ಕಾರವಾರ: ‘ಭೂಕುಸಿತ, ಸುನಾಮಿಯಂತಹ ಪ್ರಾಕೃತಿಕ ಅವಘಡಗಳಿಗೆ ಮನುಷ್ಯನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದಬ್ಬಾಳಿಕೆಯೇ ಕಾರಣ. ಇದು ನಿಯಂತ್ರಣವಾಗದ ಹೊರತು ನಿಸರ್ಗ ಮುನಿಯುವುದು ತಪ್ಪುವುದಿಲ್ಲ’ ಎಂದು ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದು ನಾಯ್ಕ ಹೇಳಿದರು.
ಸಂತ ನಿರಂಕಾರಿ ಮಿಶನ್‌ನ ಕಾರವಾರ ಘಟಕದಿಂದ ತಾಲ್ಲೂಕಿನ ಕಡವಾಡ ಸೇತುವೆ ಬಳಿ ಈಚೆಗೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಸಿ ನೆಟ್ಟ ಮಾತ್ರಕ್ಕೆ ಪರಿಸರದ ಸಂರಕ್ಷಣೆ ಆಗುತ್ತದೆ ಎಂಬುದು ತಪ್ಪು ಕಲ್ಪನೆ. ನೆಟ್ಟ ಸಸಿಗಳು ಮರವಾಗಿ ಬೆಳೆಯುವವರೆಗೆ ಅವುಗಳ ಕಾಳಜಿವಹಿಸಬೇಕು. ಸಸ್ಯಸಂಪತ್ತುಗಳನ್ನು ಹಾಳುಗೆಡವದೆ ಅವುಗಳ ರಕ್ಷಣೆ ಮಾಡಬೇಕು’ ಎಂದರು.
ಗಜಾನನ ಯುವಕ ಮಂಡಳಿ ಅಧ್ಯಕ್ಷ ಉದಯ ಭೋವಿ, ‘ಕಾಂಡ್ಲಾದಂತಹ ಪರಿಸರ ಸಂರಕ್ಷಿಸುವ ಸಸ್ಯ ಪ್ರಬೇಧಗಳನ್ನು ನಾಶಪಡಿಸುವ ಕೆಲಸ ನಡೆಯುತ್ತಿದೆ. ಇವುಗಳಿಗೆ ಆಸ್ಪದ ನೀಡಬಾರದು. ಅಳಿವಿನಂಚಿನಲ್ಲಿರುವ ಸಸಿಗಳನ್ನು, ಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರ ಉಳಿಯುವಂತೆ ಎಚ್ಚರವಹಿಸಬೇಕು’ ಎಂದರು.
ಸಂತ ನಿರಂಕಾರಿ ಮಿಶನ್‌ನ ಜಿಲ್ಲಾ ಘಟಕದ ಸಂಯೋಜಕ ವಿನೋದ ಕೇಳಸ್ಕರ್, ‘ವನಮಹೋತ್ಸವ ಒಂದು ದಿನಕ್ಕೆ ಸೀಮಿತವಾಗಿಲ್ಲ. ಮಿಶನ್ ವತಿಯಿಂದ ನೆಟ್ಟ ಸಸಿಗಳನ್ನು ಮುಂದಿನ ಮೂರು ವರ್ಷಗಳವರೆಗೆ ನಿರಂತರವಾಗಿ ಆರೈಕೆ ಮಾಡುತ್ತೇವೆ’ ಎಂದರು.
ಕಾಳಿನದಿಯ ಅಂಚಿನಲ್ಲಿ ಹತ್ತಾರು ಸಸಿಗಳನ್ನು ನೆಡುವ ಜೊತೆಗೆ ಅವುಗಳಿಗೆ ರಕ್ಷಣಾ ಬೇಲಿ ಅಳವಡಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ ನಾರ್ವೇಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.