ADVERTISEMENT

‘ಹಳೆ ಓದು, ಹೊಸ ಚಿಂತನೆ ಸಾಹಿತಿಯಲ್ಲಿರಲಿ’

ಕವಿಕಾವ್ಯ ಬಳಗದ ಉಪಾಯನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:38 IST
Last Updated 1 ಮೇ 2019, 14:38 IST
ಶಿರಸಿಯ ಕವಿಕಾವ್ಯ ಬಳಗದ ವಾರ್ಷಿಕೋತ್ಸವದಲ್ಲಿ ಟಿ.ಜಿ.ಭಟ್ಟ ಹಾಸಣಗಿ ದಂಪತಿಗೆ ಉಪಾಯನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಶಿರಸಿಯ ಕವಿಕಾವ್ಯ ಬಳಗದ ವಾರ್ಷಿಕೋತ್ಸವದಲ್ಲಿ ಟಿ.ಜಿ.ಭಟ್ಟ ಹಾಸಣಗಿ ದಂಪತಿಗೆ ಉಪಾಯನ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಶಿರಸಿ: ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಮಾಜದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುತ್ತಿರುವ ಇಲ್ಲಿನ ಕವಿಕಾವ್ಯ ಬಳಗದ ವಾರ್ಷಿಕೋತ್ಸವದಲ್ಲಿ ಬರಹಗಾರ ಟಿ.ಜಿ.ಭಟ್ಟ ಹಾಸಣಗಿ ಅವರಿಗೆ ‘ಉಪಾಯನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಪ್ರಮುಖರಾದ ಭಾಗೀರಥಿ ಹೆಗಡೆ, ಪ್ರೊ. ವಿಜಯನಳಿನಿ ರಮೇಶ, ಆರ್.ಡಿ.ಹೆಗಡೆ ಆಲ್ಮನೆ, ರಘುನಂದನ ಭಟ್ಟ, ಶಶಿಕಲಾ ಭಟ್ಟ, ಎನ್.ಆರ್.ರೂಪಶ್ರೀ ಅವರು ಟಿ.ಜಿ.ಭಟ್ಟ ದಂಪತಿಯನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಟಿ.ಜಿ.ಭಟ್ಟ ಅವರು, ‘ಬದುಕಿನ ಅನುಭವಗಳನ್ನು ಬರವಣಿಗೆಗೆ ಇಳಿಸಿದರೆ ಅದು ಓದುಗರಿಗೆ ಖುಷಿ ನೀಡುತ್ತದೆ. ಹೊಸ ಪರಿಜ್ಞಾನದ, ಚಿಂತನೆಯ ಬರಹಗಳು ಸಾಹಿತ್ಯದಲ್ಲಿ ಬರಬೇಕಾಗಿದೆ. ಹಳತರ ಓದು, ಹೊಸತರ ಚಿಂತನೆ ಸಾಹಿತಿಯಲ್ಲಿ ಇರಬೇಕು. ಸಾಹಿತ್ಯದ ನಿರಂತರ ಓದಿನ ಮೂಲಕ ಸೂಕ್ಷ್ಮತೆ, ಮಾನಸಿಕ ದೃಢತೆ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

ಬರಹಗಾರ ರಾಜೀವ ಅಜ್ಜೀಬಳ ಮಾತನಾಡಿ, ‘ಸಮಾಜ ಒಡೆಯುವ ಸಾಹಿತ್ಯಕ್ಕಿಂತ ದೇಶ ಕಟ್ಟುವ, ಮಾನವೀಯತೆ ಬೆಳೆಸುವ ಬರಹ ಸಾಹಿತಿಗಳ ಆದ್ಯತೆಯಾಗಬೇಕು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉದಾತ್ತ ಚಿಂತನೆಗಳ ಮೂಲಕ ಬೆಳೆಯುತ್ತಿರುವ ಕವಿಕಾವ್ಯ ಬಳಗವು ನೀಡುವ ಪ್ರಶಸ್ತಿ ಸ್ವೀಕರಿಸುವುದೇ ಬರಹಗಾರರಿಗೆ ಗೌರವ ತರುವ ಸಂಗತಿ’ ಎಂದರು. ಬರಹಗಾರ ಗಣಪತಿ ಭಟ್ಟ ವರ್ಗಾಸರ ಅಭಿನಂದನಾ ಮಾತನಾಡಿದರು. ನೇತ್ರಾವತಿ ಹೆಗಡೆ ಪ್ರಾರ್ಥಿಸಿದರು. ಎಸ್.ಎಸ್‌.ಭಟ್ಟ ಸ್ವಾಗತಿಸಿದರು.

‘ಬಾರೆಲೆ ಹಕ್ಕಿ’ ಬಿಡುಗಡೆ:

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಭಾಗೀರಥಿ ಹೆಗಡೆ ಅವರ ‘ಬಾರೆಲೆ ಹಕ್ಕಿ’ ಪ್ರಬಂಧ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಮಧ್ಯಾಹ್ನ ನಡೆದ ಕಾವ್ಯ–ಕುಂಚ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಖ್ಯಾತ ಚಿತ್ರಗಾರ ಜಿ.ಎಂ.ಹೆಗಡೆ ತಾರಗೋಡ ಭಾಗವಹಿಸಿದ್ದರು. ಕವಯತ್ರಿ ಎನ್.ಆರ್. ರೂಪಶ್ರಿ ಆಶಯ ಮಾತನಾಡಿದರು. ಕವಿಗಳಾದ ಜಯರಾಮ ಹೆಗಡೆ, ಶಶಿಕಲಾ ಭಟ್ಟ, ಡಾ. ಅಜಿತ್ ಹೆಗಡೆ, ಗಣೇಶ ಹೊಸ್ಮನಿ, ರತ್ನಾಕರ ನಾಯ್ಕ, ಜಿ.ವಿ.ಭಟ್ಟ ಕೊಪ್ಪಲತೋಟ, ದತ್ತಗುರು ಕಂಠಿ, ಗಾಯತ್ರಿ ರಾಘವೇಂದ್ರ, ಉಮೇಶ ನಾಯ್ಕ ಪಾಲ್ಗೊಂಡಿದ್ದರು‌. ‘ಸಾಹಿತ್ಯ ಓದುಗರು ಕಡಿಮೆಯಾಗುತ್ತಿದ್ದಾರೆ’ ಕುರಿತ ಸಾಹಿತ್ಯ ಪಟ್ಟಂಗದಲ್ಲಿ ನಿವೃತ್ತ ಪ್ರಾದ್ಯಾಪಕಿ ವಿಜಯನಳಿನಿ ರಮೇಶ, ಅಶೋಕ ಹಾಸ್ಯಗಾರ, ಕೆ.ಎನ್. ಹೊಸ್ಮನಿ, ಸುಬ್ರಾಯ ಮತ್ತಿಹಳ್ಳಿ, ಭವ್ಯಾ ಹಳೆಯೂರು, ಸಿಂಧುಚಂದ್ರ ಹೆಗಡೆ, ಮೂರ್ತಿ ಅಂಕೋಲೆಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.