ADVERTISEMENT

ಹಾಡುತ್ತಲೇ ಇರಲಿ ಜಾನಪದ ಕೋಗಿಲೆ: ಸುಕ್ರಿ ಬೊಮ್ಮಗೌಡರಿಗೆ ನುಡಿ ನಮನ

ಅಕ್ಷತಾ ಕೃಷ್ಣಮೂರ್ತಿ
Published 13 ಫೆಬ್ರುವರಿ 2025, 19:07 IST
Last Updated 13 ಫೆಬ್ರುವರಿ 2025, 19:07 IST
ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವದಿಂದ ಕಾರವಾರಕ್ಕೆ ಪಾದಯಾತ್ರೆ ನಡೆಸುವ ಹೋರಾಟಕ್ಕೆ ಸುಕ್ರಿ ಗೌಡ ಅವರು ಡೊಳ್ಳು ಭಾರಿಸಿ ಚಾಲನೆ ನೀಡಿದ್ದರು.
ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವದಿಂದ ಕಾರವಾರಕ್ಕೆ ಪಾದಯಾತ್ರೆ ನಡೆಸುವ ಹೋರಾಟಕ್ಕೆ ಸುಕ್ರಿ ಗೌಡ ಅವರು ಡೊಳ್ಳು ಭಾರಿಸಿ ಚಾಲನೆ ನೀಡಿದ್ದರು.   

‘ಮಗ ಇಲ್ಲದಿದ್ದರೇನಂತೆ, ನನಗೆ ಊರ ತುಂಬ ಮಕ್ಕಳಿದ್ದಾರೆ. ನನ್ನನ್ನು ಪ್ರೀತಿಸುವ ಮೊಮ್ಮಕ್ಕಳ ಸಂಖ್ಯೆಗೆ ಲೆಕ್ಕವಿಲ್ಲ’. ಇದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಯಾವಾಗಲೂ ಹೇಳುತ್ತಿದ್ದ ಮಾತು. ಹೀಗಾಗಿ ನಾವು ಅವರನ್ನು ಸುಕ್ರಿ ಗೌಡ ಬದಲು ಪ್ರೀತಿಯಿಂದ ಸುಕ್ರಜ್ಜಿ ಎಂದು ಕರೆಯುತ್ತಿದ್ದೆವು.

‘ಸಾರಾಯಿ ಅನ್ನೋದು ವಿಷ. ಕಟ್ಟಿಕೊಂಡ ಗಂಡನನ್ನು, ಮಗನನ್ನು, ನನ್ನೆದುರು ಆಡಿ ಬೆಳೆಯುತ್ತಿದ್ದ ಊರಿನ ಹತ್ತಾರು ಮಕ್ಕಳನ್ನು ಈ ವಿಷ ಕಸಿದುಕೊಂಡಿತು. ವಿಷವನ್ನು ಊರಿಂದ ಹೊರಗಟ್ಟಬೇಕು’ ಎನ್ನುತ್ತಿದ್ದ ಸುಕ್ರಜ್ಜಿ ಹೋರಾಡಿ ಬಡಗೇರಿ ಗ್ರಾಮದಲ್ಲಿ ಸಾರಾಯಿ ಮಾರಾಟ ನಿಷೇಧ ಆಗುವಂತೆ ಮಾಡಿದ್ದು ಈಗ ಇತಿಹಾಸ.

ಸುಕ್ರಿ ಅಸಂಖ್ಯ ಹಾಡುಗಳನ್ನು ಬಲ್ಲವರು. ಅಂಜುಗನ ಹಕ್ಕಿ ಕಥೆ, ರಾಮಾಯಣ, ಮಹಾಭಾರತ, ಅಜ್ಜಮುನಿ ಕಥೆ, ಹಾಲಕ್ಕಿ ಹೆಸರು ಬಂದ ಬಗೆ ಸೇರಿ ಅನೇಕ ಹಾಡುಗಳನ್ನು ಹಾಡುತ್ತಿದ್ದರು. ಆಶು ಕವಿತೆ ಕಟ್ಟುವ, ದಿನದ 24 ಗಂಟೆಯೂ ಬಿಡದೆ ಹಾಡುವಷ್ಟು ಹಾಡುಗಳು ಅವರ ನೆನಪಿನ ಕೋಶದಲ್ಲಿದ್ದವು.

