ADVERTISEMENT

ಉತ್ತರ ಕನ್ನಡ: ಬುಡಕಟ್ಟು ಜಿಲ್ಲೆಯೆಂದು ಘೋಷಿಸಲಿ: ವೆಂಕಟೇಶ ನಾಯ್ಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 15:17 IST
Last Updated 4 ಡಿಸೆಂಬರ್ 2024, 15:17 IST
ಶಿರಸಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಜಾನಪದ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು
ಶಿರಸಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಜಾನಪದ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು   

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯೆಂದು ಸರ್ಕಾರ ಘೋಷಣೆ ಮಾಡಿ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಜಾನಪದ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಅವರು ‘ಬುಡಕಟ್ಟುಗಳ ಬದುಕು ಮತ್ತು ಜಾನಪದ ವೈಶಿಷ್ಟ್ಯತೆಗಳು’ ವಿಷಯದ ಕುರಿತು ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಲಕ್ಷ ಜನಸಂಖ್ಯೆ ಇದೆ. ಶೇಕಡಾ 32ರಷ್ಟು ಬುಡಕಟ್ಟು ಸಮುದಾಯದ ಜನರಿದ್ದು, ಇವರ ಬದುಕು ಅತಂತ್ರ ಸ್ಥಿತಿಯಲ್ಲಿದೆ‌. ಉತ್ತರ ಕಾಣದ ಜಿಲ್ಲೆಯಾಗಿ ಉತ್ತರ ಕನ್ನಡ ಜಿಲ್ಲೆಯ ಪರಿಸ್ಥಿತಿ ಇದೆ. ಬುಡಕಟ್ಟು ಸಮುದಾಯಗಳನ್ನು ಒಂದೇ ವೇದಿಕೆಗೆ ತರುವ ಕೆಲಸವಾಗುತ್ತಿಲ್ಲ’ ಎಂದರು. 

‘ವಿಶ್ವವಿದ್ಯಾಲಯಗಳು ಬುಡಕಟ್ಟು ಸಮುದಾಯಗಳ ಬಗ್ಗೆ ಕೆಲವು ಅಧ್ಯಯನ ನಡೆಸಿವೆ. ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಮಾಡುವ ಅವಕಾಶವಿದ್ದರೂ ಅದು ಆಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಅವರಿಗೆ ನ್ಯಾಯ ಕೊಡಿಸುವ ಬಗ್ಗೆ ಮಾತನಾಡುತ್ತಾರೆ. ಅದಾದ ನಂತರ ಯಾವುದೇ ರೀತಿಯ ಬೆಳವಣಿಗೆಗಳು ನಡೆಯುವುದಿಲ್ಲ. ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಿಸುವ ಕೆಲಸ ಆಗುತ್ತಿಲ್ಲ. ಮೂಲ ಸೌಕರ್ಯಗಳಿಲ್ಲದ ಕುಟುಂಬಗಳು ನಮ್ಮ ಜಿಲ್ಲೆಯಲ್ಲಿದೆ. ಪ್ರಾದೇಶಿಕ ಸಮಸ್ಯೆಗಳನ್ನು ಅರ್ಥೈಸಿಕೊಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಆಗ ಮಾತ್ರ ನಮ್ಮ ಜಿಲ್ಲೆ ಅಭಿವೃದ್ಧಿ ಆಗುತ್ತದೆ. ಅಲ್ಲದೆ, ಜಿಲ್ಲೆಯಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರ ಸ್ಥಾಪಿಸಿದರೆ ಶೈಕ್ಷಣಿಕವಾಗಿಯೂ ಅನುಕೂಲ ಆಗುತ್ತದೆ’ ಎಂದು ಹೇಳಿದರು.

ADVERTISEMENT

ಅರಣ್ಯ ವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಮತ್ತು ಸಾಧ್ಯತೆಗಳು ವಿಷಯದ ಕುರಿತು ಮಾತನಾಡಿದ ಅರಣ್ಯ ಅತಿಕ್ರಮಣದಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ, ‘ಜಿಲ್ಲೆಯ ಅರಣ್ಯ ವಾಸಿಗಳ ಸ್ಥಿತಿ ಚಿಂತಾಜನಕವಾಗಿದೆ. ಬದುಕಿಗಾಗಿ ಜಿಲ್ಲೆಯ ಸಾಕಷ್ಟು ಜನರು ಅರಣ್ಯವಾಸಿಗಳಾಗಿದ್ದಾರೆ. ಆದರೆ ಈವರೆಗೂ ಎಲ್ಲಾ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಭವಿಷ್ಯದ ಬಗ್ಗೆ ಚಿಂತನೆ ಮಾಡಿದಾಗ ಭಯಾನಕ ಎನ್ನಿಸುತ್ತದೆ. ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ನಿರಾಶ್ರಿತರ ಜಿಲ್ಲೆಯಾದರೂ ಆಶ್ಚರ್ಯವಿಲ್ಲ. ಅರಣ್ಯ ಅತಿಕ್ರಮಣದಾರರ ಬಗ್ಗೆ ಚಿಂತನೆ ಆಗುವುದು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ. ಅರಣ್ಯ ಸಚಿವರಿಗೆ ಅರಣ್ಯದ ಬಗ್ಗೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿವೇ ಇರುವುದಿಲ್ಲ.‌ ಇಂತವರಿಂದ ನ್ಯಾಯ ಕೊಡಿಸಲು ಸಾಧ್ಯವೇ? ಅರಣ್ಯ ವಾಸಿಗಳ ಸಹನೆಯ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದರು.

