ADVERTISEMENT

‘ಹೆಚ್ಚುವರಿ ಅನುದಾನ’ಕ್ಕೆ ನಿಂತ ಉಳಗಾ ಸೇತುವೆ: 8 ವರ್ಷ ಕಳೆದರೂ ಮುಗಿಯದ ಕಾಮಗಾರಿ

8 ವರ್ಷ ಕಳೆದರೂ ಮುಗಿಯದ ಕಾಮಗಾರಿ: ಸುತ್ತು ಬಳಸಿ ಸಂಚರಿಸುವ ಪಡಿಪಾಟಲು

ಗಣಪತಿ ಹೆಗಡೆ
Published 7 ಫೆಬ್ರುವರಿ 2026, 7:26 IST
Last Updated 7 ಫೆಬ್ರುವರಿ 2026, 7:26 IST
ಕಾರವಾರ ತಾಲ್ಲೂಕಿನ ಉಳಗಾ–ಕೆರವಡಿ ಸೇತುವೆ ಅರ್ಧಕ್ಕೆ ಕೆಲಸ ಸ್ಥಗಿತಗೊಂಡಿರುವುದು
ಕಾರವಾರ ತಾಲ್ಲೂಕಿನ ಉಳಗಾ–ಕೆರವಡಿ ಸೇತುವೆ ಅರ್ಧಕ್ಕೆ ಕೆಲಸ ಸ್ಥಗಿತಗೊಂಡಿರುವುದು   

ಕಾರವಾರ: ಕಾಮಗಾರಿ ಆರಂಭಗೊಂಡು 8 ವರ್ಷ ಕಳೆದರೂ ತಾಲ್ಲೂಕಿನ ಉಳಗಾ–ಕೆರವಡಿ ಸೇತುವೆ ಕಾಮಗಾರಿ ಮುಗಿದಿಲ್ಲ. ಒಂದೆಡೆ ಸುಲಭ ಸಂಪರ್ಕಕ್ಕೆ ಸೇತುವೆ ಸಂಚಾರ ಮುಕ್ತಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದರೆ, ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿ ಗುತ್ತಿಗೆ ಕಂಪನಿ ಕಾದು ಕುಳಿತಿದೆ.

2018ರಲ್ಲಿ ಉಳಗಾ–ಕೆರವಡಿ ಗ್ರಾಮಗಳನ್ನು ಸಂಪರ್ಕಿಸಲು ಅನುಕೂಲ ಆಗುವಂತೆ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ₹25 ಕೋಟಿ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಕಾಮಗಾರಿ ಆರಂಭಗೊಂಡಿತಾದರೂ ಅರ್ಧಕ್ಕೆ ಕೆಲಸ ನಿಂತು ವರ್ಷಗಳೇ ಕಳೆದಿದೆ. ಬರೋಬ್ಬರಿ ಆರು ವರ್ಷಗಳ ಬಳಿಕ ಕಳೆದ ವರ್ಷ ಕಾಮಗಾರಿ ಪುನರಾರಂಭಗೊಂಡಿತಾದರೂ, ಕೆಲವೇ ದಿನಗಳಲ್ಲಿ ಪುನಃ ಸ್ಥಗಿತಗೊಂಡಿದೆ.

‘ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮದ ಹಿರಿಯರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಎಂಟು ವರ್ಷಗಳ ಹಿಂದೆ ಸೇತುವೆ ಮಂಜೂರಾದಾಗ ಖುಷಿಪಟ್ಟಿದ್ದರು. ಆದರೆ, ಈವರೆಗೂ ಕಾಮಗಾರಿ ಮುಗಿದಿಲ್ಲ. ಕಾಳಿ ನದಿ ದಾಟಲು ಬಾರ್ಜ್ ಬಳಸಿಯೇ ಸಾಗಬೇಕಾಗುತ್ತಿದೆ. ದೊಡ್ಡ ವಾಹನ ಸಾಗಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ನದಿಯ ಎರಡು ಬದಿಯ ಗ್ರಾಮಸ್ಥರು ನದಿಯ ಇನ್ನೊಂದು ಬದಿ ತಲುಪಲು 25ರಿಂದ 30 ಕಿ.ಮೀ ಸುತ್ತುಬಳಸಿ ಸಾಗಬೇಕಾಗುತ್ತಿದೆ’ ಎಂದು ಬೇಳೂರು ಗ್ರಾಮಸ್ಥ ಸೂರಜ್ ನಾಯ್ಕ ಸಮಸ್ಯೆ ವಿವರಿಸಿದರು.

