
ಕಾರವಾರ: ದೆಹಲಿಯಲ್ಲಿ ಬಾಂಬ್ ಸ್ಫೋಟ ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸೂಕ್ಷ್ಮ ಸ್ಥಳಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.
ಅಣು ವಿದ್ಯುತ್ ಸ್ಥಾವರ, ಜಲಾಶಯ, ವಾಣಿಜ್ಯ ಬಂದರು ಸೇರಿದಂತೆ ಹಲವು ಸೂಕ್ಷ್ಮ ತಾಣಗಳಿರುವ ಜಿಲ್ಲೆಯಲ್ಲಿ ಪೊಲೀಸರು ಸೋಮವಾರ ರಾತ್ರಿಯಿಂದಲೇ ತಪಾಸಣೆ ಚುರುಕುಗೊಳಿಸಿದ್ದಾರೆ.
ಕರ್ನಾಟಕ–ಗೋವಾ ಗಡಿಭಾಗದ ಮಾಜಾಳಿ, ಅನಮೋಡ್ ಚೆಕ್‌ಪೋಸ್ಟ್‌ಗಳಲ್ಲಿ ಗೋವಾದಿಂದ ಬರುವ ವಾಹನಗಳ ತಪಾಸಣೆ ಬಿಗುಗೊಳಿಸಲಾಗಿದೆ. ಎಲ್ಲ ವಾಹನ, ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ.
ಇಲ್ಲಿನ ವಾಣಿಜ್ಯ ಬಂದರು, ರೈಲು ನಿಲ್ದಾಣ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ನ್ಯಾಯಾಲಯ, ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗ ಸೇರಿ ವಿವಿಧೆಡೆಗಳಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳವು ನಿರಂತರ ಪರಿಶೀಲನೆ ಕೈಗೊಂಡಿದೆ. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು ವಾಹನಗಳ ಸಂಚಾರದ ಮೇಲೆ ನಿಗಾ ಇಡಲಾಗುತ್ತಿದೆ.
ಕಾಳಿನದಿಯ ಐದು ಜಲಾಶಯಗಳು, ವಿದ್ಯುದಾಗಾರಗಳು, ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆ ಭಾಗದಲ್ಲಿ ಸಂಚರಿಸುವ ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇರಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಅಂತರರಾಜ್ಯ ಚೆಕ್‌ಪೋಸ್ಟ್, ಸೂಕ್ಷ್ಮ ತಾಣಗಳಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರದ ಸೂಚನೆಯಂತೆ ಹೈ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರ ಭಾಗದಲ್ಲಿಯೂ ಗಸ್ತು ಹೆಚ್ಚಿಸಲು ಕರಾವಳಿ ಕಾವಲು ಪಡೆಗೆ ಸೂಚಿಸಲಾಗಿದೆ. ಹೊರಗಿನಿಂದ ಜಿಲ್ಲೆಗೆ ಬರುವ ಪ್ರತಿಯೊಬ್ಬರ ಮೇಲೂ ನಿಗಾ ಇರಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.