ADVERTISEMENT

ಶಿರಸಿ | 8,420 ಅರ್ಜಿ ವಿಲೇವಾರಿ ಬಾಕಿ: ನಾಯ್ಕ

4 ವರ್ಷಗಳಿಂದ ವಿಲೇವಾರಿಯಾಗದ ಅರ್ಜಿ: ರವೀಂದ್ರ ನಾಯ್ಕ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:18 IST
Last Updated 1 ಆಗಸ್ಟ್ 2025, 6:18 IST
ರವೀಂದ್ರ ನಾಯ್ಕ
ರವೀಂದ್ರ ನಾಯ್ಕ   

ಶಿರಸಿ: ಯಾವುದೇ ಕಾನೂನು ಸಮಸ್ಯೆ ಇಲ್ಲದಿದ್ದರೂ ನಾಲ್ಕು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರ ಅರಣ್ಯ ಭೂಮಿ ಹಕ್ಕು ಕೋರಿ ಸಲ್ಲಿಕೆಯಾಗಿದ್ದ 8,420 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. 

ಈ ಕುರಿತು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಹೇಳಿಕೆ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದು, ಜಿಲ್ಲೆ ನಗರ ಸ್ಥಳೀಯ ಸಂಸ್ಥೆಯಲ್ಲಿನ ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿರುವ ಅರ್ಜಿ ವಿಲೇವಾರಿ ಪ್ರಕ್ರಿಯೆ ಸಂಪೂರ್ಣ ನನೆಗುದಿಗೆ ಸೇರಿದೆ. ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿರುವ  ಅರಣ್ಯ ವಾಸಿಗಳು ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಯಲ್ಲಿ ಅರಣ್ಯ ಹಕ್ಕು ಕಾಯಿದೆಯಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ  ಅರ್ಜಿಗಳ ಮಂಜೂರಿಗೆ ಚಾಲನೆ ದೊರಕದೇ ಸ್ಥಗಿತಗೊಂಡಿರುವುದು ವಿಷಾದಕರ ಎಂದು ಅವರು ತಿಳಿಸಿದ್ದಾರೆ. 

ಜಿಲ್ಲೆಯ 213 ವಾರ್ಡ್ ಸಮಿತಿಗಳನ್ನು ಹಕ್ಕು ಮಂಜೂರಿ ಪ್ರಕ್ರಿಯೆಗೆ ನೇತೃತ್ವ ನೀಡಲಾಗಿತ್ತು. ಮಂಜೂರಿ ಪ್ರಕ್ರಿಯೆಗೆ ಸಂಬಂಧಿಸಿ ವಾರ್ಡ್ ಸಮಿತಿ ಸಭೆ, ವಾರ್ಡ್ ಸಭೆ ಅರ್ಜಿ ಪರಿಶೀಲನೆ, ದಾಖಲೆಗಳ ಸಂಗ್ರಹ, ಜಿಪಿಎಸ್ ಸರ್ವೇ ಕಾರ್ಯಮುಂತಾದ ವಿಧಿ ವಿಧಾನ ಕಾರ್ಯ ಪ್ರಗತಿ ಕಾಣದೇ ಇರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದೇಶದಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನವಾಗಿ 18 ವರ್ಷಗಳಾದರೂ ಮಂಜೂರಿ ಪ್ರಕ್ರಿಯೆ ಕುಂಠಿತವಾಗಿದೆ. ಗ್ರಾಮೀಣ ಭಾಗದ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಲ್ಲದೇ ಮಂಜೂರಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದರೆ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿ, ನಗರ ಉಪವಿಭಾಗ, ಮತ್ತು ಜಿಲ್ಲಾ ಮಟ್ಟದ ನಗರ ಸಮಿತಿ ಅಸ್ತಿತ್ವದಲ್ಲಿ ಇದ್ದು ಮಂಜೂರಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ಹೊರಹಾಕಿದ್ದಾರೆ.

8420 ಅರ್ಜಿ ಸಲ್ಲಿಕೆ:  ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕಿನ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 8420 ಅರ್ಜಿಗಳು ಸ್ವೀಕರಿಸಲಾಗಿದ್ದು ಅವುಗಳಲ್ಲಿ ಕಾರವಾರ 20 ಹಳಿಯಾಳ 1570 ಅಂಕೋಲ 270 ಕುಮಟಾ 414 ಹೊನ್ನಾವರ 519 ಭಟ್ಕಳ 391 ಶಿರಸಿ 1241 ಸಿದ್ದಾಪುರ 1391 ಯಲ್ಲಾಪುರ 1750 ಮುಂಡಗೋಡ 854 ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.