ADVERTISEMENT

‘ಸೇತುವೆ ನಿರ್ಮಾಣವಾದರೆ ಉಳಗಾ, ಹಳಗಾ ಸೇರಿದಂತೆ ಹತ್ತಾರು ಗ್ರಾಮಗಳ ಯುವಕರಿಗೆ ಕೈಗಾಕ್ಕೆ ಸಾಗಲು ಸುಲಭವಾಗಲಿದೆ. ಕೆರವಡಿ, ದೇವಳಮಕ್ಕಿ ಭಾಗದವರಿಗೆ ಜೊಯಿಡಾ ಭಾಗಕ್ಕೆ ಸಾಗಲು ದೂರ ಕಡಿಮೆ ಆಗುತ್ತದೆ. ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ’ ಎಂದರು.

‘ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಕಳೆದ ವರ್ಷ ಕೆಲಸ ಸಾಗಿತ್ತು. 7 ಕಂಬಗಳ ನಿರ್ಮಾಣ ಪೂರ್ಣಗೊಂಡಿದೆ. ಮೂರು ಕಂಬಗಳ ಮೇಲೆ 9 ಅಡ್ಡಲಾಗಿ ಕಾಂಕ್ರೀಟ್ ತೊಲೆಗಳನ್ನು ಅಳವಡಿಸಿ, ಸ್ಲ್ಯಾಬ್ ನಿರ್ಮಿಸುವ ಕೆಲಸ ಮಾತ್ರ ಉಳಿದಿದೆ. ಅವಧಿಗೆ ಮುನ್ನವೇ ಮುಂಗಾರು ಆರಂಭಗೊಂಡಿದ್ದರಿಂದ ಈ ಕೆಲಸ ಸ್ಥಗಿತಗೊಂಡಿತ್ತು. ಬಳಿಕ ತಾಂತ್ರಿಕ ಅಡಚಣೆಗಳು ಎದುರಾಗಿ ಕೆಲಸ ಸ್ಥಗಿತಗೊಂಡಿತು’ ಎಂದು ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ರಿಜ್ವಾನ್ ಸೊಪ್ಪಿನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹೆಚ್ಚುವರಿ ಅನುದಾನಕ್ಕೆ ಬೇಡಿಕೆ

‘2018ರಲ್ಲಿ ಕೆರವಡಿ–ಉಳಗಾ ಸೇರಿದಂತೆ ಜಿಲ್ಲೆಯ 6 ಸೇತುವೆಗಳ ನಿರ್ಮಾಣಕ್ಕೆ ಏಕಕಾಲಕ್ಕೆ ಮಂಜೂರಾತಿ ಸಿಕ್ಕಿತ್ತು. ಉಳಿದ ಸೇತುವೆ ಕಾಮಗಾರಿಗಳು ಬಹುಪಾಲು ಮುಗಿದಿದ್ದು ಸಣ್ಣಪುಟ್ಟ ಕೆಲಸಗಳು ಉಳಿದುಕೊಂಡಿವೆ. ಕೆರವಡಿ–ಉಳಗಾ ಸೇತುವೆಗೆ ₹6 ಕೋಟಿ ಸೇರಿದಂತೆ 6 ಸೇತುವೆ ಸೇರಿ ಹೆಚ್ಚುವರಿ ₹20 ಕೋಟಿಯಷ್ಟು ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಕಂಪನಿಗೆ ಸೂಚನೆ ನೀಡಿದ್ದರೂ ಅನುದಾನಕ್ಕೆ ಮಂಜೂರಾತಿ ಸಿಗವವರೆಗೆ ಕೆಲಸ ಕೈಗೆತ್ತಿಕೊಳ್ಳಲು ಒಪ್ಪದ ಹಿನ್ನೆಲೆಯಲ್ಲಿ ವಿಳಂಬವಾಗಿದೆ’ ಎಂದು ಕೆಆರ್‌ಡಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ರಿಜ್ವಾನ್ ಸೊಪ್ಪಿನ ತಿಳಿಸಿದರು.

ಕೆರವಡಿ–ಉಳಗಾ ಸೇತುವೆ ಕಾಮಗಾರಿ ವಿಳಂಬವಾಗಲು ಈ ಹಿಂದಿನ ಬಿಜೆಪಿ ಸರ್ಕಾರ ನೇರ ಹೊಣೆ. ನಾನೇ ಮಂಜೂರು ಮಾಡಿಸಿದ್ದ ಸೇತುವೆಗೆ ಈಗ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿಕೊಂಡು ಪೂರ್ಣಗೊಳಿಸುವೆ.
ಸತೀಶ ಸೈಲ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.