೂಲಕ ದೇಶದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ನಿರ್ಧಾರದಿಂದ ಭಯೋತ್ಪಾದಕ ನೆಲೆಗಳು ನಾಶವಾಗಿವೆ’ ಎಂದರು.
‘ಆಪರೇಷನ್ ಸಿಂಧೂರ ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ಜಗತ್ತಿಗೆ ಭಾರತದ ಸೇನಾ ಸಾಮರ್ಥ್ಯದ ಅರಿವು ಮೂಡಿಸಿದೆ’ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ನಗರಸಭೆ, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.