
ಕಾರವಾರ: ಕೋಟೆ, ಕೊತ್ತಲಗಳ ನಾಡು ಎಂದು ಒಂದು ಕಾಲದಲ್ಲಿ ಖ್ಯಾತಿ ಪಡೆದಿದ್ದ ಉತ್ತರ ಕನ್ನಡದಲ್ಲಿ ಈಗ ಐತಿಹಾಸಿಕ ಸ್ಮಾರಕಗಳ ಪಳಿಯುಳಿಕೆಗಳು ಮಾತ್ರವೇ ಉಳಿದುಕೊಂಡಿವೆ. ಇಲಾಖೆಯ ನಿರ್ಲಕ್ಷ ಮುಂದುವರಿದರೆ ಮುಂದಿನ ಪೀಳಿಗೆಗೆ ಐತಿಹಾಸಿಕ ತಾಣಗಳ ಕುರುಹುಗಳೂ ಕಾಣಿಸದು ಎಂಬುದು ಜನರ ದೂರು.
ಸೋದೆ ಅರಸರು, ರಾಣಿ ಚನ್ನಭೈರಾದೇವಿ, ಬಿಳಗಿ ಅರಸರು, ಹೀಗೆ ಹಲವರು ತಮ್ಮ ಆಳ್ವಿಕೆ ಕಾಲದಲ್ಲಿ ನಿರ್ಮಿಸಿದ್ದ ಕೋಟೆ, ಬಸದಿ, ದೇವಾಲಯ, ಬಾವಿಗಳು ಸೇರಿದಂತೆ ನೂರಾರು ಐತಿಹಾಸಿಕ ಸ್ಮಾರಕಗಳು ಜಿಲ್ಲೆಯಲ್ಲಿವೆ. ಅವುಗಳ ಪೈಕಿ ಮಿರ್ಜಾನ ಕೋಟೆ ಸುಭದ್ರವಾಗಿದ್ದರೆ, ಉಳಿದ ಬಹುತೇಕ ಸ್ಮಾರಕಗಳು ಅವಸಾನದ ಅಂಚಿನತ್ತ ಸಾಗುತ್ತಿವೆ.
ಕಾರವಾರ ನಗರಕ್ಕೆ ಸಮೀಪದಲ್ಲಿನ ಸದಾಶಿವಗಡ ಕೋಟೆ ಸೋದೆ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ನೂರಾರು ಪ್ರವಾಸಿಗರನ್ನು ಸೆಳೆಯುತ್ತಿದ್ದ ಈ ತಾಣ ಈಗ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಂಸ್ಥೆಯ ಸುಪರ್ದಿಯಲ್ಲಿದೆ. ಈ ಸ್ಥಳಕ್ಕೆ ಸಾರ್ವಜನಿಕರ ಪ್ರವೇಷ ನಿಷೇಧಿಸಲಾಗಿದೆ. ಕೋಟೆಯಲ್ಲಿ ಕೆಲ ಚಿರೇಕಲ್ಲುಗಳ ಹೊರತಾಗಿ, ಉಳಿದವು ನಾಶವಾಗಿವೆ.
ಕಾರವಾರ ತಾಲ್ಲೂಕಿನ ಮುಡಗೇರಿ ಗ್ರಾಮದಲ್ಲಿ ಮೂರು ಶತಮಾನದ ಹಿಂದಿನ ಸೋದೆ ಅರಸರ ಸಾಮ್ರಾಜ್ಯದ ಕುರುಹುಗಳನ್ನು ಉಳಿಸಿಕೊಂಡಿರುವುದು ಕುತೂಹಲ ಮೂಡಿಸುತ್ತಿದೆ. ಗ್ರಾಮದ ಕೆಲವು ಮನೆಗಳ ಆವರಣದಲ್ಲಿ ಸೋದೆ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಬಾವಿಗಳಿವೆ. ಅವಸಾನದ ಸ್ಥಿತಿಗೆ ತಲುಪಿದ ಕೋಟೆಯ ಅವಶೇಷಗಳು, ನೀರಾವರಿ ವ್ಯವಸ್ಥೆಯ ಕುರುಹುಗಳು, ದೇಗುಲಗಳು ಹೀಗೆ ಅರಸರ ಕಾಲದ ನಿರ್ಮಾಣದ ಕುರುಹುಗಳು ಮುಡಗೇರಿಯು ಸೋದೆ ರಾಜ್ಯದ ಭಾಗವಾಗಿತ್ತು ಎಂಬುದನ್ನು ಸಾರಿ ಹೇಳುತ್ತಿದೆ.
