ADVERTISEMENT

ಉತ್ತರ ಕನ್ನಡ | ಅಪಘಾತಕ್ಕೆ 2 ವರ್ಷದಲ್ಲಿ 439 ಸಾವು

ಹೆಲ್ಮೆಟ್ ಧಾರಣೆ ಜಾಗೃತಿಗೆ ಪೊಲೀಸರಿಂದ ಬೈಕ್ ರ‍್ಯಾಲಿ: ಎಸ್‌ಪಿ ದೀಪನ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 7:03 IST
Last Updated 7 ಅಕ್ಟೋಬರ್ 2025, 7:03 IST
ಹೆಲ್ಮೆಟ್ ಜಾಗೃತಿ ಅಭಿಯಾನದ ಅಂಗವಾಗಿ ಕಾರವಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ನೇತೃತ್ವದಲ್ಲಿ ಪೊಲೀಸರು ದ್ವಿಚಕ್ರ ವಾಹನ ರ‍್ಯಾಲಿ ನಡೆಸಿದರು 
ಹೆಲ್ಮೆಟ್ ಜಾಗೃತಿ ಅಭಿಯಾನದ ಅಂಗವಾಗಿ ಕಾರವಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ನೇತೃತ್ವದಲ್ಲಿ ಪೊಲೀಸರು ದ್ವಿಚಕ್ರ ವಾಹನ ರ‍್ಯಾಲಿ ನಡೆಸಿದರು    

ಕಾರವಾರ: ‘ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ’ ಎಂಬ ಸಂದೇಶ ಸಾರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಸೇರಿದಂತೆ ನೂರಾರು ಪೊಲೀಸರು ದ್ವಿಚಕ್ರ ವಾಹನ ರ‍್ಯಾಲಿ ನಡೆಸುವ ಮೂಲಕ ಸೋಮವಾರ ನಗರದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

ಪೊಲೀಸ್ ಇಲಾಖೆಯು ಸಂಚಾರ ನಿಯಮ ಪಾಲನೆ ಜಾಗೃತಿ ಸಪ್ತಾಹ ಕೈಗೊಂಡಿದ್ದು, ಮೊದಲ ದಿನ ಹೆಲ್ಮೆಟ್ ಜಾಗೃತಿ ಮೂಡಿಸುವಂತೆ ಜನರನ್ನು ಪ್ರೇರೇಪಿಸಲು ರ‍್ಯಾಲಿ ನಡೆಯಿತು. ಇಲ್ಲಿನ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರ‍್ಯಾಲಿಗೆ ಚಾಲನೆ ಸಿಕ್ಕಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ಹಸಿರು ನಿಶಾನೆ ತೋರಿಸುವ ಮೂಲಕ ರ‍್ಯಾಲಿಗೆ ಸಾಂಕೇತಿಕ ಚಾಲನೆ ನೀಡಿದರು. ವರಿಷ್ಠಾಧಿಕಾರಿ ದೀಪನ್ ಅವರು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದಂತೆ ಅವರನ್ನು ಹಿಂಬಾಲಿಸಿ ನೂರಾರು ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಾಗಿದರು. ಮುಖ್ಯ ರಸ್ತೆಗಳಲ್ಲಿ ಸಾಗಿದ ರ‍್ಯಾಲಿಯು ಸದಾಶಿವಗಡ ಭಾಗದಲ್ಲೂ ಸಂಚರಿಸಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಮೀಪದ ಉದ್ಯಾನದ ಬಳಿ ಸಮಾರೋಪಗೊಂಡಿತು.

ADVERTISEMENT

‘ಕಳೆದ 9 ತಿಂಗಳಿನಲ್ಲೇ ಜಿಲ್ಲೆಯಲ್ಲಿ 33 ಸಾವಿರದಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಎರಡು ವರ್ಷದಲ್ಲಿ 439 ಜನರು ವಾಹನ ಅಪಘಾತದಿಂದ ಮೃತಪಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಅಪಘಾತಕ್ಕೆ ಎಡೆಮಾಡಿಕೊಡಲಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ಡಿಎಸ್‌ಪಿ ಎಸ್.ವಿ.ಗಿರೀಶ್, ಸಶಸ್ತ್ರ ಮೀಸಲು ಪಡೆಯ ಡಿಎಸ್‌ಪಿ ರಾಘವೇಂದ್ರ ನಾಯಕ, ಇತರರು ಪಾಲ್ಗೊಂಡಿದ್ದರು.

ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ ಎಂಬ ಸಬೂಬು ನೀಡಬಾರದು. ಕೂದಲು ಹೋದರೆ ಮತ್ತೆ ಹುಟ್ಟಬಹುದು ಜೀವ ಹೋದರೆ ಮತ್ತೆ ಮರಳದು ದೀಪನ್

-ಎಂ.ಎನ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.