ಬರಹಗಾರ್ತಿ ವಿಜಯನಳಿನಿ ರಮೇಶ್ ಆಶಯ ನುಡಿಗಳನ್ನಾಡಿದರು. ಹಿರಿಯ ಸಾಹಿತಿ ಆರ್.‌ಜಿ.ಗುಂದಿ ಅಂಕೋಲಾ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಆರ್.ಡಿ.ಹೆಗಡೆ ಆಲ್ಮನೆ, ಸಾಂತ್ವನ ಮಹಿಳಾ ವೇದಿಕೆಯ ಜ್ಯೋತಿ ಭಟ್, ಪತ್ರಕರ್ತ ನಾಗರಾಜ ಮತ್ತೀಗಾರ, ನಿಲೇಕಣಿ ಕಾಲೇಜು ಪ್ರಾಚಾರ್ಯ ನರೇಂದ್ರ ನಾಯ್ಕ, ಲಿಂಗಯ್ಯ ಹಿರೇಮಠ ಸೇರಿ ಹಲವರು ಇದ್ದರು.
ಸುಬ್ರಹ್ಮಣ್ಯ ಭಟ್ ಯಲ್ಲಾಪುರ ಸ್ವಾಗತಿಸಿದರು. ಸಿದ್ದಪ್ಪ ಬಿರಾದಾರ ಹಳಿಯಾಳ ನಿರೂಪಿಸಿದರು. ಸೀತಾ ದಾನಗೇರಿ ವಂದಿಸಿದರು.

Cut-off box - ‘ಬೇಕಿದೆ ಸುಸಜ್ಜಿತ ರಂಗಮಂದಿರ’ ರಂಗಭೂಮಿ ಯಕ್ಷಗಾನ ಕಲೆ ಕಲಾವಿದರ ಪಾಡು ವಿಚಾರ ಗೋಷ್ಠಿಯಲ್ಲಿ ರಂಗ ನಿರ್ದೇಶಕ ಕಿರಣ ಭಟ್ ಮಾತನಾಡಿ ‘ಕೊರೊನಾ ಬಂದಾಗ ದೊಡ್ಡ ಆಘಾತವಾಗಿದ್ದು ಕಲಾವಿದರಿಗೆ. ಯಾವುದೇ ಕಾರ್ಯಕ್ರಮಗಳಿಲ್ಲದೇ ಆರ್ಥಿಕವಾಗಿ ಮಾನಸಿಕವಾಗಿ ಕಲಾವಿದರು ಬಹಳ ನೊಂದಿದ್ದರು. ನಂತರದ ದಿನಗಳಲ್ಲಿ ಎಲ್ಲವನ್ನೂ ಕೊಡವಿ ನಮ್ಮ ಜಿಲ್ಲೆಯ ಕಲಾವಿದರು ಮೇಲೆದ್ದಿದ್ದಾರೆ‌. ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ‌ಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ಮರಾಠಿ ರಂಗಭೂಮಿ ಹುಟ್ಟಿಕೊಳ್ಳಲು ಯಕ್ಷಗಾನ ಕಾರಣವಾಗಿದೆ. ಯಕ್ಷಗಾನ ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿಯ ಮೇಲೆ ನೇರ ಪರಿಣಾಮವನ್ನು ಬೀರುತ್ತಾ ಬಂದಿದೆ’ ಎಂದರು. ‘ಸುಸಜ್ಜಿತವಾದ ರಂಗಮಂದಿರ ಕಲಾವಿದರಿಗೆ ಸಿಕ್ಕಿದರೆ ಕಲಾವಿದರು ಉತ್ತಮ ಪ್ರಯೋಗಗಳನ್ನು ಮಾಡುತ್ತಾರೆ‌. ಇದರಿಂದ ರಂಗಭೂಮಿ ಬೆಳೆಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸ ಪರಂಪರೆಗಳಿವೆ. ಯಕ್ಷಗಾನಕ್ಕೆ ಮಹಿಳೆಯರ ಪ್ರವೇಶವಾಗಿದೆ. ಮಕ್ಕಳಿಗೂ ಯಕ್ಷಗಾನ ಕಲಿಸುವ ಮೂಲಕ ಕಲೆ  ಬೆಳೆಸುವ ಕೆಲಸವಾಗುತ್ತಿದೆ‌’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.