ಗಡಿಭಾಗ ಆಗಿದ್ದ ಕಾರಣದಿಂದಲೇ ಇಲ್ಲಿ ಕೋಟೆ, ಕುದುರೆ ಲಾಯ, ಶಸ್ತ್ರಾಸ್ತ್ರ ಕೊಠಡಿ ಸೇರಿದಂತೆ ರಾಜ್ಯದ ರಕ್ಷಣೆಗೆ ಬೇಕಿದ್ದ ಸೌಲಭ್ಯಗಳನ್ನೆಲ್ಲ ಅಳವಡಿಸಲಾಗಿದ್ದಿರಬಹುದು ಎಂಬುದಾಗಿ ಸ್ಥಳೀಯರು ಅಂದಾಜಿಸುತ್ತಾರೆ. ಆದರೆ, ಇಲ್ಲಿನ ಕೋಟೆ, ಬಾವಿಗಳು ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ.
‘ಗ್ರಾಮದಲ್ಲಿ ಎತ್ತರ ಪ್ರದೇಶವೊಂದರಲ್ಲಿ ಕೋಟೆಯ ಅವಶೇಷವೊಂದಿದೆ. ದೊಡ್ಡ ಗಾತ್ರದ ಚಿರೇಕಲ್ಲುಗಳಿಂದ ಇದು ನಿರ್ಮಾಣವಾಗಿತ್ತು. ಕೋಟೆಯ ಮಧ್ಯದಲ್ಲಿ ಎರಡು ಎತ್ತರದ ಸ್ತಂಭದಂತ ನಿರ್ಮಾಣ ಬಿದ್ದ ಸ್ಥಿತಿಯಲ್ಲಿದ್ದು, ಅದರ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಇದು ಅರಸರ ಕೋಟೆ ಆಗಿದ್ದಿರಬಹುದು’ ಎನ್ನುತ್ತಾರೆ ಗ್ರಾಮಸ್ಥ ವಿಲಾಸ ದೇಸಾಯಿ.
ಶಿರಸಿ ತಾಲ್ಲೂಕಿನಲ್ಲಿರುವ ಐತಿಹಾಸಿಕ ಗುಡ್ನಾಪುರ ರಾಣಿ ನಿವಾಸ, ಸೋಂದಾ ಕೋಟೆಗಳು ಅಭಿವೃದ್ಧಿ ಕಾಣದೆ ಜೀರ್ಣ ಸ್ಥಿತಿಯತ್ತ ತಲುಪಿವೆ. ಬನವಾಸಿಯ ಮಧುಕೇಶ್ವರ ದೇವಾಲಯವೂ ನಿರ್ವಹಣೆ ಇಲ್ಲದೆ ಸೋರುತ್ತಿದೆ. ಗುಡ್ನಾಪುರದಲ್ಲಿ ಕದಂಬರ ಆಳ್ವಿಕೆ ಕಾಲದ ರಾಣಿ ನಿವಾಸದ ಹಲವು ಅವಶೇಷಗಳಿದ್ದು, ಪ್ರಸ್ತುತ ಇಲ್ಲಿರುವ ಅವಶೇಷಗಳು ನಿರ್ವಹಣೆ ಕೊರತೆಯಿಂದ ಕಳೆಗುಂದಿವೆ. ಶಿಥಿಲ ಸ್ಥಿತಿಯಲ್ಲಿರುವ ರಾಣಿ ನಿವಾಸದ ಕಟ್ಟಡದ ಒಳಗೆ ಜೀರ್ಣ ಸ್ಥಿತಿಯಲ್ಲಿರುವ ವೀರಭದ್ರ, ಗಣಪತಿ ಮೂರ್ತಿ, ಜೈನ ತೀರ್ಥಂಕರರ ಮೂರ್ತಿ ಕಾಣಬಹುದಾಗಿದೆ. ಸೋಂದಾದ ಕೋಟೆಯ ರಕ್ಷಣೆಯೂ ವ್ಯವಸ್ಥಿತವಾಗಿ ಇಲಾಖೆಯಿಂದ ಆಗುತ್ತಿಲ್ಲ ಎಂಬ ಆರೋಪವಿದೆ.
