ADVERTISEMENT

ಶೌಚಾಲಯದ ಕೊರತೆಯೇ ಪ್ರವಾಸಿಗರ ಚಿಂತೆ

ಕಾರವಾರದ ಸುಂದರ ಕಡಲತೀರಗಳಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳ ಅಗತ್ಯತೆ

ಸದಾಶಿವ ಎಂ.ಎಸ್‌.
Published 6 ಮೇ 2019, 9:20 IST
Last Updated 6 ಮೇ 2019, 9:20 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ವಿಹಾರಕ್ಕೆ ಬಂದವರ ವಾಹನಗಳ ಸಾಲು.
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ವಿಹಾರಕ್ಕೆ ಬಂದವರ ವಾಹನಗಳ ಸಾಲು.   

ಕಾರವಾರ: ನುಣ್ಣನೆಯ ಮರಳಿನ ಹೊದಿಕೆ ಹೊದ್ದಿರುವ ನಗರದ ಕಡಲತೀರ, ನಿತ್ಯವೂ ನೂರಾರು ಪ್ರವಾಸಿಗರನ್ನು ಬರಸೆಳೆಯುವ ಶಕ್ತಿ ಹೊಂದಿದೆ. ಸುಮಾರು ಮೂರು ಕಿ.ಮೀ ಉದ್ದದ, ಬಂಗಾರದ ವರ್ಣದ ಇಲ್ಲಿನ ಕಿನಾರೆಗೆ ಮನ ಸೋಲದವರೇ ಇಲ್ಲ. ಸ್ವಚ್ಛವಾಗಿದ್ದರೂ ಹಲವು ಕೊರತೆಗಳನ್ನು ಎದುರಿಸುತ್ತಿದೆ ಎಂಬ ಬೇಸರ ಸ್ಥಳೀಯರದ್ದೂ ಆಗಿದೆ.

1. ಶೌಚಾಲಯ, ಸ್ನಾನಗೃಹ: ರವೀಂದ್ರನಾಥ ಟ್ಯಾಗೋರ್ ಕಡಲತೀರದಿಂದ ಮೊದಲಾಗಿ ದೇವಭಾಗ, ತೀಳ್ಮಾತಿ ಕಡಲತೀರದವರೆಗೆ ಎಲ್ಲೂ ಸಾರ್ವಜನಿಕ ಶೌಚಾಲಯಗಳಿಲ್ಲ. ಇದು ಇಲ್ಲಿಗೆ ಬರುವ ಪ್ರವಾಸಿಗರಿಗೆ ದೊಡ್ಡ ಹಿನ್ನಡೆಯಾಗಿ ಕಾಡುತ್ತದೆ. ಸಮುದ್ರದ ಅಲೆಗಳ ಜೊತೆಗೆ ತಾಸುಗಟ್ಟಲೆ ಕಾಲ ಕಳೆದು ಬಂದವರಿಗೆ ಬಟ್ಟೆ ಬದಲಾಯಿಸಲು ಸುರಕ್ಷಿತ ಜಾಗವೇ ಇಲ್ಲ.

‘ನಾನು ಮೂರನೇ ಬಾರಿ ಕಾರವಾರಕ್ಕೆ ಭೇಟಿ ನೀಡಿದ್ದೇನೆ. ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳ ವಿಚಾರದಲ್ಲಿ ಈ ಹಿಂದೆ ಇದ್ದ ಪರಿಸ್ಥಿತಿಯೇ ಈಗಲೂ ಇದೆ. ದೂರದ ಊರುಗಳಿಂದ ಬಂದ ನಮ್ಮಂಥವರಿಗೆ ಇಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ ಎಂಬ ಅಸಮಾಧಾನ ಮೈಸೂರಿನ ಪ್ರವಾಸಿ ಸುಮನಾ ಅವರದ್ದು.

ADVERTISEMENT

ಈ ಭಾಗದ ಸುಂದರ ಬೀಚ್‌ಗಳಲ್ಲಿ ಒಂದಾಗಿರುವ ಮಾಜಾಳಿಯಲ್ಲಿ ಬಯಲು ಶೌಚದ ಸಮಸ್ಯೆಯಿದೆ. ಸಾಕಷ್ಟು ಅರಿವು, ಜಾಗೃತಿಯ ಬಳಿಕವೂ ಸ್ಥಳೀಯರು ಶೌಚಾಲಯ ಬಳಸಲು ಹಿಂದೇಟು ಹಾಕುತ್ತಾರೆ. ಅಲ್ಲಿ ಮರಳಿನ ಮೇಲೆ ನಡೆಯುತ್ತ ಹೋಗಿ ಮುಜುಗರ ಅನುಭವಿಸಿ ಹಿಡಿಶಾಪ ಹಾಕಿದವರು ಅನೇಕ ಮಂದಿ!

