ADVERTISEMENT

ಉತ್ತರ ಕನ್ನಡ | ತಾಣಗಳಿಗೆ ಪ್ರವಾಸಿಗರ ಲಗ್ಗೆ

ಭಾನುವಾರದ ಲಾಕ್‌ಡೌನ್ ತೆರವಿನಿಂದ ಸಂತಸ

ನಾಗರಾಜ ಮದ್ಗುಣಿ
Published 2 ಆಗಸ್ಟ್ 2020, 19:30 IST
Last Updated 2 ಆಗಸ್ಟ್ 2020, 19:30 IST
ಯಲ್ಲಾಪುರ ತಾಲ್ಲೂಕಿನ ಮಾಗೋಡು ಜಲಪಾತ ಭಾನುವಾರ ಈ ರೀತಿ ಕಂಡು ಬಂದಿತು.
ಯಲ್ಲಾಪುರ ತಾಲ್ಲೂಕಿನ ಮಾಗೋಡು ಜಲಪಾತ ಭಾನುವಾರ ಈ ರೀತಿ ಕಂಡು ಬಂದಿತು.   

ಯಲ್ಲಾಪುರ: ಸರ್ಕಾರ ಈ ಭಾನುವಾರದಿಂದ ವಾರದ ಲಾಕಡೌನ್ ಅನ್ನು ತೆರವು ಮಾಡಿದ್ದರಿಂದ ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಲವಲವಿಕೆ ಮೂಡಿದೆ. ಸಾತೊಡ್ಡಿ ಜಲಪಾತ, ಮಾಗೋಡು ಜಲಪಾತ, ಜೇನುಕಲ್ಲು ಗುಡ್ಡದಲ್ಲಿ ಪ್ರವಾಸಿಗರ ಸಂಚಾರ ಕಂಡುಬಂತು.

ಬೆಳಿಗ್ಗೆಯಿಂದ ಹತ್ತಾರು ವಾಹನಗಳಲ್ಲಿ ಪ್ರವಾಸಿಗರು ಈ ನಿಸರ್ಗ ತಾಣಗಳಿಗೆ ಬಂದರು. ನಾಲ್ಕು ತಿಂಗಳಿನಿಂದ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತೆ ಗರಿಗೆದರುವ ಲಕ್ಷಣಗಳು ಕಂಡುಬಂದವು.

ಪಟ್ಟಣದಲ್ಲಿ ಭಾನುವಾರ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಹಾಗಾಗಿ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಹೊರ ಹೋಗಲು ಸಾಧ್ಯವಾಗದೇ ಚಡಪಡಿಸುತ್ತಿದ್ದ ಜನ, ತಮಗೆ ಬೇಕಾದಲ್ಲಿ ಸಂಚರಿಸಿ ಸಂಭ್ರಮಿಸಿದರು.

ADVERTISEMENT

‘ನಾವು ಸ್ನೇಹಿತರು ಆಗಾಗ ನಿಸರ್ಗ ರಮಣೀಯ ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಉದ್ಯೋಗದಿಂದ ಸ್ವಲ್ಪ ಸಮಯ ದೂರ ಉಳಿದು, ಮನಸ್ಸಿಗೆ ನಿರಾಳ ಮನೋಭಾವ ಅನುಭವಿಸುತ್ತಿದ್ದೆವು. ಆದರೆ, ನಾಲ್ಕು ತಿಂಗಳಿನಿಂದ ಉದ್ಯೋಗವೂ ಇಲ್ಲ, ಪ್ರವಾಸವೂ ಇಲ್ಲ ಎಂಬಂತಾಗಿತ್ತು. ಈಗ ಭಾನುವಾರವೂ ಲಾಕ್‌ಡೌನ್ ತೆರವು ಮಾಡಿರುವುದರಿಂದ ಮತ್ತೆ ಪ್ರವಾಸ ಹೋಗಬಹುದಾಗಿದೆ’ ಎಂದು ಹುಬ್ಬಳ್ಳಿಯ ಉದ್ಯಮಿ ಸಂಜೀವಕುಮಾರ ಭೂತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.