‘ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದ ಕಳಶ ದೇವಾಲಯ ಐತಿಹಾಸಿಕ ಸ್ಥಳ. ಕರನಿರಾಕರಣೆಯಂಥ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡ ಕಾರಣಕ್ಕೆ ಈ ಸ್ಥಳ ಬಹುದೊಡ್ಡ ಸ್ವಾತಂತ್ರ್ಯ ಸ್ಮಾರಕ. ಅಳಿದ ಸ್ವಾತಂತ್ರ್ಯ ಯೋಧರನ್ನು ನೆನಪಿಸುವ ಸ್ಥಳ ಇದಾಗಿದ್ದು, ಇಂತಹ ಸ್ಮಾರಕ ಅಳಿವಿನ ಅಂಚಿನಲ್ಲಿದೆ. ಇತಿಹಾಸದಲ್ಲಿ ಮರೆಯಾಗಿ ಹೋಗುವ ಮುನ್ನವೇ ಸರ್ಕಾರಗಳು ಹಿಂದಿನ ನೆನಪನ್ನು ಉಳಿಸಿ ಮುಂದಿನ ತಲೆಮಾರಿಗೆ ಪರಿಚಯಿಸಲು ಇಂತಹ ಸ್ಮಾರಕವನ್ನು ರಕ್ಷಿಸಬೇಕಾಗಿದೆ’ ಎನ್ನುತ್ತಾರೆ ಸೂರ್ವೆ ಗ್ರಾಮದ ನಿವಾಸಿ ದರ್ಶನ ನಾಯಕ.
ಯಲ್ಲಾಪುರ ತಾಲ್ಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಚಿಕ್ಕಮಾವಳ್ಳಿ ಮತ್ತು ಮಾವಳ್ಳಿಯ ಸುತ್ತಮುತ್ತಲ ಬೆಟ್ಟದಲ್ಲಿ ಜೈನ ಹಾಗೂ ಶೈವ ಶಿಲಾ ಶಾಸನಗಳು, ವೀರಗಲ್ಲುಗಳು ದೊರೆತಿವೆ. ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ಕಂಡದ ಬೆಟ್ಟದಲ್ಲಿ ವೀರಗಲ್ಲುಗಳು, ಶಿಲಾಶಾಸನಗಳು ಪತ್ತೆಯಾಗಿವೆ. ಇವು ಪಾಳುಬಿದ್ದ ಸ್ಥಿತಿಯಲ್ಲಿದ್ದು ಕೆಲವು ತುಂಡಾಗಿವೆ, ಮಣ್ಣಿನಲ್ಲಿ ಹೂತುಹೋಗಿವೆ.
‘ಮಾವಳ್ಳಿ ಕಾಡಿನಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆ ಸಿಕ್ಕಿದೆ. ನಂದಿ ವಿಗ್ರಹ ವಿರೂಪ ಸ್ಥಿತಿಯಲ್ಲಿದೆ. ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ’ ಎನ್ನುತ್ತಾರೆ ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ಗುರುಪಾದಯ್ಯ ನಂದೊಳ್ಳಿಮಠ.
