ಹಳಿಯಾಳ ಪಟ್ಟಣದ ಎಂಜಿನಿಯರಿಂಗ್ ಕಾಲೇಜು ರಸ್ತೆಯು ಹೊಂಡ ಬಿದ್ದು ಹಾಳಾಗಿದೆ
ಕಾರವಾರ: ಕೆಲ ತಿಂಗಳ ಹಿಂದಷ್ಟೆ ನಗರದ ಕೈಗಾ ರಸ್ತೆಯಲ್ಲಿ ಹಚ್ಚಿದ್ದ ತೇಪೆ ಮಳೆಯ ಅಬ್ಬರಕ್ಕೆ ಕಿತ್ತು ಹೋಗಿದ್ದು, ಹೊಂಡಗಳ ಮಧ್ಯೆ ರಸ್ತೆ ಹುಡುಕಾಡುತ್ತ ವಾಹನ ಸವಾರರು ಸಾಗುತ್ತಿದ್ದಾರೆ. ಹೊಂಡ ತಪ್ಪಿಸುವ ಆತುರದಲ್ಲಿ ನಿಯಂತ್ರಣ ತಪ್ಪಿ ಬಿದ್ದ ಬೈಕ್ ಸವಾರರ ಲೆಕ್ಕವಿಲ್ಲ.
ಇದು ಕೇವಲ ಕಾರವಾರ ನಗರದ ಕಥೆಯಷ್ಟೆ ಅಲ್ಲ. ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಕಾರವಾರದಲ್ಲಿ ರೈಲು ನಿಲ್ದಾಣ, ಕೈಗಾ, ಇನ್ನಿತರ ಹಳ್ಳಿಗೆ ಸಂಪರ್ಕಿಸುವ ಜೊತೆಗೆ ಹಬ್ಬುವಾಡಾ, ಬಾಂಡಿಶಿಟ್ಟಾ, ಕೆಎಚ್‌ಬಿ ಕಾಲೋನಿ ಪ್ರದೇಶಗಳ ಜನರ ಓಡಾಟ ಹೆಚ್ಚಿರುವ ರಸ್ತೆ ಹೆಚ್ಚು ಹದಗೆಟ್ಟಿದೆ. ಒಳರಸ್ತೆಗಳಲ್ಲಿ ಅಂತ ದುಃಸ್ಥಿತಿ ಕಾಣುತ್ತಿಲ್ಲ.
‘ಬೈತಕೋಲ ರಸ್ತೆಯು ಹೊಂಡಗುಂಡಿಗಳಿಂದ ತುಂಬಿದೆ. ಈ ಮಾರ್ಗದಲ್ಲಿ ಸಾಗಲು ಆಟೊ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಬಂದರಿನಿಂದ ಸರಕು ಸಾಗಣೆ ಮಾಡುವ ವಾಹನಗಳು ಸಾಗುವುದರಿಂದ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡುತ್ತಿದೆ’ ಎಂಬುದು ಸಾಮಾಜಿಕ ಕಾರ್ಯಕರ್ತ ವಿಲ್ಸನ್ ಫರ್ನಾಂಡಿಸ್ ಅವರ ದೂರು.
‘ಹಬ್ಬುವಾಡಾ ರಸ್ತೆಯ ನಿರ್ವಹಣೆ ಹೊಣೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು. ಕಳೆದ ವರ್ಷ ನಗರಸಭೆಯಿಂದ ಹೊಂಡಗಳನ್ನು ಸರಿಪಡಿಸುವ ಕೆಲಸ ಮಾಡಲಾಗಿತ್ತು. ಮಳೆ ಕಡಿಮೆಯಾದರೆ ತಾತ್ಕಾಲಿಕ ದುರಸ್ತಿ ಮಾಡುತ್ತೇವೆ’ ಎಂದು ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಪ್ರತಿಕ್ರಿಯಿಸಿದರು.
