ADVERTISEMENT

ರಸ್ತೆ ದುರವಸ್ಥೆ: ಮತದಾನ ಬಹಿಷ್ಕರಿಸುವ ಎಚ್ಚರಿಕೆ

ಚಾಲನೆ ದೊರೆತು ಎರಡು ತಿಂಗಳಾದರೂ ಆರಂಭಗೊಳ್ಳದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 16:15 IST
Last Updated 5 ಫೆಬ್ರುವರಿ 2023, 16:15 IST
ಕಾರವಾರ ತಾಲ್ಲೂಕಿನ ತೊಡೂರು ಸೀಬರ್ಡ್ ಕಾಲೊನಿಯಲ್ಲಿ ರಸ್ತೆ ದುರವಸ್ಥೆ ಖಂಡಿಸಿ ಗ್ರಾಮಸ್ಥರು ರಸ್ತೆಯಲ್ಲಿಯೇ ಬಾಳೆಗಿಡ ನೆಟ್ಟು ಪ್ರತಿಭಟಿಸಿದರು
ಕಾರವಾರ ತಾಲ್ಲೂಕಿನ ತೊಡೂರು ಸೀಬರ್ಡ್ ಕಾಲೊನಿಯಲ್ಲಿ ರಸ್ತೆ ದುರವಸ್ಥೆ ಖಂಡಿಸಿ ಗ್ರಾಮಸ್ಥರು ರಸ್ತೆಯಲ್ಲಿಯೇ ಬಾಳೆಗಿಡ ನೆಟ್ಟು ಪ್ರತಿಭಟಿಸಿದರು   

ಕಾರವಾರ: ತಾಲ್ಲೂಕಿನ ತೊಡೂರು ಗ್ರಾಮ ಪಂಚಾಯ್ತಿಯ ತೊಡೂರು ಸೀಬರ್ಡ್ ಕಾಲೊನಿ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಭಾನುವಾರ ರಸ್ತೆಯ ಮಧ್ಯೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ರಸ್ತೆ ನಿರ್ಮಾಣ ಕೆಲಸ ನಡೆಯದಿದ್ದರೆ ವಿಧಾನಸಭೆ ಚುನಾವಣೆ ವೇಳೆ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಿಂದ ತೊಡೂರು ಸೀಬರ್ಡ್ ಕಾಲೊನಿಗೆ ತೆರಳುವ ಎರಡು ಕಿ.ಮೀ. ರಸ್ತೆಯ ಪೈಕಿ ಒಂದೂವರೆ ಕಿ.ಮೀ. ಹದಗೆಟ್ಟಿದೆ. ರಸ್ತೆ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಯಾಗಿದ್ದು ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೂಮಿಪೂಜೆ ನಡೆಸಿ ಚಾಲನೆ ನೀಡಿದ್ದರು.

‘ಸಚಿವರು, ಶಾಸಕರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಎರಡು ತಿಂಗಳಾದರೂ ಕೆಲಸ ಆರಂಭಿಸಿಲ್ಲ. ದುಃಸ್ಥಿತಿಯಿಂದ ಕೂಡಿರುವ ರಸ್ತೆಯಲ್ಲಿ ಸಾಗುವುದು ಕಷ್ಟವಾಗುತ್ತಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲೂ ಸಮಸ್ಯೆ ಆಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದರು.

ADVERTISEMENT

‘ರಸ್ತೆ ನಿರ್ಮಾಣ ಆಗದಿದ್ದರೆ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಮುಖಂಡರಿದ್ದರೂ ಅವರಿಗೆ ಗ್ರಾಮಕ್ಕೆ ಪ್ರಚಾರ ಕಾರ್ಯಕ್ಕೆ ಬರದಂತೆ ಮನವಿ ಮಾಡುತ್ತೇವೆ. ಜನರಿಗೆ ಸೌಕರ್ಯ ಒದಗಸಲು ಆಗದಿದ್ದರೆ ಮತ ಕೇಳುವ ಅಧಿಕಾರವೂ ಇಲ್ಲ ಎಂದು ಫಲಕ ಅಳವಡಿಸುತ್ತೇವೆ’ ಎಂದು ಆಕ್ರೋಶ ಹೊರಹಾಕಿದರು.

ಗ್ರಾಮಸ್ಥರಾದ ಪ್ರದೀಪ ನಾಯ್ಕ, ಸುಜಿತ್ ನಾಯ್ಕ, ಓಮು ಗೌಡ, ಬಿನ್ನಾ ಗೌಡ, ಕೋಮಾರ ಗೌಡ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.