ಸಿದ್ದಾಪುರ ತಾಲ್ಲೂಕಿನ ಬಿಳಗಿಯಲ್ಲಿ ಬಿಳಗಿ ಅರಸರ ಕಾಲದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಗೋಲಬಾವಿ ಸರಿಯಾದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ವೈರಿಗಳಿಂದ ರಕ್ಷಿಸಿಕೊಳ್ಳಲು ಅರಸರು ಗೋಲಬಾವಿಯನ್ನು ನಿರ್ಮಿಸಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಪ್ರವಾಸಿ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಬೇಕಾಗಿದ್ದ ಈ ಸ್ಥಳ ಪಾಳು ಬಾವಿಯಂತಾಗಿದೆ.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಸೋಂದಾ ಕೋಟೆ ಸೇರಿದಂತೆ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಸಲುವಾಗಿ ಪುರಾತತ್ವ ಇಲಾಖೆ ತನ್ನ ವ್ಯಾಪ್ತಿಯ ಆಸ್ತಿಗಳ ಸಮರ್ಪಕ ನಿರ್ವಹಣೆಗೆ ಮುತುವರ್ಜಿ ವಹಿಸುವ ಅಗತ್ಯವಿದೆರತ್ನಾಕರ ಬಾಡಲಕೊಪ್ಪ ಸೋಂದಾ ಜಾಗೃತ ವೇದಿಕೆಯ ಸಂಚಾಲಕ
ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿರುವ ಬಿಳಗಿಯ ಗೋಲಬಾವಿ ಸುತ್ತ ಕೇವಲ ಬೇಲಿಯನ್ನು ನಿರ್ಮಿಸಿದ್ದರ ಹೊರತಾಗಿ ಮತ್ತ್ಯಾವ ಅಭಿವೃದ್ಧಿ ಕೆಲಸಗಳು ನಡೆದಿಲ್ಲಸಂತೋಷ ಬಿಳಗಿ ಬಿಳಗಿ ಗ್ರಾಮಸ್ಥ
ಸೋದೆ ಅರಸರ ಕಾಲದಲ್ಲಿ ನಿರ್ಮಿಸಿದ್ದ ಭದ್ರ ಕೋಟೆಗಳ ಪಳಿಯುಳಿಕೆಗಳು ಕಾರವಾರದ ವಿವಿಧೆಡೆ ಕಾಣಸಿಗುತ್ತಿವೆ. ಅವುಗಳನ್ನು ಸರಿಯಾಗಿ ನಿರ್ವಹಿಸಿಟ್ಟಿದ್ದರೆ ಐತಿಹಾಸಿಕ ಕುರುಹುಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತಿತ್ತುಸದಾನಂದ ಗಾಂವಕರ ಮುಡಗೇರಿ ಗ್ರಾಮಸ್ಥ
ಮನೆ ಕಟ್ಟಲು ಸಿಗದ ಪರವಾನಗಿ
ಭಟ್ಕಳ ತಾಲ್ಲೂಕಿನಲ್ಲಿ ಪುರಾತತ್ವ ಇಲಾಖೆ ಇಲಾಖೆಯವರು 11 ದೇವಸ್ಥಾನಗಳು ಹಾಗೂ 1 ಬ್ರಿಟಿಷ್ ಘೋರಿಯನ್ನು ಗುರುತಿಸಿ ಅದನ್ನು ಸ್ಮಾರಕ ಎಂದು ಘೋಷಿಸಿ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಪಟ್ಟಣದಲ್ಲಿ 5 ಮುಠ್ಠಳ್ಳಿ ಗ್ರಾಮ ಪಂಚಾಯಿತಿಯ ಮೂಡಭಟ್ಕಳದಲ್ಲಿ 6 ಹಾಗೂ ಹಾಡುವಳ್ಳಿಯಲ್ಲಿ 1 ದೇವಸ್ಥಾನವನ್ನು ಐತಿಹಾಸಿಕ ಸ್ಮಾರಕ ಎಂದು ಘೋಷಿಸಲಾಗಿದೆ. ಪಟ್ಟಣದ ಸೋನಾರಕೇರಿಯಕಲ್ಲಿರುವ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಉಳಿದ ಎಲ್ಲಾ ಸ್ಮಾರಕಗಳಿಗೆ ಕಾಂಪೌಂಡ್ ನಿರ್ಮಿಸಿ ಇಲಾಖೆ ಕಣ್ಗಾವಲು ಇರಿಸಿದೆ. ‘ಪುರಾತತ್ವ ಇಲಾಖೆ ಗುರುತಿಸಿ ಸ್ಮಾರಕಗಳ 300 ಮೀಟರ್ ದೂರದವೆರೆಗೆ ಕಟ್ಟಡ ಕಟ್ಟಲು ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಇದರಿಂದಾಗಿ ಪಟ್ಟಣ ಹಾಗೂ ಮೂಡಭಟ್ಕಳ ಪ್ರದೇಶದಲ್ಲಿ ಸ್ಮಾರಕ ಇರುವ ಸ್ಥಳದ ಸುತ್ತಮುತ್ತ ನೂರಾರು ಹಳೆಯ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳ ದುರಸ್ತಿ ಮಾಡಿಕೊಳ್ಳಲು ಪರವಾನಗಿ ಸಿಗದೆ ಜನರು ಪರದಾಡುತ್ತಿದ್ದಾರೆ. ದುರಸ್ತಿ ಇಲ್ಲವೇ ಮನೆ ನವೀಕರಣಕ್ಕಾಗಿ ಪುರಾತತ್ವ ಇಲಾಖೆಯ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಅನುಮತಿ ಸಿಗುತ್ತಿಲ್ಲ’ ಎನ್ನುತ್ತಾರೆ ಮೂಡಭಟ್ಕಳ ನಿವಾಸಿ ಶ್ರೀನಿವಾಸ ನಾಯ್ಕ.
ಉಪೇಕ್ಷೆಗೆ ಒಳಗಾದ ಸ್ಮಾರಕ
ಹೊನ್ನಾವರ ತಾಲ್ಲೂಕಿನ ನಗಬಸ್ತಿಕೇರಿಯಲ್ಲಿ ರಾಣಿ ಚನ್ನಭೈರಾದೇವಿ ಕಾಲದ್ದೆನ್ನಲ್ಲಾದ ಜೈನ ಬಸದಿ ಸೇರಿದಂತೆ ಒಟ್ಟೂ 6 ಸ್ಮಾರಕಗಳು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿವೆ. ಗೇರುಸೊಪ್ಪದಿಂದ ಇಲ್ಲಿಗೆ ಇರುವ ಸಂಪರ್ಕ ರಸ್ತೆ ಹಾಳಾಗಿದ್ದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ಗುಂಡಬಾಳ ಸಮೀಪದ ಜನಕಡ್ಕಾಲ್ ನಲ್ಲಿರುವ 16–17ನೇ ಶತಮಾನದ್ದೆನ್ನಲಾದ ಮೆಣಸಿನ ಬಾವಿ ಅಲ್ಲಿಗೆ ಸಮೀಪದ ಜೈನ ಬಸದಿ ಮೊದಲಾದ ಐತಿಹಾಸಿಕ ಸ್ಮಾರಕಗಳು ಉಪೇಕ್ಷೆಗೊಳಗಾಗಿವೆ. ಪಟ್ಟಣಕ್ಕೆ ಸಮೀಪದ ಬ್ರಿಟಿಷ್ ಕಾಲದ ಕರ್ನಲ್ ಹಿಲ್ ಕಂಬದ ಮೇಲೆ ಗಿಡಗಳು ಬೆಳೆದಿದ್ದು ಪಕ್ಕದ ಗುಡ್ಡ ಕುಸಿತದಿಂದ ಸ್ಮಾರಕ ಬೀಳುವ ಅಪಾಯದಲ್ಲಿದೆ. ಇಡಗುಂಜಿ ರಾಮತೀರ್ಥ ಹೈಗುಂದ ಸೇರಿದಂತೆ ಅನಾದಿಕಾಲದ ಕೆಲವು ಪೂಜಾ ಸ್ಥಳಗಳ ಐತಿಹ್ಯ ಪುರಾಣ ಕಥೆಗಳಿಗೆ ಸೀಮಿತವಾಗಿದ್ದು ಅವುಗಳ ಇತಿಹಾಸದ ಕುರಿತು ಅಧ್ಯಯನ ನಡೆದಿಲ್ಲ ಎನ್ನುವ ಅಭಿಪ್ರಾಯವನ್ನು ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.