ಶಿರಸಿ ನಗರದಲ್ಲಿ ಬಹುತೇಕ ರಸ್ತೆಗಳು ನಿರ್ವಹಣೆ ಕೊರತೆಯಿಂದ ಹದಗೆಟ್ಟು ಸಂಚಾರಕ್ಕೆ ತೊಡಕಾಗುತ್ತಿದೆ. ಮಳೆ ಸುರಿವ ವೇಳೆ ಹಲವು ಗುಂಡಿಗಳು ತುಂಬಿ ಓಡಾಡಲು ಹರಸಾಹಸ ಪಡಬೇಕಿದೆ. ಅಶ್ವಿನಿ ಸರ್ಕಲ್, ಮರಾಠಿಕೊಪ್ಪ ರಸ್ತೆ, ಕಾಲೇಜ್ ರಸ್ತೆ, ಪಂಡಿತ ಆಸ್ಪತ್ರೆ ಎದುರು, ಐದು ವೃತ್ತದ ಸುತ್ತಮುತ್ತ, ಅಗಸೇಬಾಗಿಲು, ಕೋಟೆಕೆರೆ ಮಾರ್ಗ ಸೇರಿ ಹಲವಾರು ರಸ್ತೆಗಳು ಗುಂಡಿಗಳಿಂದ ತುಂಬಿವೆ.
‘ಅಶ್ವಿನಿ ಸರ್ಕಲ್ ಬಳಿ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಿವೆ. ಆದರೆ ಹೊಂಡ ತುಂಬಿ ಸರಿಪಡಿಸುವ ಕೆಲಸ ಆಗುತ್ತಿಲ್ಲ’ ಎನ್ನುತ್ತಾರೆ ನಗರ ನಿವಾಸಿ ರಾಮಚಂದ್ರ ಹೆಗಡೆ.
ಗೋಕರ್ಣದ ಮುಖ್ಯ ರಸ್ತೆಯೇ ಹೊಂಡಮಯದಿಂದ ಕೂಡಿದ್ದು, ಪ್ರವಾಸಿಗರು ಹೈರಾಣಾಗುವ ಪರಿಸ್ಥಿತಿ ಕಂಡುಬರುತ್ತಿದೆ. ಗ್ರಾಮದ ಉಳಿದ ರಸ್ತೆಯ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ‘ಗೋಕರ್ಣ ಭಾಗದ ಎಲ್ಲಾ ರಸ್ತೆಗಳೂ ಹೊಂಡದಿಂದಲೇ ತುಂಬಿದೆ. ರೋಗಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದೇ ಸವಾಲಿನ ಕೆಲಸವಾಗಿದೆ’ ಎನ್ನುತ್ತಾರೆ ಆಂಬುಲೆನ್ಸ್ ಚಾಲಕ ಗಣೇಶ ನಾಯಕ.
ಹಳಿಯಾಳ ಪಟ್ಟಣದ ಕೆಲ ಬಡಾವಣೆಗಳಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ. ಪೈಪ್‌ಲೈನ್ ಅಳವಡಿಕೆಗೆ ಕಾಲುವೆ ತೆಗೆದು, ಹಾಗೆಯೇ ಬಿಟ್ಟಿದ್ದರಿಂದಲೂ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತಿರುವ ದೂರು ಹೆಚ್ಚಿದೆ. ಎಂಜಿನಿಯರಿಂಗ್ ಕಾಲೇಜಿನಿಂದ ದಾಂಡೇಲಿ ಯಲ್ಲಾಪುರ ಭಾಗಕ್ಕೆ ಸಾಗುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ.