ADVERTISEMENT

ಬೆಂಕಿಯಲ್ಲಿ ಅರಳಿದ ಹೂವು:

ಸುಕ್ರಜ್ಜಿ ಅವರ ಹುಟ್ಟೂರು ಅಂಕೋಲಾ ತಾಲ್ಲೂಕಿನ ಶಿರಕುಳಿ. ಶುಕ್ರವಾರ ಹುಟ್ಟಿದ ಕಾರಣಕ್ಕೆ ‘ಸುಕ್ರಿ’ ಎಂದು ಪಾಲಕರು ಹೆಸರಿಟ್ಟರು. ಸುತ್ತಲ ಪರಿಸರವನ್ನು ಸೂಕ್ಷ್ಮವಾಗಿ ನೋಡುವ, ನೆಲದ ಸೊಗಡನ್ನು ಹೀರಿಕೊಳ್ಳುವ ಗುಣ ಸುಕ್ರಿಯವರಲ್ಲಿತ್ತು. ಸುಕ್ರಿ ಶಾಲೆ ಕಲಿತವರಲ್ಲ. ಬಡತನ, ಹಸಿವು, ಅವಮಾನಗಳನ್ನೆಲ್ಲ ಚಿಕ್ಕಂದಿನಿಂದ ಎದುರಿಸುತ್ತ ಬಂದರೂ ಕುಗ್ಗಲಿಲ್ಲ.

ಎಲ್ಲವನ್ನೂ ಎದುರಿಸುವ ಧೈರ್ಯ ಚಿಕ್ಕಂದಿನಿಂದ ಬಂದಿತ್ತು. ಹೀಗಾಗಿಯೇ ಆ ಕಾಲದಲ್ಲಿ ಹುಡುಗರಿಗೆ ಮಾತ್ರ ಮೀಸಲಾಗಿದ್ದ ದನ ಕಾಯುವ ಕೆಲಸವನ್ನು ಸುಕ್ರಿ ಮಾಡುತ್ತಿದ್ದರು. ಆಟಗಳಲ್ಲಿ ಗಂಡು ಮಕ್ಕಳನ್ನು ಸೋಲಿಸಿ, ಅವರಿಗೆ ಹೆದರಿಸುತ್ತಿದ್ದರು. ಒಂದರ್ಥದಲ್ಲಿ ಅವರು ಬೆಂಕಿಯಲ್ಲಿ ಅರಳಿದ ಹೂವು!

ಹೀಗೆ ಆಡುತ್ತ, ಹಾಡುತ್ತ ಅಪಾರವಾದ ಜಾನಪದವನ್ನು ತನ್ನೊಡಲಲ್ಲಿ ತುಂಬಿಕೊಂಡ ಸುಕ್ರಿ ಅವರದ್ದು ಬಾಲ್ಯವಿವಾಹ. ಸುಕ್ರಿ ಅವರಿಗೆ 12ನೇ ವರ್ಷದಲ್ಲಿ ಬಡಗೇರಿಯ 45ರ ಬೊಮ್ಮ ಗೌಡನೊಂದಿಗೆ ಮದುವೆಯಾಯಿತು. ಮಕ್ಕಳಿರದ ಕಾರಣ ಸುಕ್ರಿ ತಮ್ಮನ ಮಗ ಶಂಕರಗೆ ದತ್ತು ಪಡೆದರು. ಆದರೆ, ಸಾರಾಯಿ ಕುಡಿತದಿಂದ ಶಂಕರ ಮೃತನಾದ. ಸುಕ್ರಿ ಅವರ ಪ್ರತಿಭೆ ಬಲ್ಲ ಬಡಗೇರಿಯ ಗೋವಿಂದ ಮಹಾಲೆ ಅವರು ಜಗತ್ತೇ ಸುಕ್ರಿಯವರನ್ನು ಗುರುತಿಸುವಂತೆ ಮಾಡಿದರು.

ನಾಟಿ ಔಷಧಿ ಬಲ್ಲ ವೈದ್ಯೆ, ವಿಶ್ವವಿದ್ಯಾಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿಯೂ ಆದವರು. ಜಾನಪದ ಕೋಗಿಲೆಯಾಗಿ ಮಿಂಚಿದವರು. ಇನ್ನು ಅವರ ಧ್ವನಿ ಕೇಳದಿರಬಹುದು. ಆದರೆ, ಅವರು ಹಾಡುತ್ತಿದ್ದ ಪದಗಳು ಕಿವಿಯಲ್ಲಿ ಗುನಗುನಿಸುತ್ತ ಇರಲಿ.

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.