ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಮದುವೆಯ ಹೊಸ ಅರ್ಜಿಗಳಿಗೆ ಅನುಮತಿಯಿಲ್ಲ: ಹೆಬ್ಬಾರ

ವಿಶೇಷ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲು ಸಚಿವ ಶಿವರಾಮ ಹೆಬ್ಬಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 13:40 IST
Last Updated 15 ಮೇ 2021, 13:40 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ: ‘ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕಿನ ನಿಯಂತ್ರಣದ ಸಲುವಾಗಿ ಮೇ 16ರ ಬೆಳಿಗ್ಗೆ 10ರಿಂದಲೇ ಕಟ್ಟುನಿಟ್ಟಿನ ಹಲವು ನಿಯಮಗಳು ಜಾರಿಯಾಗಲಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಲು ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಅನುಮತಿ ನಿರಾಕರಿಸಲಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ ಮದುವೆಗಳಲ್ಲಿ 40 ಜನರ ಬದಲು ಕೇವಲ 20 ಜನ ಭಾಗವಹಿಸಬಹುದು. ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 20ಕ್ಕಿಂತ ಹೆಚ್ಚು ಜನ ಸೇರಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅಲ್ಲದೇ ಬಂದಿರುವ ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ವಾಹನ ಸಂಚಾರ ನಿಷೇಧ

ADVERTISEMENT

ಪ್ರಸ್ತುತ ಜಾರಿಯಲ್ಲಿರುವ ಕರ್ಫ್ಯೂ ಅವಧಿಯಲ್ಲಿ (ಬೆಳಿಗ್ಗೆ 10ರಿಂದ ಮರುದಿನ ಬೆಳಿಗ್ಗೆ 6) ಎಲ್ಲ ವಾಹನಗಳ ಸಂಚಾರವನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ, ಎರಡೂ ವಿಭಾಗಗಳ ವಾಹನಗಳನ್ನು ಈ ಆದೇಶ ಒಳಗೊಂಡಿದೆ. ವೈದ್ಯಕೀಯ ತುರ್ತು ಸೇವೆಗಳನ್ನು ಮತ್ತು ಅಧಿಕೃತ ಗುರುತಿನ ಚೀಟಿ ಹೊಂದಿರುವ ಸರ್ಕಾರಿ ನೌಕರರನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಸಚಿವ ಹೆಬ್ಬಾರ ತಿಳಿಸಿದ್ದಾರೆ.

‘ಕಾರವಾರ ಮತ್ತು ದಾಂಡೇಲಿ ನಗರಗಳನ್ನು ವಿಶೇಷ ಕಂಟೈನ್‌ಮೆಂಟ್ ವಲಯಗಳೆಂದು ಘೋಷಿಸಬೇಕು. ಗ್ರಾಮ ಪಂಚಾಯಿತಿಗಳು ಹಾಗೂ ನಗರ ಪ್ರದೇಶದ ಯಾವುದೇ ವಾರ್ಡ್‌ನಲ್ಲಿ 40ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿದ್ದರೆ, ಅದನ್ನು ವಿಶೇಷ ಕಂಟೈನ್‌ಮೆಂಟ್ ಪ್ರದೇಶವೆಂದು ಗುರುತಿಸಬೇಕು. ಆ ಮೂಲಕ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಮೇ 1ರಿಂದ ಮೇ 12ರ ಅವಧಿಯಲ್ಲಿ ಕೋವಿಡ್ ಸೋಂಕಿನ ಹೆಚ್ಚು ಪ್ರಕರಣಗಳನ್ನು ಹೊಂದಿರುವ 19 ಗ್ರಾಮ ಪಂಚಾಯಿತಿಗಳನ್ನು ವಿಶೇಷ ಕಂಟೈನ್‌ಮೆಂಟ್ ವಲಯಗಳನ್ನಾಗಿ ಘೋಷಿಸಬೇಕು. ಆ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳು ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

****

ವಿಶೇಷ ಕಂಟೈನ್‌ಮೆಂಟ್ ವಲಯಗಳು

ತಾಲ್ಲೂಕು;ಗ್ರಾಮ ಪಂಚಾಯಿತಿಗಳು

ಕಾರವಾರ;ಚಿತ್ತಾಕುಲಾ, ಮಲ್ಲಾಪುರ

ಅಂಕೋಲಾ;ಬಬ್ರುವಾಡಾ, ಹಿಲ್ಲೂರು

ಹೊನ್ನಾವರ;ಕರ್ಕಿ

ಭಟ್ಕಳ;ಶಿರಾಲಿ

ಶಿರಸಿ;ಬನವಾಸಿ

ಸಿದ್ದಾಪುರ;ಅನಲೆಬೈಲ್, ಮನ್ಮಮೆ, ಕೋಲಶಿರ್ಸಿ

ಯಲ್ಲಾಪುರ;ಮಾವಿನಮನೆ, ಉಮ್ಮಚಗಿ, ನಂದೊಳ್ಳಿ

ಮುಂಡಗೋಡ;ಇಂದೂರು

ಜೊಯಿಡಾ;ರಾಮನಗರ, ಅಖೇತಿ

ದಾಂಡೇಲಿ;ಅಂಬಿಕಾನಗರ, ಅಂಬೇವಾಡಿ

ಹಳಿಯಾ;ಮುರ್ಕವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.