2. ಕುಡಿಯುವ ನೀರು: ರವೀಂದ್ರನಾಥ ಟ್ಯಾಗೋರ್ ಕಡಲ ಕಿನಾರೆ ಸೂರ್ಯಾಸ್ತದ ಸೊಬಗಿಗೆ ಪ್ರಸಿದ್ಧ. ಸಂಜೆಯಾಗುತ್ತಲೇ ಸಾವಿರಾರು ಜನರು ಮರಳಿನ ದಿಬ್ಬದ ಮೇಲೆ ಕುಳಿತಿರುತ್ತಾರೆ. ಅಂತೆಯೇ ಮನದಣಿಯ ಆಟವಾಡುತ್ತ ಬೆವರಿಳಿಸಿಕೊಳ್ಳುತ್ತಾರೆ. ಕಡಲತೀರದಲ್ಲಿ ಒಂದೇ ಒಂದು ಸ್ವಚ್ಛ ನೀರಿನ ಘಟಕವಿದೆ. ವಿಶಾಲವಾದ ಕಿನಾರೆಯಲ್ಲಿ ಇದು ಸಾಕಾಗುವುದಿಲ್ಲ. ಪ್ರವೇಶದ್ವಾರದಲ್ಲಿ ಸ್ಥಾಪಿಸಿದ ಮಾದರಿಯಲ್ಲೇ ಇನ್ನೊಂದೆರಡು ಕಡೆ ಘಟಕಗಳನ್ನು ತೆರೆದರೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವುದು ವಾಯು ವಿಹಾರಕ್ಕೆ ಬಂದಿದ್ದ ದಿನಕರ ನಾಯ್ಕ ಅವರ ಅನಿಸಿಕೆ.

3. ವಾಹನ ನಿಲುಗಡೆ:ಕಡಲ ಕಿನಾರೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಈಗಿರುವ ಜಾಗ ಸಾಕಾಗುತ್ತಿಲ್ಲ, ಇನ್ನೊಂದಷ್ಟು ಜಾಗಕ್ಕೆ ಕಾಂಕ್ರೀಟ್ ಅಥವಾ ಇಂಟರ್ ಲಾಕ್ ಅಳವಡಿಸಿ ಅಭಿವೃದ್ಧಿ ಪಡಿಸಬೇಕು. ಇಲ್ಲಿ ಸೂಚನಾ ಫಲಕವೂ ಇಲ್ಲದ ಕಾರಣ ಮಾಹಿತಿಯ ಕೊರತೆಯಿಂದ ಕೆಲವರು ತಮ್ಮ ವಾಹನಗಳನ್ನು ಮರಳಿನ ರಾಶಿಗೇ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಚಕ್ರಗಳು ಹೂತು ಹೋಗಿ ವಾಹನವನ್ನು ವಾಪಸ್ ತರಲಾರದೇ ಒದ್ದಾಡುವುದು ಸಾಮಾನ್ಯವಾಗಿದೆ.

ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ವಾಹನಗಳು ಸರ್ವಿಸ್ ರಸ್ತೆಯ ಮೇಲೂ ನಿಂತಿರುತ್ತವೆ. ಇದರಿಂದ ಇತರ ವಾಹನಗಳಿಗೂ ಜಾಗ ಇಲ್ಲದಂತಾಗುತ್ತದೆ. ಪಾದಚಾರಿಗಳೂ ಆತಂಕದಲ್ಲೇ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಸುಗಮ ಸಂಚಾರಕ್ಕೆ ಅಡಚಣೆ ಮಾಡಬಹುದು ಎಂದೂ ಅವರು ಊಹಿಸಿದ್ದಾರೆ.

4. ತೀಳ್ಮಾತಿಗೆ ರಸ್ತೆಯಿಲ್ಲ: ‘ಅತ್ಯಂತ ವಿಶಿಷ್ಟ’ಎಂಬ ಹೆಗ್ಗಳಿಕೆ ಹೊಂದಿರುವ ತೀಳ್ಮಾತಿ ಕರಿಮರಳಿನ ಕಡಲತೀರಕ್ಕೆ ಹೋಗಬೇಕು ಎಂಬ ಬಯಕೆ ಸಾವಿರಾರು ಪ್ರವಾಸಿಗರದ್ದು. ಆದರೆ, ಕಡಿದಾದ ದಾರಿಯಲ್ಲಿ ಸುಮಾರು ಎರಡು ಕಿ.ಮೀ ನಡೆದುಕೊಂಡು ಹೋಗಬೇಕಾದ ಕಾರಣ ಹಿಂದೇಟು ಹಾಕುವವರು ಅಧಿಕ. ಅಲ್ಲಿಗೆ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆ ಈ ಹಿಂದಿನಿಂದಲೂ ಇದೆ, ಈಗಲೂ ಮುಂದುವರಿದಿದೆ.

ಕಾರವಾರದ ಕಡಲತೀರಗಳು ಈ ಕೊರತೆಗಳನ್ನು ಹೊರತುಪಡಿಸಿದರೆ ಉತ್ತಮವಾಗಿವೆ. ಭೇಟಿ ನೀಡಿದವರಿಗೂ ಸುರಕ್ಷತೆಯ, ಸವಿನೆನಪುಗಳೊಂದಿಗೆ ಮರಳುವಂತಿವೆ. ಆದರೆ, ಇದೇ ಮಾದರಿಯಲ್ಲಿ ಜಿಲ್ಲೆಯ ಇತರ ಕಡಲಕಿನಾರೆಗಳೂ ಅಭಿವೃದ್ಧಿಯಾಗಲಿ ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.

ಅಂಕಿ ಅಂಶ

ಕರಾವಳಿಗೆ ಬಂದ ಪ್ರವಾಸಿಗರು (2018ರಲ್ಲಿ)

ಸ್ಥಳ; ಸ್ವದೇಶಿಯರು; ವಿದೇಶಿಯರು; ಒಟ್ಟು

ಕಾರವಾರ; 11,59,575;1,274;11,60,849

ಮುರ್ಡೇಶ್ವರ; 15,07,808;4,787;15,12,592

ಗೋಕರ್ಣ; 13,87,860;5,383;13,92,812

ಅಂಕೋಲಾ; 3,98,934;158;3,99,092

* ಆಧಾರ: ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.