ಶಿರಸಿ: ಪ್ರಸಕ್ತ ವರ್ಷ ಸಹಕಾರಿ ಶ್ರೀಪಾದ ಹೆಗಡೆ ಕಡವೆ ಜನ್ಮಶತಮಾನೋತ್ಸವ ವರ್ಷವಾದ ಕಾರಣ ಡಿ.17ರಂದು ಸಂಘದ ಶತಮಾನೋತ್ಸವ ಮತ್ತು ಶ್ರೀಪಾದ ಹೆಗಡೆ ಕಡವೆ ಜನ್ಮಶತಮಾನೋತ್ಸವ ಸಮಾರಂಭ ಜಂಟಿಯಾಗಿ ಆಚರಿಸಲು ಇಲ್ಲಿನ ಟಿಎಸ್ಎಸ್‍ನ 102ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳುವ ಜತೆಗೆ ಸಂಘವು ಶತಮಾನವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮಧ್ವರಾವ ಸ್ವಾಮಿರಾವ್ ಜಡೆ ಹಾಗೂ ಶ್ರೀಪಾದ ರಾಮಕೃಷ್ಣ ಹೆಗಡೆ ಕಡವೆ ಅವರ ಪುತ್ಥಳಿಯನ್ನು ಸಂಘದಲ್ಲಿ ಸ್ಥಾಪಿಸಲೂ ತೀರ್ಮಾನ ಕೈಗೊಳ್ಳಲಾಯಿತು.
ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಮಾತನಾಡಿ, ‘ಸಂಘವು ಅಡಿಕೆ ಬೆಳೆಗಾರರ ಸಲುವಾಗಿಯೇ ಪ್ರಾರಂಭವಾಗಿದ್ದು, ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿಯೇ ಶ್ರಮಿಸುತ್ತಿದೆ. ಸಂಘವು 2024-25ರಲ್ಲಿ ಸದಸ್ಯರ ಸಹಕಾರದಿಂದ ₹20 ಕೋಟಿಯಷ್ಟು ನಿವ್ವಳ ಲಾಭಗಳಿಸಿದೆ’ ಎಂದರು.
ರೈತರ ಹಿತಾಸಕ್ತಿ ಕಾಪಾಡಲು ಮುಂಬರುವ ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರು ಸ್ಪರ್ಧಿಸಬೇಕು. ಬ್ಯಾಂಕ್‍ನ ಆಡಳಿತಾತ್ಮಕ ದೃಷ್ಟಿಯಿಂದ ವೈದ್ಯರಂಥ ಹಿರಿಯ ಅನುಭವಿ ಸಹಕಾರಿಗಳ ಅಗತ್ಯವಿದೆ ಎಂದು ಸಭೆಯಲ್ಲಿ ಸದಸ್ಯರು ಒತ್ತಾಸೆ ವ್ಯಕ್ತಪಡಿಸಿದರು. ಈ ಹಿಂದೆ ಸಂಘದಲ್ಲಿ ಜರುಗಿದ ವಿಶೇಷ ಸರ್ವ ಸದಸ್ಯರ ಮಹಾಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಧೃಡೀಕರಿಸಲಾಯಿತು.
ಸದಸ್ಯತ್ವದಿಂದ ಉಚ್ಛಾಟನೆ:
ಸಂಘದ ಸದಸ್ಯ ನಾರಾಯಣ ಪರಮೇಶ್ವರ ಹೆಗಡೆ ಉಲ್ಲಾಳಗದ್ದೆ ಸಂಘದ ವಿರುದ್ಧ ಇಲ್ಲಸಲ್ಲದ ದೂರುಗಳನ್ನು ನೀಡುತ್ತಾ, ಇತರೇ ಸದಸ್ಯರಿಗೆ ತಪ್ಪು ಮಾಹಿತಿ ನೀಡುವುದು ಹಾಗೂ ಸಂಘದ ಹಿಂದಿನ ಸರ್ವಸಾಧಾರಣ ಸಭೆಯಲ್ಲಿ ಸದಸ್ಯರಿಗೆ ಅಗೌರವ ತೋರಿ ಕ್ಷಮೆಯಾಚಿಸದೇ ಇರುವ ವಿಚಾರಗಳನ್ನು ಪರಿಗಣಿಸಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಅವರನ್ನು ಸಂಘದ ಸದಸ್ಯತ್ವದಿಂದ ಉಚ್ಚಾಟಿಸಲು ತೀರ್ಮಾನಿಸಲಾಯಿತು.
ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಸಂಕದಮನೆ ಇದ್ದರು. ಸಂಘದ ಉಪಾಧ್ಯಕ್ಷರಾದ ಎಂ.ಎನ್.ಭಟ್ ತೋಟಿಮನೆ ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ರವೀಂದ ಹೆಗಡೆ ಹಳದೋಟ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.