
ಯಲ್ಲಾಪುರ: ʻಗ್ರಾಮ ಮತ್ತು ನಗರ ಜೀವನದ ಸಂಬಂಧ ನಿಕಟವಾಗಬೇಕು. ಗ್ರಾಮ ಮತ್ತು ನಗರದ ನಡುವೆ ಸಮನ್ವಯತೆ ಸಾಧಿಸುವುದು ಹೇಗೆ ಎನ್ನುವುದು ಸದ್ಯದ ಆಲೋಚನೆ ಆಗಬೇಕುʼ ಎಂದು ಗುಜರಾತ್ ರಾಜ್ಯದ ಪೊಲೀಸ್ ಆಯುಕ್ತ ನರಸಿಂಹ ಕೋಮಾರ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಗ.ನಾ. ಕೋಮಾರ ಅಭಿನಂದನಾ ಸಮಾರಂಭದ ಅಂಗವಾಗಿ ಭಾನುವಾರ ನಡೆದ
ʻಗ್ರಾಮ ಸಂಗ್ರಾಮ-ಸಂಧಾನʼ ವಿಚಾರ ಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ʻನಮಗೆ ಇಷ್ಟ ಇದೆಯೋ ಇಲ್ಲವೋ ಬದಲಾವಣೆ ಆಗಿಯೇ ಆಗುತ್ತದೆ. ಈ ಅನಿವಾರ್ಯತೆಯನ್ನು ಒಪ್ಪಿಕೊಂಡು ಅದಕ್ಕೆ ಸಹಜವಾಗಿ ಹೊಂದಿಕೊಳ್ಳಬೇಕು. ನಾವು ಎಲ್ಲಿ ಸ್ಥಿರವಾಗಿದ್ದೇವೊ ಅದರ ವಿಕಾಸಕ್ಕೆ, ಅಭಿವೃದ್ಧಿಗೆ ಹೋರಾಡಬೇಕುʼ ಎಂದರು.
ಸಾಹಿತಿ ಶ್ರೀಧರ ಬಳಗಾರ ಮಾತನಾಡಿ, ʻಪ್ರೀತಿ ಇದ್ದಾಗ ಸಹನೆ ಇರುತ್ತದೆ. ಪ್ರೀತಿ ಕಳಕೊಂಡಾಗ ಅಸಹನೆ ಪ್ರಾರಂಭವಾಗುತ್ತದೆ. ಗ್ರಾಮೀಣ ಬದುಕನ್ನು ಪ್ರೀತಿಸಬೇಕು’ ಎಂದು ತಿಳಿಸಿದರು.
ರಂಗಕಮಿ೯ ರಾಮಕೃಷ್ಣ ದುಂಡಿ ಮಾತನಾಡಿ, ʻಯಾವುದೇ ಬದಲಾವಣೆ ನಿಧಾನವಾಗಿ ಆಗಬೇಕು. ಆಗ ಸಮುದಾಯ ಆ ಬದಲಾವಣೆಗೆ ಹೊಂದಿಕೊಳ್ಳುತ್ತದೆ. ಇಂದು ಬದಲಾವಣೆಯ ವೇಗ ತೀವ್ರವಾಗಿದೆ. ಒಂದರ್ಥದಲ್ಲಿ ಅಭಿವೃದ್ಧಿ ನಮ್ಮ ಮೇಲೆ ಹೇರಲ್ಪಡುತ್ತಿದೆʼ ಎಂದರು.
ತಾಳಮದ್ದಲೆ ಅಥ೯ದಾರಿ ಎಂ. ಎನ್. ಹೆಗಡೆ ಮಾತನಾಡಿ, ʻಗ್ರಾಮೀಣ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಗರದಲ್ಲಿ ವಾಸಿಸುವ ಹಳ್ಳಿಗರು ಕಡ್ಡಾಯವಾಗಿ ಹಬ್ಬ ಹರಿದಿನಗಳಿಗೆ ಮನೆಗೆ ಬರಬೇಕು. ಹಳ್ಳಿಯೊಂದಿಗೆ ಅವರಿಗೆ ನಿರಂತರ ಸಂಪರ್ಕ ಇರಬೇಕು. ನಗರ ವಲಸೆಯಿಂದ ಗ್ರಾಮೀಣ ಸಂಸ್ಕೃತಿಗಳ ನಾಶ ಆಗದಂತೆ ತಡೆಯಬೇಕುʼ ಎಂದು ನುಡಿದರು.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ʻಹಳ್ಳಿಗಳಿಗೆ ಸಾವಿಲ್ಲ. ಹಳ್ಳಿಗಳಲ್ಲಿ ಮತ್ತೆ ಜೀವಕಳೆ ತುಂಬಲಿದೆ. ನಗರದ ಒತ್ತಡದಿಂದ ಜನ ಮತ್ತೆ ಹಳ್ಳಿಗಳತ್ತ ಮುಖಮಾಡಲಿದ್ದಾರೆʼ ಎಂದರು.
ಗ.ನಾ. ಕೋಮಾರ, ಸುಬ್ಬಯ್ಯ ದೋಗಳೆ, ಎಂ.ಆರ್. ಹೆಗಡೆ, ಮುರಳಿ ಹೆಗಡೆ, ಡಿ ಎನ್ ಗಾಂವ್ಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.