ಮುಂಡಗೋಡ ಪಟ್ಟಣದಲ್ಲಿಯೂ ರಸ್ತೆಗಳು ಹದಗೆಟ್ಟಿದ್ದು, ಹೊಂಡ ತುಂಬುವಂತೆ ಒತ್ತಾಯಿಸಿ ಜನರು ಪ್ರತಿಭಟಿಸಿದ ಘಟನೆಗಳು ಈಚೆಗೆ ನಡೆದಿವೆ. ಅಂಕೋಲಾ ಪಟ್ಟಣದ ಪೂಜಗೇರಿ ರಸ್ತೆಯು ಸಂಪೂರ್ಣ ಹೊಂಡಗಳಿಂದಲೇ ತುಂಬಿದ್ದು, ಮಂಜಗುಣಿ ಮೂಲಕ ಗೋಕರ್ಣ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎನ್ನುತ್ತಾರೆ ಪೂಜಗೇರಿಯ ವಿನೋದ ಗೌಡ.
ಯಲ್ಲಾಪುರ ಪಟ್ಟಣದ ಐಬಿ ರಸ್ತೆಯ ಬಸವೇಶ್ವರ ದೇವಸ್ಥಾನದ ಎದುರಿನ ರಸ್ತೆ ಹೊಂಡಮಯವಾಗಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಮಳೆಯ ಅವಧಿಯಲ್ಲಿ ಈ ಹೊಂಡದಲ್ಲಿ ನೀರು ತುಂಬಿನಿಂತು, ವಾಹನ ಸಂಚರಿಸಿದಾಗ ನೀರು ಸಿಡಿದು ಪಾದಚಾರಿಗಳಿಗೆ ಸಿಂಪಡಣೆಯಾಗುತ್ತಿದೆ. ಬಸ್ ನಿಲ್ದಾಣದ ಎದುರಿನಲ್ಲಿಯೂ ಬೃಹತ್ ಗಾತ್ರದ ಹೊಂಡ ಬಿದ್ದಿದ್ದು ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂಬುದು ಜನರ ದೂರು.
ದಾಂಡೇಲಿ ನಗರದಲ್ಲಿ ಒಳಚರಂಡಿ ಹಾಗೂ ಬಹು ಗ್ರಾಮ ಕುಡಿಯುವ ನೀರು ಕಾಮಗಾರಿ ಯೋಜನೆಗೆ ಸಂಬಂಧಿಸಿ ಮುಖ್ಯ ರಸ್ತೆಗಳನ್ನು ಕಾಮಗಾರಿಗಾಗಿ ಅಗೆಯಲಾಗಿದ್ದು ಬಹುತೇಕ ಮಾರ್ಗಗಳು ಗುಂಡಿಗಳಿಂದ ತುಂಬಿಹೋಗಿವೆ.
‘ಹಳೇ ದಾಂಡೇಲಿ ಸಂಪರ್ಕಿಸುವ ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ಹಾಗೂ ಮನವಿ ನೀಡಿದ ನಂತರ ಗುಂಡಿಗಳಿಗೆ ಮಣ್ಣು ಹಾಕಿ ದುರಸ್ತಿ ಮಾಡಲಾಗಿತ್ತು. ಮತ್ತೆ ಮಳೆಯ ಕಾರಣಕ್ಕೆ ಗುಂಡಿಗಳು ಉಂಟಾಗಿವೆ’ ಎಂದು ಸ್ಥಳೀಯರಾದ ಅಬ್ದುಲ್ ಹೇಳುತ್ತಾರೆ.
ಹೆದ್ದಾರಿ ದುರವಸ್ಥೆಯೇ ಸಮಸ್ಯೆ
ಭಟ್ಕಳ ಪಟ್ಟಣ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹೊಂಡಮಯವಾಗಿದೆ. ಇದರಿಂದಾಗಿ ಕೆಲ ವಾರ್ಡ್‌ಗಳಲ್ಲಿ ಜನರು ಸಂಚರಿಸಲು ಪರದಾಡಬೇಕಿದೆ. ಮೂಡಭಟ್ಕಳ ಬೈಪಾಸ್‌ನಿಂದ ಸಂಶುದ್ದೀನ್ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿದೆ. ಇಲ್ಲಿ ಜೀವಭಯದಲ್ಲೇ ವಾಹನ ಚಲಾಯಿಸಬೇಕಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.
