ADVERTISEMENT

ಬುಡಕಟ್ಟು ಸಮುದಾಯ ಮುನ್ನೆಲೆಗೆ ಬರಲಿ: ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ

ಭಗವಾನ್ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮ: ಎಡಿಸಿ ಸಾಜಿದ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:41 IST
Last Updated 16 ನವೆಂಬರ್ 2025, 4:41 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಅಧಿಕಾರಿಗಳು, ಸಿದ್ದಿ ಸಮುದಾಯದ ಜನರು ಪಾಲ್ಗೊಂಡಿದ್ದರು 
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಅಧಿಕಾರಿಗಳು, ಸಿದ್ದಿ ಸಮುದಾಯದ ಜನರು ಪಾಲ್ಗೊಂಡಿದ್ದರು    

ಕಾರವಾರ: ‘ಬುಡಕಟ್ಟು ಸಮುದಾಯಗಳು ಶಿಕ್ಷಣ, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುನ್ನೆಲೆಗೆ ಬರಬೇಕಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪರಿಶಿಷ್ಟ ಪಂಗಡಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಡಿನಂಚಿನಲ್ಲಿ ಉಳಿದು ಕಾಡಿನ ಪ್ರಾಣಿಗಳು ಮತ್ತು ನಿಸರ್ಗದೊಂದಿಗೆ ಬದುಕಿ, ತಮ್ಮ ಪ್ರದೇಶಗಳ ಹಕ್ಕಿಗಾಗಿ ಬಿರ್ಸಾ ಮುಂಡಾ ಹೋರಾಡಿದ್ದರು. ಬ್ರಿಟಿಷರ ಬಂದೂಕಿನ ಎದುರು ಬಿಲ್ಲು ಬಾಣಗಳ ಮೂಲಕವೇ ಅವರು ಯುದ್ಧ ಸಾರಿದ್ದರು. ಹಕ್ಕು, ಸ್ವಾಭಿಮಾನಕ್ಕೆ ಹೋರಾಡಿದ ಬಿರ್ಸಾ ಮುಂಡಾ ಬುಡಕಟ್ಟು ಸಮುದಾಯಕ್ಕೆ ಪ್ರೇರಣೆಯಾಗಬೇಕು’ ಎಂದರು.

ADVERTISEMENT

‘ಜಿಲ್ಲೆಯ ಸಿದ್ದಿ ಜನಾಂಗದವರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು’ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಚಾಲನೆ ನೀಡಿದರು.

ಬಿರ್ಸಾ ಮುಂಡಾ ಅವರ ಕುರಿತು ಉಪನ್ಯಾಸ ನೀಡಿದ ಸೂರ್ಯ ಪುಟ್ಟಸಿದ್ದಿ ಮಾತನಾಡಿ, ‘ಆದಿವಾಸಿ ಕುಟುಂಬದ ಬಿರ್ಸಾ ಮುಂಡಾ ಬುಡಕಟ್ಟು ಜನಾಂಗದ ಕಲೆ, ಸಂಸ್ಕೃತಿ, ಅಚಾರ ವಿಚಾರಗಳು ನಶಿಸುವುದನ್ನು ತಡೆದು, ಬ್ರಿಟೀಷರ ದಬ್ಬಾಳಿಕೆ ವಿರೋಧಿಸಿದರು. ಆದಿವಾಸಿ ಸಮುದಾಯದ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಜೀವನ ಮುಡಿಪಿಟ್ಟರು’ ಎಂದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್ ವೈ.ಕೆ, ಸಿದ್ದಿ ಸಮುದಾಯದವರು ಇದ್ದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ನಳಿನಿ ಸ್ವಾಗತಿಸಿದರು. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕಿ ವಸಂತಲಕ್ಷ್ಮಿ ನಿರೂಪಿಸಿದರು. ಈ ವೇಳೆ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಿದ್ದಿ ಸಮುದಾಯದ ಮಹಿಳೆಯರು ಡಮಾಮಿ ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.