ADVERTISEMENT

ವಾಹನಗಳಿಲ್ಲದ ದಿನಗಳ ಸವಾಲು ಅರಿಯಲು ಕೇರಳದಿಂದ ಲಡಾಖ್‌ಗೆ ಪಾದಯಾತ್ರೆ ಹೊರಟ ಯುವಕರು

ಸದಾಶಿವ ಎಂ.ಎಸ್‌.
Published 2 ಏಪ್ರಿಲ್ 2021, 3:36 IST
Last Updated 2 ಏಪ್ರಿಲ್ 2021, 3:36 IST
ಕೇರಳದ ಮಲಪ್ಪುರಂನಿಂದ ಲಡಾಖ್‌ಗೆ ಪಾದಯಾತ್ರೆ ಹೊರಟಿರುವ ದಿಲ್ಶಾದ್ ಮತ್ತು ಮನ್ಸೂರ್ ಬಿಲಾಲ್
ಕೇರಳದ ಮಲಪ್ಪುರಂನಿಂದ ಲಡಾಖ್‌ಗೆ ಪಾದಯಾತ್ರೆ ಹೊರಟಿರುವ ದಿಲ್ಶಾದ್ ಮತ್ತು ಮನ್ಸೂರ್ ಬಿಲಾಲ್   

ಕಾರವಾರ: ‘ಶತಮಾನಗಳ ಹಿಂದೆ ವಾಹನಗಳೇ ಇರಲಿಲ್ಲ. ಆದರೆ, ಆಗಲೂ ಜನ ಪ‍್ರಪಂಚ ಪರ್ಯಟನೆ ಮಾಡುತ್ತಿದ್ದರು. ಎಲ್ಲೆಲ್ಲಿಂದಲೋ ಬಂದು ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರು. ಆ ದಿನಗಳಲ್ಲಿ ಪ್ರಯಾಣಕ್ಕೆ ಎದುರಾಗುತ್ತಿದ್ದ ಸವಾಲುಗಳನ್ನು ಅರಿಯುವುದೇ ನಮ್ಮ ಉದ್ದೇಶ...’

ಹೀಗೆಂದು ಮಾತಿಗಿಳಿದವರು ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿಯ ಯುವಕರಾದ ದಿಲ್ಶಾದ್ ಮತ್ತು ಮನ್ಸೂರ್ ಬಿಲಾಲ್. ತಮ್ಮ ಊರಿನಿಂದ ಕಾಶ್ಮೀರದ ಲಡಾಖ್‌ಗೆ ಪಾದಯಾತ್ರೆಯ ಮೂಲಕ ಹೊರಟಿರುವ ಅವರು ಗುರುವಾರ ಕಾರವಾರದಲ್ಲಿ ‘ಪ್ರಜಾವಾಣಿ’ ಜೊತೆ ಮಾತಿಗೆ ಸಿಕ್ಕಿದರು.

‘ದಿನಕ್ಕೆ 45ರಿಂದ 50 ಕಿ.ಮೀ ದೂರವನ್ನು ಕ್ರಮಿಸುತ್ತೇವೆ. ಕೊಂಡೊಟ್ಟಿಯಿಂದ ಮಾರ್ಚ್ 19ರಂದು ಪಾದಯಾತ್ರೆ ಆರಂಭಿಸಿದ ನಾವು, 13 ದಿನಗಳ ಅವಧಿಯಲ್ಲಿ 500 ಕಿ.ಮೀ ತಲುಪಿದ್ದೇವೆ. ಸುಮಾರು 3,514 ಕಿ.ಮೀ ದೂರದಲ್ಲಿರುವ ಲಡಾಖ್ ಅನ್ನು ಮೂರರಿಂದ ಮೂರೂವರೆ ತಿಂಗಳ ಅವಧಿಯಲ್ಲಿ ತಲುಪುವ ಗುರಿ ಹೊಂದಿದ್ದೇವೆ’ ಎಂದು ದಿಲ್ಶಾದ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ADVERTISEMENT

‘ಪ್ರಯಾಣ ಆರಂಭಿಸಿದ ಮೊದಲ ಎರಡು ದಿನ ಕೆಲವು ಕಡೆಗಳಲ್ಲಿ ಓಡುತ್ತ ಕೂಡ ಬಂದಿದ್ದೇವೆ. ಆದರೆ, ವಿಪರೀತ ಬಿಸಿಲಿನಿಂದಾಗಿ ಕಾಲು ನೋವು ಬರಲು ಆರಂಭವಾಯಿತು. ಹಾಗಾಗಿ ವೇಗವಾಗಿ ನಡೆದುಕೊಂಡೇ ಹೋಗುವುದು ಉತ್ತಮ ಎಂದು ನಿರ್ಧರಿಸಿ ಮುಂದುವರಿದೆವು’ ಎಂದು ಹೇಳಿಕೊಂಡರು.

‘ಬೆಳಿಗ್ಗೆ 4ಕ್ಕೆ ಪ್ರಯಾಣ ಆರಂಭಿಸಿದರೆ, ಮಧ್ಯಾಹ್ನ ಹೋಟೆಲ್‌ನಲ್ಲಿ ಊಟಕ್ಕೆ ಒಂದರ್ಧ ತಾಸು ಕಳೆಯುತ್ತೇವೆ. ಉಳಿದಂತೆ ರಾತ್ರಿ 9ರವರೆಗೂ ಸಾಗುತ್ತಿರುತ್ತೇವೆ. ಎಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಗುತ್ತದೋ ಅಲ್ಲೇ ಉಳಿದುಕೊಂಡು ಮತ್ತೆ ಹೆಜ್ಜೆ ಹಾಕುತ್ತೇವೆ. ಇಷ್ಟು ದಿನಗಳಲ್ಲಿ ಎಲ್ಲೂ ಏನೂ ಸಮಸ್ಯೆಯಾಗಲಿಲ್ಲ’ ಎಂದು ಮುಗುಳ್ನಗುತ್ತ ಕೊಡೆ ಬಿಡಿಸಿ ನೆರಳು ಮಾಡಿಕೊಂಡ ಮನ್ಸೂರ್ ಬಿಲಾಲ್ ಹಾಗೂ ದಿಲ್ಶಾದ್, ಗೋವಾದತ್ತ ಸಾಗಿದರು.

ಯೂಟ್ಯೂಬ್‌ಗೆ ವಿಡಿಯೊ
ತಮ್ಮ ಪ್ರಯಾಣಕ್ಕೆ ‘ರೇಸ್ ಟ್ರ್ಯಾಕ್’ ಎಂದು ಹೆಸರಿಟ್ಟಿರುವ ಈ ಯುವಕರು, ದಾರಿಯಲ್ಲಿ ಕಾಣಸಿಗುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವಿಡಿಯೊ ಚಿತ್ರೀಕರಿಸಿಕೊಂಡು ಯೂಟ್ಯೂಬ್‌ ಚಾನಲ್‌ಗೆ ಅಪ್‌ಲೋಡ್ ಮಾಡುತ್ತಾರೆ.

20ರ ಹರೆಯದ ದಿಲ್ಶಾದ್ ಮಲಪ್ಪುರಂನಲ್ಲಿ ಚಹಾದಂಗಡಿ ನಡೆಸುತ್ತಿದ್ದರು. 23 ವರ್ಷದ ಮನ್ಸೂರ್, ಅರಬ್ ಎಮಿರೇಟ್ಸ್‌ನಲ್ಲಿ ಉದ್ಯೋಗದಲ್ಲಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ತವರೂರಿಗೆ ಮರಳಿ ಬಂದವರು ಪುನಃ ಹೋಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.