‘ಬೇಸಿಗೆಯಲ್ಲೂ ದುರಸ್ತಿ ನಡೆದಿರಲಿಲ್ಲ’
ಹೊನ್ನಾವರ ಪಟ್ಟಣದ ಹೆಚ್ಚಿನ ರಸ್ತೆಗಳು ಹೊಂಡಮಯವಾಗಿವೆ. ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಸಾರ್ವಜನಿಕರು ನಿತ್ಯ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ‘ಈಚಿನ ವರ್ಷಗಳಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು ಆಕರ್ಷಣೆ ಹೆಚ್ಚಿಸಿಕೊಂಡಿರುವುದರಿಂದ ಪ್ರವಾಸಿ ವಾಹನಗಳ ಸಂಖ್ಯೆ ತೀರ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ರಸ್ತೆ ಮತ್ತಿತರ ಮೂಲ ಸೌಲಭ್ಯ ಪೂರೈಸುವ ಕಾರ್ಯ ನಡೆದಿಲ್ಲ. ಬೇಸಿಗೆಯಲ್ಲಿ ರಸ್ತೆ ದುರಸ್ತಿ ಕೈಗೊಂಡಿಲ್ಲ. ಅತಿವೃಷ್ಟಿಗೆ ರಸ್ತೆ ಇನ್ನಷ್ಟು ಹಾಳಾಗಿದೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
‘ಪ್ರಭಾತನಗರದ ಲಯನ್ಸ್ ಕ್ಲಬ್‌ಗೆ ತೆರಳುವ ರಸ್ತೆ ಹಾಗೂ ರಜತಗಿರಿ ರಸ್ತೆಯಲ್ಲಿ ಹೊಂಡಗಳೇ ಹೆಚ್ಚಿದ್ದು, ವಾಹನ ಸವಾರರು ರಸ್ತೆ ಹುಡುಕಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ ನಾಯ್ಕ.
ಕುಮಟಾ ಪಟ್ಟಣದ ರಸ್ತೆ ದುರಸ್ತಿಗೆ ಎರಡು ವರ್ಷಗಳಿಂದ ಹಣ ಮಂಜೂರಿ ಆಗಿಲ್ಲ. ಶಾಸಕರ ನಿಧಿ ಮೊತ್ತದಿಂದಲೇ ಅಲ್ಲಲ್ಲಿ ದುರಸ್ತಿ ಕಾರ್ಯ ಕೈಕೊಳ್ಳಲಾಗುತ್ತಿದೆ.ದಿನಕರ ಶೆಟ್ಟಿ, ಕುಮಟಾ ಶಾಸಕ
ದಾಂಡೇಲಿ ನಗರದ ಹಲವು ರಸ್ತೆಗಳು ಕೆಸರು ಗದ್ದೆಯಂತಾಗಿವೆ. ರಸ್ತೆ ದುರಸ್ತಿಗೆ ಅನುದಾನವೇ ಇಲ್ಲ ಎನ್ನುವ ಉತ್ತರವನ್ನು ನಗರಸಭೆಯವರು ನೀಡುತ್ತಾರೆಸುಧೀರ ಶೆಟ್ಟಿ, ದಾಂಡೇಲಿ ಸೇವಾ ಸಂಕಲ್ಪ ತಂಡದ ಸದಸ್ಯ
ಯಲ್ಲಾಪುರ ಪಟ್ಟಣದ ಐಬಿ ರಸ್ತೆ ಕಿರಿದಾಗಿದೆಯಲ್ಲದೆ ಹೊಂಡದಿಂದ ಕೂಡಿ ಸಾರ್ವಜನಿಕರಿಗೆ ತೊಂದರೆ ಆಗಿದೆ. ಇದನ್ನು ಶೀಘ್ರವಾಗಿ ಸರಿಪಡಿಸಬೇಕು.ಸತೀಶ ನಾಯ್ಕ, ಯಲ್ಲಾಪುರ ನಿವಾಸಿ
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.